ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಫುಟ್‌ಬಾಲ್: ‘ಗೋಲು‘ ಸಾಧಿಸುವ ಸವಾಲು

ಕರ್ನಾಟಕದಲ್ಲಿ ಆರು ತಿಂಗಳ ಹಿಂದೆಯೇ ಮಹಿಳಾ ತಂಡ ಕಡ್ಡಾಯಗೊಳಿಸಿದ ಕೆಎಸ್‌ಎಫ್‌ಎ; ಬೆಂಗಳೂರು, ಬೆಳಗಾವಿ, ಮಂಗಳೂರು ‘ಹಬ್’
Last Updated 6 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ ಮಹಿಳಾ ಫುಟ್‌ಬಾಲ್‌ಗೆ ಚೇತನ ತುಂಬುವ ಪ್ರಯತ್ನದ ಅಂಗವಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ದೇಶದ ಪ್ರತಿಯೊಂದು ಕ್ಲಬ್ ಕೂಡ ಕಡ್ಡಾಯವಾಗಿ ಮಹಿಳಾ ತಂಡವನ್ನು ಹೊಂದಿರಬೇಕು ಎಂದು ಕಳೆದ ತಿಂಗಳಲ್ಲಿ ಸೂಚಿಸಿದೆ. ಭಾರತ ಫುಟ್‌ಬಾಲ್‌ನಲ್ಲಿ ‘ಮಹಿಳಾ ಸಬಲೀಕರಣ’ದ ದೃಷ್ಟಿಯಿಂದ ಇದನ್ನು ಮಹತ್ವದ ಹೆಜ್ಜೆ ಎಂದೇ ಪರಿಗಣಿಸಲಾಗಿದೆ. ಆದರೆ ದೇಶದ ಹೆಚ್ಚಿನ ಭಾಗಗಳಲ್ಲಿ ಮಹಿಳಾ ಫುಟ್‌ಬಾಲ್‌ ಇನ್ನೂ ಪ್ರವರ್ಧಮಾನಕ್ಕೆ ಬಾರದೇ ಇರುವುದರಿಂದ ಈ ಆದೇಶದ ಸಾಧಕ–ಬಾಧಕಗಳ ಬಗ್ಗೆ ಈಗ ಫುಟ್‌ಬಾಲ್ ವಲಯದಲ್ಲಿ ಚರ್ಚೆ ಕಾವು ಪಡೆದುಕೊಂಡಿದೆ. ಒತ್ತಡ ಹೇರುವುದಕ್ಕಿಂತ, ಕ್ಲಬ್‌ಗಳೇ ನಿರ್ಧಾರ ಕೈಗೊಳ್ಳುವಂತೆ ಮಾಡುವುದು ಒಳಿತು ಎಂಬ ಅಭಿಪ್ರಾಯವಿದೆ. ಮಹಿಳಾ ತಂಡಗಳ ನಡುವೆ ಆರೋಗ್ಯಕರ ಸ್ಪರ್ಧೆ ಬೆಳೆಯಲು ಇದು ನೆರವಾಗಲಿದೆ ಎಂಬ ಮಾತೂ ಕೇಳಿಬರುತ್ತಿದೆ.

ಭಾರತದಲ್ಲಿ ಈಶಾನ್ಯ ಪ್ರದೇಶಗಳು, ಪಂಜಾಬ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಮುಂತಾದ ರಾಜ್ಯಗಳನ್ನು ಬಿಟ್ಟರೆ ಉಳಿದ ಕಡೆಗಳಲ್ಲಿ ಮಹಿಳಾ ಫುಟ್‌ಬಾಲ್‌ ಬೆಳವಣಿಗೆ ಅಷ್ಟಕ್ಕಷ್ಟೆ. ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ ಮತ್ತು ಮಂಗಳೂರು ನಗರಗಳು ಮಹಿಳಾ ಫುಟ್‌ಬಾಲ್‌ನ ಕೇಂದ್ರಗಳಾಗಿ ಬೆಳೆದಿವೆ. ಉಳಿದ ಕಡೆಗಳಲ್ಲಿ ಈಗ, ಎರಡು ವರ್ಷಗಳಿಂದ ಮಹಿಳಾ ತಂಡಗಳು ಬೆಳಕಿಗೆ ಬರುತ್ತಿವೆ. 500ಕ್ಕೂ ಹೆಚ್ಚು ಫುಟ್‌ಬಾಲ್ ಕ್ಲಬ್‌ಗಳನ್ನು ಹೊಂದಿರುವ ರಾಜ್ಯದಲ್ಲಿ ಮಹಿಳಾ ತಂಡಗಳನ್ನು ಹೊಂದಿರುವುದು 40 ಕ್ಲಬ್‌ಗಳು ಮಾತ್ರ. ಎಐಎಫ್ಎಫ್‌ನ ಆದೇಶ ಪಾಲನೆಗಾಗಿ ಹಣ ಹೂಡಿ ಆರ್ಥಿಕ ಹೊರೆ ಅನುಭವಿಸುವ ಅಗತ್ಯವೇನಿದೆ ಎಂಬ ಪ್ರಶ್ನೆಯೂ ಕೇಳಿಬರುತ್ತಿರುವುದರಿಂದ ಮಹಿಳಾ ತಂಡಗಳ ಕಡ್ಡಾಯ ಸೇರ್ಪಡೆ ಸವಾಲಾಗಿಯೇ ಉಳಿಯುವುದೇ ಎಂಬ ಪ್ರಶ್ನೆಯೂ ಎದ್ದಿದೆ.

ಆರು ತಿಂಗಳ ಹಿಂದೆಯೇ ಹೊರಟ ಆದೇಶ:

ಎಐಎಫ್‌ಎಫ್‌ ಸೂಚನೆ ನೀಡುವುದಕ್ಕೆ ಮೊದಲೇ ಕರ್ನಾಟಕದಲ್ಲಿ ಕ್ಲಬ್‌ಗಳು ಕಡ್ಡಾಯವಾಗಿ ಮಹಿಳಾ ತಂಡ ಹೊಂದಿರಬೇಕು ಎಂದು ತಿಳಿಸಲಾಗಿತ್ತು ಎನ್ನುತ್ತಾರೆ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣ.

‘ಐಎಸ್‌ಎಲ್‌, ಐ–ಲೀಗ್‌ನಂಥ ಪ್ರಮುಖ ಟೂರ್ನಿಗಳಲ್ಲಿ ಮಹಿಳಾ ತಂಡಗಳಿಗೆ ಅವಕಾಶವಿಲ್ಲ. ಐಎಸ್‌ಎಲ್‌ನಲ್ಲಿ ಆಡುವ ಪ್ರಮುಖ ಕ್ಲಬ್‌ಗಳು ಮಹಿಳಾ ತಂಡಗಳನ್ನು ಹೊಂದಿಲ್ಲ. ಇಂಥ ಪರಿಸ್ಥಿತಿಯಲ್ಲಿ, ಮಹಿಳಾ ತಂಡಗಳನ್ನು ಎಐಎಫ್ಎಫ್ ಕಡ್ಡಾಯಗೊಳಿಸಿದ್ದು ಒಳ್ಳೆಯ ನಿರ್ಧಾರ. ಮಹಿಳಾ ತಂಡ ಇಲ್ಲದಿದ್ದರೆ ಪುರುಷರ ತಂಡಕ್ಕೆ ಪ್ರಮುಖ ಟೂರ್ನಿಗಳಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂದು ರಾಜ್ಯದ ಕ್ಲಬ್‌ಗಳಿಗೆ ಆರು ತಿಂಗಳ ಹಿಂದೆಯೇ ತಾಕೀತು ಮಾಡಲಾಗಿದೆ. ಮೊದಲ ಘಟ್ಟದಲ್ಲಿ ಪೂರ್ಣ ಪ್ರಮಾಣದ ತಂಡ ಇಲ್ಲದಿದ್ದರೂ ಸೆವೆನ್–ಎ ಸೈಡ್ ಆದರೂ ಇರಲಿ ಎಂದು ತಿಳಿಸಲಾಗಿದೆ. ಇದಕ್ಕೆ ಉತ್ತಮ ಸ್ಪಂದನೆ ಲಭಿಸಿದೆ. ಕೆಲವು ತಿಂಗಳ ಹಿಂದೆ ಬೆರಳೆಣಿಕೆಯಷ್ಟೂ ಇಲ್ಲದಿದ್ದ ತಂಡಗಳ ಸಂಖ್ಯೆ ಈಗ 40ಕ್ಕೆ ಏರಿದೆ. ಬೆಂಗಳೂರು ನಗರವೊಂದರಲ್ಲೇ 20ರಷ್ಟು ಮಹಿಳಾ ತಂಡಗಳು ಇವೆ. ಬೆಳಗಾವಿ, ಮಂಗಳೂರು, ಕೊಡಗು, ಹಳಿಯಾಳ ಮುಂತಾದ ಕಡೆಗಳಲ್ಲಿ ಮಹಿಳಾ ಫುಟ್‌ಬಾಲ್ ಬಲಿಷ್ಠವಾಗಿ ಬೆಳೆಯುತ್ತಿದೆ’ ಎಂದು ಸತ್ಯನಾರಾಯಣ ವಿವರಿಸಿದರು.

‘ರಾಜ್ಯದಲ್ಲಿ ಮಹಿಳೆಯರಿಗಾಗಿ ಸೂಪರ್ ಡಿವಿಷನ್‌ ಮತ್ತು ‘ಎ’ ಡಿವಿಷನ್‌ನಲ್ಲಿ ಲೀಗ್‌ಗಳನ್ನು ಆಯೋಜಿಸಲಾಗುತ್ತಿದೆ. ಖೇಲೊ ಇಂಡಿಯಾ 17 ವರ್ಷದೊಳಗಿನವರ ಫುಟ್‌ಬಾಲ್ ಟೂರ್ನಿಯಲ್ಲಿ ಅನೇಕ ತಂಡಗಳು ಪಾಲ್ಗೊಂಡಿದ್ದವು. ಕರ್ನಾಟಕ ಒಲಿಂಪಿಕ್ ಸಂಸ್ಥೆ ಆಯೋಜಿಸಿದ್ದ ಮಿನಿ ಒಲಿಂಪಿಕ್ಸ್‌ನಲ್ಲಿ 14 ವರ್ಷದೊಳಗಿನವರ ಆರು ತಂಡಗಳು ಭಾಗವಹಿಸಿದ್ದವು. ಕಳೆದ ಬಾರಿ ಮಹಿಳೆಯರಿಗಾಗಿಯೇ ರಾಜ್ಯದಲ್ಲಿ ಪ್ರಮುಖ ಮೂರು ಟೂರ್ನಿಗಳನ್ನು ನಡೆಸಲಾಗಿದೆ. ಇದೆಲ್ಲವೂ ಮಹಿಳೆಯರ ತಂಡಗಳು ಆರಂಭವಾಗಲು ಪೂರಕ ವಾತಾವರಣ ನಿರ್ಮಿಸಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಈಶಾನ್ಯ ರಾಜ್ಯಗಳ ಪಾರಮ್ಯ

ಭಾರತ ಪುರುಷರ ತಂಡದಂತೆಯೇ ಮಹಿಳಾ ತಂಡದಲ್ಲೂ ಹೆಚ್ಚಿನವರು ಈಶಾನ್ಯ ರಾಜ್ಯಗಳ ಆಟಗಾರ್ತಿಯರು. ಅದರಲ್ಲೂ ಬಹುಪಾಲು ಮಣಿಪುರದ್ದು. ಸಿಕ್ಕಿಂ, ಬಿಹಾರ, ಒಡಿಶಾ, ಪಂಜಾಬ್ ಮತ್ತು ಮಹಾರಾಷ್ಟ್ರದವರೂ ಇದ್ದಾರೆ. ಆದರೆ ದಕ್ಷಿಣ ಭಾರತದವರ ಸಂಖ್ಯೆ ತೀರಾ ಕಡಿಮೆ. ರಾಷ್ಟ್ರೀಯ ತಂಡದ ಮೂವರು ಗೋಲ್‌ಕೀಪರ್‌ಗಳ ಪೈಕಿ ಇಬ್ಬರು ಮಣಿದವರು. ಡಿಫೆಂಡಿಂಗ್ ವಿಭಾಗದ ಆರು ಮಂದಿಯಲ್ಲಿ ಮೂವರು ಮಣಿಪುರದವರು. ಏಳು ಫಾರ್ವರ್ಡ್ ಆಟಗಾರ್ತಿಯರ ಪೈಕಿ ನಾಲ್ವರು ಮಣಿಪುರದವರು ಮತ್ತು ಒಬ್ಬರು ಸಿಕ್ಕಿಂನವರು.ಈಶಾನ್ಯ ಮತ್ತು ಉತ್ತರ–ಮಧ್ಯ ಭಾರತದ ಅನೇಕರು ದಕ್ಷಿಣ ರಾಜ್ಯಗಳ ಕೆಲವು ಕ್ಲಬ್‌ಗಳಲ್ಲಿ ಆಡುತ್ತಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಈಚೆಗೆ ಮಹಿಳಾ ಫುಟ್‌ಬಾಲ್‌ಗೆ ಸರಿಯಾದ ಬೆಂಬಲ ಸಿಗುತ್ತಿಲ್ಲ ಎಂಬ ಬೇಸರದಿಂದ ಬಾಕ್ಸಿಂಗ್, ಟೇಕ್ವಾಂಡೊ, ಹಾಕಿ ಮುಂತಾದ ಕ್ರೀಡೆಗಳತ್ತ ಆಟಗಾರ್ತಿಯರು ಮುಖ ಮಾಡುತ್ತಿದ್ದಾರೆ ಎಂಬ ದೂರುಗಳೂ ಕೇಳಿಬಂದಿವೆ.

* ಬೆಂಗಳೂರು ಬಿಟ್ಟರೆ ರಾಜ್ಯಕ್ಕೆ ಹೆಚ್ಚು ಮಹಿಳಾ ಫುಟ್‌ಬಾಲ್‌ ಪಟುಗಳನ್ನು ಕಾಣಿಕೆಯಾಗಿ ನೀಡಿದ್ದು ಬೆಳಗಾವಿ. 2018ರಲ್ಲಿ ಅಂಜಲಿ ಹಿಂಡಲಗಕರ್ ರಾಜ್ಯ ತಂಡ ಪ್ರತಿನಿಧಿಸಿದರು. ಕಳೆದ ವರ್ಷ ಅಂಜಲಿ ಜೊತೆಯಲ್ಲಿ ಅಕ್ಷತಾ ಚೌಗಲೆ ಮತ್ತು ಪ್ರಿಯಾಂಕ ಕಂಗ್ರಾಲ್ಕರ್ ಕೂಡ ಸ್ಥಾನ ಪಡೆದರು. ರಾಷ್ಟ್ರೀಯ ಮಹಿಳಾ ಲೀಗ್‌ನಲ್ಲಿ ಪಾಲ್ಗೊಂಡ ಬೆಂಗಳೂರಿನ ಕಿಕ್‌ಸ್ಟಾರ್ಟ್ ಮತ್ತು ಬೆಂಗಳೂರು ಯುನೈಟೆಡ್ ಫುಟ್‌ಬಾಲ್‌ ಕ್ಲಬ್‌ಗಳಲ್ಲಿ ಬೆಳಗಾವಿಯ ಒಟ್ಟು ನಾಲ್ವರು ಆಡಿದ್ದಾರೆ. 14 ವರ್ಷದೊಳಗಿನವರ ವಿಭಾಗದ ರಾಷ್ಟ್ರೀಯ ಟೂರ್ನಿಯಲ್ಲಿ ಈ ಬಾರಿ ರಾಜ್ಯವನ್ನು ಪ್ರತಿನಿಧಿಸಿದ್ದು ಬೆಳಗಾವಿ ತಂಡ. ಎರಡು ವರ್ಷಗಳಿಂದ ರಾಜ್ಯದಲ್ಲಿ ಮಹಿಳಾ ಫುಟ್‌ಬಾಲ್‌ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಬೆಂಗಳೂರು ಬಿಟ್ಟರೆ ಬೆಳಗಾವಿ ಮತ್ತು ಮಂಗಳೂರಿನಲ್ಲಿ ಮಹಿಳಾ ಫುಟ್‌ಬಾಲ್ ಆಟಗಾರ್ತಿಯರು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದಾರೆ.

-ಮಟೀನ್ ಇನಾಮ್ದಾರ್, ಬೆಳಗಾವಿ ಮಹಿಳಾ ಎಫ್‌ಸಿ ಕೋಚ್

* ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಫುಟ್‌ಬಾಲ್ ಬೆಳವಣಿಗೆಗೆ ಪ್ರಯತ್ನಿಸುತ್ತಿರುವ ಕಣ್ಣೂರು ಸ್ಪೋರ್ಟ್ಸ್ ಅಕಾಡೆಮಿಯವರು ಮಹಿಳಾ ಫುಟ್‌ಬಾಲ್‌ಗೂ ಆದ್ಯತೆ ನೀಡುತ್ತಿದ್ದಾರೆ. ಹುಬ್ಬಳ್ಳಿ–ಧಾರವಾಡದಲ್ಲಿ ಹೆಣ್ಣುಮಕ್ಕಳನ್ನು ಹೆಚ್ಚಾಗಿ ಫುಟ್‌ಬಾಲ್‌ಗೆ ಕಳುಹಿಸುತ್ತಿಲ್ಲ. ಹಾವೇರಿ ಮತ್ತು ಗದಗ ಜಿಲ್ಲೆಯಲ್ಲಿ ಮಹಿಳಾ ಫುಟ್‌ಬಾಲ್ ಬೆಳೆಯುತ್ತಿದೆ. ಆದ್ದರಿಂದ ಇಲ್ಲಿನ ಕ್ಲಬ್‌ಗಳಲ್ಲಿ ಮಹಿಳಾ ತಂಡಗಳನ್ನು ಸಿದ್ಧಗೊಳಿಸುವುದು ಸುಲಭ

-ಶ್ಯಾಮಸುಂದರ್ ಕಣ್ಣೂರು, ಸ್ಪೋರ್ಟ್ಸ್ ಅಕಾಡೆಮಿ ಕೋಚ್‌

ಅಂಕಿ ಅಂಶಗಳು

40

ರಾಜ್ಯದಲ್ಲಿರುವ ಮಹಿಳಾ ಕ್ಲಬ್‌ಗಳು

8

ರಾಜ್ಯ ಸೂಪರ್ ಡಿವಿಷನ್‌ನ ಕ್ಲಬ್‌ಗಳು

20

‘ಎ’ ಡಿವಿಷನ್‌ ಕ್ಲಬ್‌ಗಳು

ಮಹಿಳಾ ಫುಟ್‌ಬಾಲ್‌ನ ವಿವಿಧ ಹಂತಗಳು

ಸೀನಿಯರ್ ವಿಭಾಗ

19 ವರ್ಷದೊಳಗಿನವರು

17 ವರ್ಷದೊಳಗಿನವರು

15 ವರ್ಷದೊಳಗಿನವರು

ರಾಷ್ಟ್ರೀಯ ಟೂರ್ನಿಯಲ್ಲಿ ಪ್ರಶಸ್ತಿಗಳು

ಮಣಿಪುರ

1993, 1995, 1996, 1998, 1999, 2001, 2002, 2003, 2004, 2005, 2006, 2007, 2008, 2009, 2010, 2014, 2017, 2019

ಇಂಡಿಯನ್ ಫುಟ್‌ಬಾಲ್ ಅಸೋಸಿಯೇಷನ್

1992, 1997

ಒಡಿಶಾ

2011

ತಮಿಳುನಾಡು

2018

ರೈಲ್ವೆ ಕ್ರೀಡಾ ಮಂಡಳಿ

2016

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT