ಶನಿವಾರ, ಜೂಲೈ 4, 2020
24 °C
ರೀತಿನೀತಿ ಆಯೋಗ ವಿಸರ್ಜಿಸಿದ ಅಧ್ಯಕ್ಷ, ಮರುನೇಮಿಸಿದ ಕಾರ್ಯದರ್ಶಿ

ಐಒಎ ಅಧಿಕಾರಿಗಳ ಒಳಜಗಳ ಬಹಿರಂಗ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಒಲಿಂಪಿಕ್‌ ಸಂಸ್ಥೆಯ(ಐಒಎ) ಪ್ರಮುಖ ಅಧಿಕಾರಿಗಳ ನಡುವಣ ಅಂತಃಕಲಹ ಮತ್ತೆ ಬಹಿರಂಗಗೊಂಡಿದೆ. ರೀತಿನೀತಿ ಆಯೋಗ (ಎಥಿಕ್ಸ್ ಕಮಿಷನ್‌) ವಿಸರ್ಜಿಸುವ ಐಒಎ ಅಧ್ಯಕ್ಷ ನರೀಂದರ್‌ ಬಾತ್ರಾ ನಿರ್ಧಾರವನ್ನು ಮಹಾ ಕಾರ್ಯದರ್ಶಿ ರಾಜೀವ್‌ ಮೆಹ್ತಾ ಅವರು ಕಾನೂನುಬಾಹಿರ ಎಂದು ಹೇಳಿದ್ದಾರೆ.

ಕೆಲಸಮಯದಿಂದ ಐಒಎ ಅಧ್ಯಕ್ಷ ಮತ್ತು ಕಾರ್ಯದರ್ಶಿ ನಡುವೆ ಶೀತಲ ಸಮರ ನಡೆಯುತ್ತಿದೆ. ಮಹಾ ಕಾರ್ಯದರ್ಶಿ ಅವರ ಹೊಣೆಗಳಲ್ಲಿ ಕೆಲವನ್ನು ತಾವು ವಹಿಸುವುದಾಗಿ ಅಧ್ಯಕ್ಷರು ಇತ್ತೀಚಿಗೆ ಹೇಳಿಕೆ ನೀಡಿದ್ದರು. ಇದಕ್ಕೆ ಕೆಂಡಾಮಂಡಲರಾದ ಮೆಹ್ತಾ, ‘ದೈನಂದಿನ ಆಗುಹೋಗುಗಳನ್ನು  ನೋಡಿಕೊಳ್ಳುವುದು ತಮ್ಮ ಕೆಲಸ‌’ ಎಂದು ತಿರುಗೇಟು ನೀಡಿದ್ದರು.

ನಿವೃತ್ತ ನ್ಯಾಯಮೂರ್ತಿ ವಿ.ಕೆ.ಗುಪ್ತಾ ನೇತೃತ್ವದ ರೀತಿನೀತಿ ಆಯೋಗ ಅವಧಿಗೆ ಸಂಬಂಧಿಸಿ ಮತ್ತೆ ತಿಕ್ಕಾಟ ಬಯಲಿಗೆ ಬಂದಿದೆ. ಈ ಆಯೋಗವನ್ನು 2017ರಲ್ಲಿ ನೇಮಕ ಮಾಡಲಾಗಿತ್ತು. 2021ರವರೆಗೆ ಇದರ ಅವಧಿಯಿದೆ.

ಅಧ್ಯಕ್ಷರು ಮೇ 19ರಂದು ಆಯೋಗವನ್ನು ವಿಸರ್ಜಿಸಿರುವುದು ಅಕ್ರಮವಾಗಿದೆ. ಆಯೋಗದ ಅಸ್ತಿತ್ವ ಮುಂದುವರಿಯಲಿದೆ ಎಂದು ಮೆಹ್ತಾ ಅವರು ಕಾರ್ಯಕಾರಿ ಮಂಡಳಿ ಸದಸ್ಯರು, ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಮತ್ತು ರಾಜ್ಯ ಒಲಿಂಪಿಕ್‌ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಐಒಎ ಕಾನೂನು ಆಯೋಗದ ಅಧ್ಯಕ್ಷರು ಈ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.  ಆಯೋಗ, ಸಮಿತಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಐಒಎಯ ಮುಂದಿನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು‘ ಎಂದು ಮೆಹ್ತಾ ಪತ್ರದಲ್ಲಿ ಬರೆದಿದ್ದಾರೆ.

ಐಒಎ ಕಾನೂನು ಆಯೋಗದ ನೇತೃತ್ವವನ್ನು ಹಿರಿಯ ಉಪಾಧ್ಯಕ್ಷ ಹಾಗೂ ಹಿರಿಯ ವಕೀಲ ಆರ್‌.ಕೆ.ಆನಂದ್‌ ವಹಿಸಿದ್ದಾರೆ.

ಇನ್ನೊಂದೆಡೆ ಪತ್ರಗಳನ್ನು ಕಡತಕ್ಕೆ ಸೇರಿಸುವಂತೆ ಬಾತ್ರಾ, ಆಡಳಿತ ಸಿಬ್ಬಂದಿಗೆ ಸೂಚಿಸಿದ್ದಾರೆ.

‘2017ರ ಡಿಸೆಂಬರ್‌ನಲ್ಲಿ ನಡೆದ ಐಒಎದ ವಾರ್ಷಿಕ ಮಹಾಸಭೆಯು, ಆಯೋಗ, ಸಮಿತಿಗಳಿಗೆ ಅಧ್ಯಕ್ಷರು, ಸಂಚಾಲಕರು ಮತ್ತು ಸದಸ್ಯರ ನೇಮಕವನ್ನು ಬಾತ್ರಾ ಮತ್ತು ತಮಗೆ ವಹಿಸಿತ್ತು. ಯಾವುದೇ ಹೊಸ ನೇಮಕಾತಿ ಅಥವಾ ವಜಾಕ್ಕೆ ತಾವು ಸಮ್ಮತಿ ನೀಡಿಲ್ಲ’ ಎಂದು ಮೆಹ್ತಾ ಹೇಳಿಕೊಂಡಿದ್ದಾರೆ.

‘ನಿಮ್ಮನ್ನು ವಜಾಗೊಳಿಸುವ ಬಾತ್ರಾ ಅವರ ಪತ್ರಕ್ಕೆ ಯಾವುದೇ ಮಾನ್ಯತೆ ಇಲ್ಲ’ ಎಂದು ರೀತಿನೀತಿ ಆಯೋಗದ ಸದಸ್ಯರಿಗೆ ಬರೆದ ಪ್ರತ್ಯೇಕ ಪತ್ರದಲ್ಲಿ ಮೆಹ್ತಾ ಹೇಳಿದ್ದಾರೆ. ಅಧ್ಯಕ್ಷರ ಪತ್ರವನ್ನು ಕಡೆಗಣಿಸಿ, ಕೆಲಸ ಮುಂದುವರಿಸುವಂತೆ ಅವರು ಸದಸ್ಯರಿಗೆ ವಿನಂತಿಸಿದ್ದಾರೆ.

ಕಾರ್ಯಕಾರಿ ಮಂಡಳಿ ಒಪ್ಪಿಗೆ ಮತ್ತು ನೀತಿ ನಿಯಮಾವಳಿಗಳ ಪ್ರಕಾರವಷ್ಟೇ ಆಯೋಗದ ಸದಸ್ಯರನ್ನು ಕಿತ್ತುಹಾಕಬಹುದು ಎಂದು ಮೆಹ್ತಾ ಹೇಳಿದ್ದಾರೆ. ನಿಯಮಾವಳಿ ಪ್ರಕಾರ ನೀತಿ ನಡಾವಳಿ ಆಯೋಗಕ್ಕೆ ನಾಲ್ಕು ವರ್ಷಗಳ ಅವಧಿಯಿದೆ.

‘2019ರ ನಿಯಮಗಳ ಪ್ರಕಾರ ಆಯೋಗದ ಸದಸ್ಯರ ಅವಧಿ ನಾಲ್ಕು ವರ್ಷ. ನಿಯಮಾವಳಿಯ ಸೂಚಿಯಲ್ಲೂ, ನೇಮಕದ ವಿವರಗಳಲ್ಲೂ ಇದರ ಉಲ್ಲೇಖವಿದೆ. ಆದರೆ ಕೊನೆಯ ಪುಟವನ್ನು ಬದಲಾಯಿಸಿ ನೇಮಕದ ಅಧಿಕಾರಾವಧಿಯನ್ನು 2017–19 ಎಂದು ಭಿನ್ನವಾದ ಅವಧಿ ನೀಡಲಾಗಿದೆ’ ಎಂದು ಮೆಹ್ತಾ ದೂರಿದ್ದಾರೆ.

‘ಈ ವಿಷಯದಲ್ಲಿ ಮತ್ತಷ್ಟು ವಿಚಾರಣೆ ನಡೆಯಬೇಕಾಗಿದೆ. ಇದನ್ನು ಐಒಎ ಕಾನೂನು ಆಯೋಗದ ಅಧ್ಯಕ್ಷರಿಗೆ ಮತ್ತು ವಿಧಿವಿಧಾನ ತಜ್ಞರೊಬ್ಬರಿಗೆ ವಹಿಸುತ್ತೇನೆ’ ಎಂದು ಹೇಳಿದ್ದಾರೆ. 9 ಸದಸ್ಯರ ರೀತಿನೀತಿ ಆಯೋಗದಲ್ಲಿ ಬಿಜೆಪಿ ವಕ್ತಾರ ಹಾಗೂ ಐಒಎ ಉಪಾಧ್ಯಕ್ಷ ಸುಧಾಂಶು ಮಿತ್ತಲ್‌, ಹಿರಿಯ ಉಪಾಧ್ಯಕ್ಷ ಅನಿಲ್‌ ಖನ್ನಾ, ಚಳಿಗಾಲದ ಒಲಿಂಪಿಕ್ಸ್‌ ತಾರೆ ಶಿವ ಕೇಶವನ್‌ ಒಳಗೊಂಡಿದ್ದಾರೆ.

ಜಂಟಿ ಕಾರ್ಯದರ್ಶಿ ರಾಕೇಶ್‌ ಗುಪ್ತಾ ಅವರಿಗೆ ಸೋಮವಾರ ಅಧಿಕೃತ ನಡಾವಳಿ ದಾಖಲಿಸುವ ಹೊಣೆ ವಹಿಸಿದ್ದಕ್ಕೂ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಐಒಎ ನಿಯಮಾವಳಿಯ ಸ್ಪಷ್ಟ ಉಲ್ಲಂಘನೆ ಇದೆಂದು ಟೀಕಿಸಿದ್ದಾರೆ.

ಐಒಎ ಅಧ್ಯಕ್ಷರಾಗಿ ನಿಯಮಾವಳಿಯಂತೆ ಕಾರ್ಯನಿರ್ವಹಿಸಬೇಕಾಗಿದೆ. ಇಂಥ ಅಕ್ರಮ ಕೆಲಸಗಳಲ್ಲಿ ತೊಡಗಬಾರದು’ ಎಂದು ಮಿತ್ತಲ್‌ ಅವರು ಬಾತ್ರಾ ಅವರಿಗೆ ಪತ್ರ ಬರೆದಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು