ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಫ್‌ ಫುಟ್‌ಬಾಲ್‌| ಸೆಮಿಯಲ್ಲಿ ಎಡವಿದ ಬಾಂಗ್ಲಾದೇಶ: ಫೈನಲ್‌ ಪ್ರವೇಶಿಸಿದ ಕುವೈತ್‌

Published 1 ಜುಲೈ 2023, 18:35 IST
Last Updated 1 ಜುಲೈ 2023, 18:35 IST
ಅಕ್ಷರ ಗಾತ್ರ

ಬೆಂಗಳೂರು: ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಅಬ್ದುಲ್ಲಾ ಅಲ್‌ ಬಲೂಶಿ (105+2) ತಂದಿತ್ತ ಗೋಲಿನ ನೆರವಿನಿಂದ ಕುವೈತ್‌ ತಂಡ, ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಫೈನಲ್‌ ಪ್ರವೇಶಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಸೆಮಿಫೈನಲ್‌ನಲ್ಲಿ ಕುವೈತ್‌ 1–0 ಗೋಲಿನಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿತು. ಫಿಫಾ ರ್‍ಯಾಂಕಿಂಗ್‌ನಲ್ಲಿ ತನಗಿಂತ 51 ಸ್ಥಾನಗಳಷ್ಟು ಮೇಲಿನ ಸ್ಥಾನದಲ್ಲಿರುವ ತಂಡಕ್ಕೆ ಪ್ರಬಲ ಪೈಪೋಟಿ ಒಡ್ಡಲು ಬಾಂಗ್ಲಾದೇಶ ಯಶಸ್ವಿಯಾಯಿತು.

ನಿಗದಿತ 90 ನಿಮಿಷಗಳ ಆಟದಲ್ಲಿ ಗೋಲು ದಾಖಲಾಗದ ಕಾರಣ, ಪಂದ್ಯ ಹೆಚ್ಚುವರಿ ಅವಧಿಗೆ ಸಾಗಿತು. ಅಲ್‌ ಬಲೂಶಿ ಅವರು ಗೆಲುವಿನ ಗೋಲು ಗಳಿಸಿದರು. ಜುಲೈ 4 ರಂದು ನಡೆಯಲಿರುವ ಫೈನಲ್‌ನಲ್ಲಿ ಕುವೈತ್‌ ತಂಡ, ಭಾರತ ಅಥವಾ ಲೆಬನಾನ್‌ ತಂಡದ ಸವಾಲು ಎದುರಿಸಲಿದೆ.

ಎರಡೂ ತಂಡಗಳು ಗೋಲು ಗಳಿಸಲು ಲಭಿಸಿದ ಸಾಕಷ್ಟು ಅವಕಾಶಗಳನ್ನು ಹಾಳುಮಾಡಿಕೊಂಡಿತು. ಇದರಿಂದಾಗಿ ಪಂದ್ಯ ಹೆಚ್ಚುವರಿ ಅವಧಿಗೆ ಮುನ್ನಡೆಯಿತು.

ಎರಡನೇ ನಿಮಿಷದಲ್ಲಿ ಬಾಂಗ್ಲಾ ತಂಡದ ಶೇಖ್‌ ಮೊರ್ಸಲೀನ್ ಅವರಿಗೆ ಸುಲಭ ಅವಕಾಶ ಲಭಿಸಿದರೂ, ಚೆಂಡನ್ನು ಗುರಿ ಸೇರಿಸಲು ವಿಫಲರಾದರು. ಕುವೈತ್‌ ಗೋಲ್‌ಕೀಪರ್‌ ಅನೀಸ್‌ ಉರ್‌ ರೆಹಮಾನ್‌ ಮಾತ್ರ ಮುಂದಿದ್ದರೂ, ಅವರನ್ನು ತಪ್ಪಿಸಲು ಆಗಲಿಲ್ಲ. ಚೆಂಡನ್ನು ನೇರವಾಗಿ ಅವರತ್ತ ಒದ್ದರು.

ಇದಾದ ಕೆಲವು ನಿಮಿಷಗಳ ಬಳಿಕ ಕುವೈತ್‌ ತಂಡದ ಮೊಬಾರಕ್‌ ಅಲ್‌ ಫನೀನಿ ಅವರು ಗುರಿಯತ್ತ ಚೆಂಡನ್ನು ಹೆಡ್‌ ಮಾಡಿದರಾದರೂ, ಬಾಂಗ್ಲಾ ಡಿಫೆಂಡರ್‌ ಅದನ್ನು ತಡೆದರು.

ಬಾಂಗ್ಲಾ ತಂಡದ ಅನುಭವಿ ಆಟಗಾರ ರಕೀಬ್‌ ಹೊಸೇನ್‌ ಅವರು ಎದುರಾಳಿ ಗೋಲು ವಲಯಕ್ಕೆ ಹಲವು ಸಲ ಚೆಂಡಿನೊಂದಿಗೆ ಮುನ್ನುಗ್ಗಲು ಯಶಸ್ವಿಯಾದರು. ಎರಡನೇ ಅವಧಿಯ ಆರಂಭದಲ್ಲಿ ಮತ್ತು 61ನೇ ನಿಮಿಷದಲ್ಲಿ ರಕೀಬ್ ಅವರು ಚೆಂಡನ್ನು ಗುರಿಯತ್ತ ಒದ್ದರೂ, ಗೋಲ್‌ಕೀಪರ್‌ ತಡೆದರು.

ಪಂದ್ಯ ಇನ್ನೇನು ಪೆನಾಲ್ಟಿ ಶೂಟೌಟ್‌ಗೆ ಸಾಗಲಿದೆ ಎನ್ನುವಷ್ಟರಲ್ಲಿ ಅಲ್‌ ಬಲೂಶಿ ಗೆಲುವಿನ ಗೋಲು ಹೊಡೆದರು. ಅಹ್ಮದ್‌ ಅಲ್‌ ದೆಫೀರಿ ಅವರ ಚಾಣಾಕ್ಷ ಪಾಸ್‌ನಿಂದ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಬಲೂಶಿ ಗುರಿ ಸೇರಿಸಿದರು.

ಕೊನೆಯ 15 ನಿಮಿಷಗಳ ಆಟದಲ್ಲಿ ಬಾಂಗ್ಲಾ ತಂಡ ಸಮಬಲದ ಗೋಲಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿತು. ಪಂದ್ಯದ ಕಾವು ಹೆಚ್ಚಿದ್ದರಿಂದ ಉಭಯ ತಂಡಗಳ ಆಟಗಾರರು ಮಾತಿನ ಚಕಮಕಿ ನಡೆಸಿದರು. ಬಾಂಗ್ಲಾ ಆಟಗಾರರು ರೆಫರಿ ಜತೆಯೂ ವಾಗ್ವಾದ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT