‘ನಮ್ಮಿಂದ ಎಲ್ಲವನ್ನೂ ಈ ಗಲಭೆಯು ಕಸಿದುಕೊಂಡಿದೆ. ಜೀವನದಲ್ಲಿ ಗಳಿಸಿದ್ದೆಲ್ಲವೂ ನಾಶವಾಗಿದೆ. ಮಣಿಪುರದ ಚುರಚಂದಾಪುರದಲ್ಲಿ ನಾನು ಕಟ್ಟಿಸಿದ್ದ ಮನೆಗೆ ಬೆಂಕಿ ಇಡಲಾಗಿದೆ. ನಾನೇ ನಿರ್ಮಿಸಿಕೊಟ್ಟಿದ್ದ ಫುಟ್‌ಬಾಲ್ ಹುಲ್ಲಿನಂಕಣವನ್ನೂ ಸುಟ್ಟುಹಾಕಲಾಗಿದೆ ಎಂಬ ಸುದ್ದಿಗಳು ಬಂದಿವೆ. ಇದರಿಂದಾಗಿ ನನಗೆ ಅಪಾರ ನೋವಾಗಿದೆ. ನನ್ನೂರಿನ ಮತ್ತು ಸುತ್ತಮುತ್ತಲಿನ ಯುವ ಪ್ರತಿಭೆಗಳಿಗೆ ಆಡಲು ಸೌಲಭ್ಯ ರೂಪಿಸುವ ಕನಸಾಗಿತ್ತು ಅದು. ಆದರೆ ಈಗ ಕನಸು ನುಚ್ಚುನೂರಾಗಿದೆ. ಅದೃಷ್ಟವಶಾತ್ ನನ್ನ ಕುಟುಂಬವು ಅಪಾಯದಿಂದ ಪಾರಾಗಿದೆ. ಅವರೆಲ್ಲರನ್ನೂ ನಿರಾಶ್ರಿತರ ಕೇಂದ್ರಕ್ಕೆ ಸೇರಿಸಲಾಗಿದೆ‘ ಎಂದು ಭಾರತ ಫುಟ್‌ಬಾಲ್ ತಂಡದ ಪ್ರಮುಖ ಆಟಗಾರರಾಗಿರುವ ಸಿಂಗ್ ಹೇಳಿದರು.