ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಗಾಯ ಚಿಕಿತ್ಸೆಗೆ ಹೈಟೆಕ್ ಸಂಕೀರ್ಣ

ಸರ್ಕಾರಿ ವ್ಯವಸ್ಥೆಯಡಿ ನಿರ್ಮಾಣವಾದ ದೇಶದ ಎರಡನೇ ಆಸ್ಪತ್ರೆ
Published 7 ಜನವರಿ 2024, 0:30 IST
Last Updated 7 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಗಾಯಾಳು ಕ್ರೀಡಾಪಟುಗಳಿಗೆ ಚಿಕಿತ್ಸೆ ಹಾಗೂ ಪುನರ್ವಸತಿ ಕಲ್ಪಿಸಲು ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ (ಎಸ್‌ಜಿಐಟಿಒ) ಹೈಟೆಕ್ ಕಟ್ಟಡ ತಲೆಯೆತ್ತಿದೆ. ಇದು ಸರ್ಕಾರಿ ವ್ಯವಸ್ಥೆಯಡಿ ನಿರ್ಮಾಣಗೊಳ್ಳುತ್ತಿರುವ ದೇಶದ ಎರಡನೇ ಕ್ರೀಡಾ ಚಿಕಿತ್ಸಾ ಸಂಕೀರ್ಣವಾಗಿದೆ.

ಇದೇ ಮಾದರಿಯ ಕ್ರೀಡಾ ಚಿಕಿತ್ಸಾ ಸಂಕೀರ್ಣವೊಂದು ಉತ್ತರ ಪ್ರದೇಶದಲ್ಲಿದೆ. ಈ ಸಂಕೀರ್ಣ ಕ್ರೀಡಾಪಟುಗಳಿಗೆ ಮೀಸಲಾಗಿರಲಿದ್ದು, ಕ್ರೀಡಾ ಗಾಯಗಳ ನಿರ್ವಹಣೆ ಬಗ್ಗೆ ತರಬೇತಿಯನ್ನೂ ನೀಡಲಾಗುತ್ತದೆ. 

ಈ ನೂತನ ಕ್ರೀಡಾ ಚಿಕಿತ್ಸಾ ಸಂಕೀರ್ಣದಲ್ಲಿ ಓಟದ ಟ್ರ್ಯಾಕ್, ಕ್ರೀಡಾ ಪ್ರಯೋಗಾಲಯ, ಕ್ರಯೋ ಥೆರಪಿಯಂತಹ ಸೌಲಭ್ಯಗಳಿವೆ. ಜತೆಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿ ಸೇರಿ ವಿವಿಧ ಸೌಲಭ್ಯಗಳೂ ಇಲ್ಲಿ ಇರಲಿವೆ.

ಈಗಾಗಲೇ ಎರಡು ಮಹಡಿಯ ಕಟ್ಟಡದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಒಳಾಂಗಣಕ್ಕೆ ಅಂತಿಮ ಸ್ಪರ್ಶ ಹಾಗೂ ವೈದ್ಯಕೀಯ ಉಪಕರಣಗಳ ಅಳವಡಿಕೆ ಬಾಕಿ ಉಳಿದಿದೆ. ನಾಲ್ಕರಿಂದ ಐದು ತಿಂಗಳಲ್ಲಿ ಈ ಸಂಕೀರ್ಣವನ್ನು ಪ್ರಾರಂಭಿಸಲು ಸಂಸ್ಥೆ ಸಿದ್ಧತೆ ಮಾಡಿಕೊಂಡಿದ್ದು, ಉಪಕರಣಗಳ ಖರೀದಿ ಪ್ರಕ್ರಿಯೆ ನಡೆಸುತ್ತಿದೆ. 

ಈ ಕ್ರೀಡಾ ಸಂಕೀರ್ಣವು 22 ಸಾವಿರ ಚದರ ಅಡಿಯಲ್ಲಿ ತಲೆಯೆತ್ತಿದೆ. ಕೆಳಮಹಡಿಯಲ್ಲಿ ವೈದ್ಯರ ವಾಹನಗಳ ಪಾರ್ಕಿಂಗ್, ಎಕ್ಸ್‌–ರೇ ಘಟಕಕ್ಕೆ ಅವಕಾಶ ನೀಡಲಾಗಿದೆ. ಮೊದಲ ಮಹಡಿಯಲ್ಲಿ ಹೊರರೋಗಿ ವಿಭಾಗ, ಔಷಧಾಲಯ, ತುರ್ತು ಚಿಕಿತ್ಸಾ ಘಟಕಕ್ಕೆ ಸ್ಥಳಾವಕಾಶ ಒದಗಿಸಲಾಗಿದೆ. ಮೊದಲ ಮಹಡಿಯಲ್ಲಿ ಕ್ರೀಡಾ ಗಾಯಗಳಿಗೆ ಚಿಕಿತ್ಸಾ ಘಟಕ ಇರಲಿದ್ದು, ಹೈಟೆಕ್ ಜಿಮ್‌, ಓಟದ ಟ್ರ್ಯಾಕ್‌ಗೆ ವಿಶಾಲ ಸ್ಥಳಾವಕಾಶ ನೀಡಲಾಗಿದೆ. ಗಾಯ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಇಲ್ಲಿ ತರಬೇತಿ ನೀಡಲಾಗುತ್ತದೆ. ಎರಡನೇ ಮಹಡಿಯಲ್ಲಿ ಎರಡು ಶಸ್ತ್ರಚಿಕಿತ್ಸಾ ಘಟಕ ಹಾಗೂ ಅಗತ್ಯ ಕೊಠಡಿಗಳನ್ನು ನಿರ್ಮಿಸಲಾಗಿದೆ. 

ಉಪಕರಣ ಖರೀದಿ:

ಕಟ್ಟಡ ನಿರ್ಮಾಣಕ್ಕೆ ₹29 ಕೋಟಿ ವೆಚ್ಚವಾಗಿದ್ದು, ₹ 10 ಕೋಟಿ ವೆಚ್ಚದಲ್ಲಿ ಅಗತ್ಯ ಉಪಕರಣಗಳನ್ನು ಖರೀದಿಸಲಾಗುತ್ತದೆ. ಸಂಸ್ಥೆಯ ಕ್ರೀಡಾ ಚಿಕಿತ್ಸಾ ವಿಭಾಗವು ಸದ್ಯ ಇಬ್ಬರು ವೈದ್ಯರನ್ನು ಒಳಗೊಂಡಿದೆ. ಕ್ರೀಡಾ ಚಿಕಿತ್ಸಾ ಸಂಕೀರ್ಣದಲ್ಲಿ ವೈದ್ಯಕೀಯ ಉಪಕರಣಗಳ ಅಳವಡಿಕೆ ಬಳಿಕ ಅಗತ್ಯ ಫಿಸಿಯೋಥೆರಪಿಸ್ಟ್‌ಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಕ್ರೀಡಾ ಗಾಯದ ಚಿಕಿತ್ಸೆಗಳಿಗೂ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಸೇರಿ ವಿವಿಧ ವಿಮಾ ಯೋಜನೆಯಡಿ ಚಿಕಿತ್ಸೆ ಒದಗಿಸಲಾಗುತ್ತದೆ. ಇದರಿಂದ ದುಬಾರಿ ವೆಚ್ಚದ ಚಿಕಿತ್ಸೆಗಳು ಅಗ್ಗದ ದರದಲ್ಲಿ ಲಭ್ಯವಾಗುತ್ತವೆ.

‘ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ವ್ಯವಸ್ಥೆಯಲ್ಲಿ ಕ್ರೀಡಾ ಚಿಕಿತ್ಸಾ ಸಂಕೀರ್ಣವಿಲ್ಲ. ಇದೇ ಮೊದಲ ಬಾರಿಗೆ ಈ ರೀತಿ ಸಂಕೀರ್ಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಕ್ರೀಡಾಪಟುಗಳು ದೇಹವನ್ನು ಸದೃಢವಾಗಿಟ್ಟುಕೊಳ್ಳಲು, ವೃತ್ತಿ ಜೀವನದಲ್ಲಿ ಗಾಯ ರಹಿತ ಆಟವಾಡಲು ಅಗತ್ಯ ಮಾರ್ಗದರ್ಶನ, ತರಬೇತಿ ನೀಡಲಾಗುತ್ತದೆ. ಕ್ರೀಡಾಪಟುಗಳು ಗಾಯಗೊಂಡಾಗ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಮೊದಲಿನಂತೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ದುಬಾರಿ ಚಿಕಿತ್ಸೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಕ್ರೀಡಾ ಚಿಕಿತ್ಸಾ ಸಂಕೀರ್ಣ ನಿರ್ಮಿಸಲಾಗಿದೆ’ ಎಂದು ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಪ್ರಕಾಶಪ್ಪ ಟಿ.ಎಚ್. ತಿಳಿಸಿದರು.

ಹೊರರೋಗಿ ವಿಭಾಗ ಸ್ಥಳಾಂತರ

ಕ್ರೀಡಾ ಚಿಕಿತ್ಸೆ ಸಂಕೀರ್ಣ ಕಾರ್ಯಾರಂಭಿಸಿದ ಬಳಿಕ ಅಲ್ಲಿಗೆ ಸಂಸ್ಥೆಯ ಹೊರರೋಗಿ ವಿಭಾಗ ಸ್ಥಳಾಂತರವಾಗಲಿದೆ. ಸದ್ಯ ಸಂಸ್ಥೆಗೆ ಚಿಕಿತ್ಸೆಗಾಗಿ ರಾಜ್ಯದ ವಿವಿಧೆಡೆಯಿಂದ ಹಾಗೂ ಹೊರ ರಾಜ್ಯಗಳಿಂದ ಗಾಯಾಳುಗಳು ಸೇರಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರಿಂದಾಗಿ ಸಂಸ್ಥೆಯ ಹೊರರೋಗಿ ವಿಭಾಗದಲ್ಲಿ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಆದ್ದರಿಂದ ಕ್ರೀಡಾ ಚಿಕಿತ್ಸೆ ಸಂಕೀರ್ಣಕ್ಕೆ ಹೊರರೋಗಿ ವಿಭಾಗ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. 

ಕ್ರೀಡಾ ಚಿಕಿತ್ಸೆ ಸಂಕೀರ್ಣದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದವರನ್ನು ಸಂಸ್ಥೆಯ ಮುಖ್ಯ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಈ ಕಾರ್ಯವು ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ಎಂದು ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ.

****

ಕ್ರೀಡಾಪಟುಗಳಿಗೆ ಗಾಯಗಳು ಕಾಡುತ್ತವೆ. ಇದರಿಂದಾಗಿ ಕೆಲವರು ಕ್ರೀಡೆಯಿಂದ ವಿಮುಖರಾಗುತ್ತಾರೆ. ಆದ್ದರಿಂದ ಅಗತ್ಯ ಚಿಕಿತ್ಸೆ, ಪುನರ್ವಸತಿಗೆ ಕೇಂದ್ರ ನಿರ್ಮಿಸಲಾಗಿದೆ

-ಡಾ. ಪ್ರಕಾಶಪ್ಪ ಟಿ.ಎಚ್., ಎಸ್‌ಜಿಐಟಿಒ ವೈದ್ಯಕೀಯ ಅಧೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT