ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಐಎಸ್‌ಎಲ್ ಕಿರೀಟ ಯಾರ ಮುಡಿಗೆ?

ಬೆಂಗಳೂರು ಎಫ್‌ಸಿ–ಎಟಿಕೆ ಮೋಹನ್‌ ಬಾಗನ್‌ ಫೈನಲ್‌ ಇಂದು
Last Updated 17 ಮಾರ್ಚ್ 2023, 22:21 IST
ಅಕ್ಷರ ಗಾತ್ರ

ಗೋವಾ: ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಎಫ್‌ಸಿ ತಂಡ, ಇಂಡಿಯನ್‌ ಸೂಪರ್ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಎಟಿಕೆ ಮೋಹನ್‌ ಬಾಗನ್‌ ತಂಡವನ್ನು ಎದುರಿಸಲಿದೆ.

ಇಲ್ಲಿನ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದ್ದು, ಫುಟ್‌ಬಾಲ್‌ ಅಭಿಮಾನಿಗಳ ಕಾತರ ಹೆಚ್ಚಿದೆ.

ಲೀಗ್‌ನ ಆರಂಭದಲ್ಲಿ ನೀರಸ ಪ್ರದರ್ಶನ ನೀಡಿದ್ದ ಬೆಂಗಳೂರಿನ ತಂಡ ಆ ಬಳಿಕ ಸತತ ಹತ್ತು ಪಂದ್ಯಗಳನ್ನು ಗೆದ್ದು ಫೈನಲ್‌ನಲ್ಲಿ ಸ್ಥಾನ ಪಡೆದಿದೆ. ಇದೀಗ ಮಿರುಗುವ ಟ್ರೋಫಿ ಎತ್ತಿಹಿಡಿದು ತನ್ನ ಗೆಲುವಿನ ಓಟವನ್ನು ಯಶಸ್ಸಿನೊಂದಿಗೆ ಕೊನೆಗೊಳಿಸುವ ತವಕದಲ್ಲಿದೆ.

ಬಿಎಸ್‌ಫಿ ತಂಡ ಸೆಮಿಫೈನಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಮಣಿಸಿದ್ದರೆ, ಬಾಗನ್‌ ತಂಡ ಕಳೆದ ಬಾರಿಯ ಚಾಂಪಿಯನ್‌ ಹೈದರಾಬಾದ್‌ ಎಫ್‌ಸಿ ವಿರುದ್ಧ ಗೆದ್ದಿತ್ತು. ಎರಡೂ ಪಂದ್ಯಗಳು ಪೆನಾಲ್ಟಿ ಶೂಟೌಟ್‌ನಲ್ಲಿ ಕೊನೆಗೊಂಡಿದ್ದವು.

ಐಎಸ್‌ಎಲ್‌ನಲ್ಲಿ 2017–18 ರಲ್ಲಿ ರನ್ನರ್ಸ್‌ ಅಪ್‌ ಆಗಿದ್ದ ಬಿಎಫ್‌ಸಿ, 2018–19 ರಲ್ಲಿ ಚಾಂಪಿಯನ್‌ ಆಗಿತ್ತು. ಇದೀಗ ಮೂರು ಋತುಗಳ ಬಿಡುವಿನ ಬಳಿಕ ಕಿರೀಟ ಮರಳಿ ಪಡೆಯುವ ಪ್ರಯತ್ನದಲ್ಲಿದೆ. ಮೂರು ಸಲ ಟ್ರೋಫಿ ಜಯಿಸಿರುವ ಎಟಿಕೆ, 2021ರಲ್ಲಿ ರನ್ನರ್ಸ್‌ ಅಪ್‌ ಅಗಿತ್ತು.

ಬಿಎಫ್‌ಸಿಯ ಶಕ್ತಿ ಎನಿಸಿರುವ ಅನುಭವಿ ಸುನಿಲ್‌ ಚೆಟ್ರಿ ಅಲ್ಲದೆ ಜಾವಿ ಹೆರ್ನಾಂಡೆಜ್‌, ರಾಯ್‌ ಕೃಷ್ಣ ಮತ್ತು ಶಿವಶಕ್ತಿ ನಾರಾಯಣನ್‌ ಅವರು ಫೈನಲ್‌ನಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ. ಮಿಡ್‌ಫೀಲ್ಡರ್‌ ಜಾವಿ ಅವರು ಈ ಋತುವಿನುದ್ದಕ್ಕೂ ಅತ್ಯುತ್ತಮ ಆಟವಾಡಿದ್ದಾರೆ.

ಬಾಗನ್‌ ತಂಡವು ತನ್ನ ಸ್ಟ್ರೈಕ ರ್‌ಗಳಾದ ಹ್ಯೂಗೊ ಬೊಮೌಸ್, ದಿಮಿತ್ರಿ ಪೆಟ್ರಟೊಸ್‌ ಮತ್ತು ಫೆಡೆರಿಕೊ ಗಲೆಗೊ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಏಕಾಂಗಿ ಹೋರಾಟದ ಮೂಲಕ ಪಂದ್ಯದ ಗತಿಯನ್ನು ಬದಲಿಸಬಲ್ಲ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆ.

‘ಬಿಎಫ್‌ಸಿ –ಎಟಿಕೆಎಂಬಿ ತಂಡಗಳ ನಡುವಣ ಈ ಹಿಂದಿನ ಪಂದ್ಯಗಳ ಫಲಿತಾಂಶಗಳ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಫೈನಲ್‌ ಪಂದ್ಯ ಗೆದ್ದು ಟ್ರೋಫಿ ಎತ್ತಿಹಿಡಿಯುವುದು ನಮ್ಮ ಗುರಿ’ ಎಂದು ಚೆಟ್ರಿ ಹೇಳಿದ್ದಾರೆ.

ಬಿಎಫ್‌ಸಿ ತಂಡ ಶನಿವಾರ ಗೆದ್ದರೆ ಎಟಿಕೆ ಮೋಹನ್‌ ಬಾಗನ್‌ ಮತ್ತು ಚೆನ್ನೈಯಿನ್ ಎಫ್‌ಸಿ ಬಳಿಕ ಒಂದಕ್ಕಿಂತ ಹೆಚ್ಚು ಬಾರಿ ಐಎಸ್‌ಎಲ್‌ ಟ್ರೋಫಿ ಗೆದ್ದ ಮೂರನೇ ತಂಡ ಎನಿಸಿಕೊಳ್ಳಲಿದೆ.

ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT