ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪಾ ಅಮೆರಿಕ: ಆರ್ಜೆಂಟಿನಾಗೆ ಪ್ರಶಸ್ತಿ; ಸ್ಟಾರ್‌ ಆಟಗಾರನಿಗೆ ಮೆಚ್ಚುಗೆಯ ಮಹಾಪೂರ

ಗಾಯಾಳಾಗಿ ಫೈನಲ್‌ ಆಡಿದ್ದ ಮೆಸ್ಸಿ: ಕೋಚ್‌ ಸ್ಕ್ಯಾಲೊನಿ
ಫಾಲೋ ಮಾಡಿ
Comments

ರಿಯೊ ಡಿ ಜನೈರೊ: ಆರ್ಜೆಂಟಿನಾ ಕೋಚ್‌ ಲಯೊನೆಲ್‌ ಸ್ಕ್ಯಾಲೊನಿ ಅವರು ತಂಡದ ಸ್ಟಾರ್‌ ಆಟಗಾರ ಲಯೊನೆಲ್‌ ಮೆಸ್ಸಿ ಗುಣಗಾನ ಮಾಡಿದ್ದಾರೆ. ಅಷ್ಟೇ ಅಲ್ಲ, ಶನಿವಾರ ಅವರು ಬ್ರೆಜಿಲ್‌ ವಿರುದ್ಧದ ಕೊಪಾ ಅಮೆರಿಕ ಫೈನಲ್‌ ಪಂದ್ಯವನ್ನು ಗಾಯಾಳಾಗಿಯೇ ಆಡಿದ್ದರು ಎಂಬ ಮಾಹಿತಿಯನ್ನೂ ಹೊರಗೆಡವಿದ್ದಾರೆ.

‘ಅವರು ನೋವಿನ ನಡುವೆಯೂ ಆಡಿದ ರೀತಿ ತಿಳಿದುಕೊಂಡರೆ ಅವರ ಮೇಲಿನ ಪ್ರೀತಿ ಇಮ್ಮಡಿಸುತ್ತದೆ’ ಎಂದು ಮರಕಾನಾ ಸ್ಟೇಡಿಯಮ್‌ನಲ್ಲಿ ಬ್ರೆಜಿಲ್‌ ವಿರುದ್ಧ 1–0 ಗೋಲಿನಿಂದ ಗೆದ್ದ ನಂತರ ಸ್ಕ್ಯಾಲೊನಿ ಹೇಳಿದ್ದಾರೆ.

22ನೇ ನಿಮಿಷ ಆಂಗೆಲ್ ಡಿ ಮರಿಯಾ ಗಳಿಸಿದ ಗೋಲಿನಿಂದ ಆರ್ಜೆಂಟಿನಾ ತಂಡದ 28 ವರ್ಷಗಳ ಪ್ರಶಸ್ತಿ ಬರ ಕೊನೆಗೂ ಅಂತ್ಯಗೊಂಡಿತ್ತು. ಆರ್ಜೆಂಟಿನಾದಲ್ಲಿ ಅಪಾರ ಸಂಖ್ಯೆಯಲ್ಲಿ ಫುಟ್‌ಬಾಲ್‌ ಪ್ರಿಯರು ಬೀದಿಗಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. 2005 ರಲ್ಲಿ ಈ ಪ್ರತಿಭಾನ್ವಿತ ಆಟಗಾರ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ ಮೊದಲ ಬಾರಿ ಪ್ರಶಸ್ತಿಯ ಸಂಭ್ರಮ ಆಚರಿಸಿದಂತಾಗಿದೆ.

‘ಅಂಥ ಆಟಗಾರನಿಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಅದರಲ್ಲೂ ಅವರು ಈ ಪಂದ್ಯ ಮತ್ತು ಹಿಂದಿನ ಪಂದ್ಯದಲ್ಲಿ (ಸೆಮಿಫೈನಲ್‌) ಪೂರ್ಣವಾಗಿ ಫಿಟ್‌ ಆಗಿರಲಿಲ್ಲ’ ಎಂದು ಕೋಚ್‌ ಪ್ರಶಂಸೆ ಮಾಡಿದ್ದಾರೆ.

ಆದರೆ, 34 ವರ್ಷದ ಮೆಸ್ಸಿ ಅನುಭವಿಸಿದ ಗಾಯ ಅಥವಾ ನೋವು ಏನೆಂಬುದನ್ನು ಸ್ಕ್ಯಾಲೊನಿ ಹೇಳಲಿಲ್ಲ.

ದಾಖಲೆಯ ಆರು ವರ್ಷ ಫಿಫಾ ವರ್ಷದ ಆಟಗಾರ ಎನಿಸಿರುವ ಮೆಸ್ಸಿ, ಆಡಿದ ಕ್ಲಬ್‌, ಬಾರ್ಸಿಲೋನಾಕ್ಕೆ ಪ್ರಶಸ್ತಿಗಳ ಗೌರವ ಸಂಪಾದಿಸಿಕೊಟ್ಟಿದ್ದಾರೆ. ಆದರೆ ಪ್ರಮುಖ ನಾಲ್ಕು ಫೈನಲ್‌ಗಳಲ್ಲಿ ರಾಷ್ಟ್ರೀಯ ತಂಡವನ್ನು ಗೆಲ್ಲಿಸಲು ಸಾಧ್ಯವಾಗಿರಲಿಲ್ಲ. ಅವರು ಎಷ್ಟು ನಿರಾಸೆ ಅನುಭವಿಸಿದ್ದರೆಂದರೆ, 2016ರ ಕೊಪಾ ಅಮೆರಿಕ ಫೈನಲ್‌ನಲ್ಲಿ ಚಿಲಿ ಎದುರು ಸೋತಾಗ ಹತಾಶರಾಗಿ ನಿವೃತ್ತಿ ಘೋಷಿಸಿದ್ದರು. ಆದರೆ ಕೆಲ ವಾರಗಳ ನಂತರ ತಂಡಕ್ಕೆ ಮರಳಿದ್ದರು.

‘ಹಿನ್ನಡೆಗಳನ್ನು ಮೆಟ್ಟಿನಿಂತ ಮೆಸ್ಸಿ ಅಂತಿಮವಾಗಿ ಎದೆಗುಂದಲಿಲ್ಲ. ಯಶಸ್ಸೂ ಕಂಡರು’ ಎಂದು ಸ್ಕ್ಯಾಲೊನಿ ಹೇಳಿದ್ದಾರೆ.

‘ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಮೆಸ್ಸಿ. ರಾಷ್ಟ್ರೀಯ ತಂಡಕ್ಕೆ ಅವರು ಈ ಪ್ರಶಸ್ತಿ ಗೆಲ್ಲಿಸಿಕೊಡುವುದು ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದ್ದ ವಿಷಯವೇ ಆಗಿತ್ತು’ ಎಂದಿದ್ದಾರೆ.

ಆರ್ಜೆಂಟಿನಾ 1993ರಲ್ಲಿ ಕೊನೆಯ ಬಾರಿ ಕೊಪಾ ಅಮೆರಿಕ ಪ್ರಶಸ್ತಿ ಗೆದ್ದುಕೊಂಡಿತ್ತು,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT