ಬೆಂಗಳೂರು: ಕರ್ನಾಟಕದ ದೀಕ್ಷಿತಾ ಅವರು ಪಟ್ನಾದಲ್ಲಿ ನಡೆಯುತ್ತಿರುವ ನಾಲ್ಕನೇ ಇಂಡಿಯನ್ ಓಪನ್ (23 ವರ್ಷದೊಳಗಿನವರ) ಅಥ್ಲೆಟಿಕ್ಸ್‌ನ ಮಹಿಳೆಯರ 400 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.
ದೀಕ್ಷಿತಾ 1 ನಿಮಿಷ 00.40 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಮಹಾರಾಷ್ಟ್ರದ ನೇಹಾ ವಿಶಾಲ್ (1ನಿ.00.77), ಪಶ್ಚಿಮ ಬಂಗಾಳದ ಮೌಮಿ ಜಾನಾ (1ನಿ.1.14ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ಕರ್ನಾಟಕದ ತುಷಾರ್ ವಸಂತ್ ಭೇಕಾನೆ (1 ನಿ.51.97ಸೆ) ಮತ್ತು ಲೋಕೇಶ್ ಕೆ. (1ನಿ.53.23ಸೆ) ಅವರು ಪುರುಷರ 800 ಮೀಟರ್ ಓಟದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. ರಾಜಸ್ಥಾನದ ಶಕೀಲ್ (1ನಿ.51.90) ಚಿನ್ನ ಜಯಿಸಿದರು.
ಪುರುಷರ ಹೈಜಂಪ್‌ನಲ್ಲಿ ಸುದೀಪ್ 2.11 ಮೀಟರ್ ಎತ್ತರ ಜಿಗಿದು ಬೆಳ್ಳಿ ಗೆದ್ದರು. ಕೇರಳದ ಜೋಮನ್ ಜಾಯ್ (2.17 ಮೀಟರ್) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. 2023ರಲ್ಲಿ ಚಂಡೀಗಢದ ಮೊಹಮ್ಮದ್ ಅಶ್ರಫ್ ಅಲಿ (2.15ಮೀ) ಅವರು ನಿರ್ಮಿಸಿದ್ದ ದಾಖಲೆಯನ್ನು ಜೋಮನ್ ಮುರಿದರು.
ಮಹಿಳೆಯರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ದಿಶಾ ಗಣಪತಿ 5.86 ಮೀಟರ್ ಸಾಧನೆಯೊಂದಿಗೆ ಕಂಚು ಗೆದ್ದರು. ಪಶ್ಚಿಮ ಬಂಗಾಳದ ಮೌಮಿತಾ ಮೊಂಡಲ್ (6.27ಮೀ) ಮತ್ತು ಆಂಧ್ರ ಪ್ರದೇಶದ ಲಕ್ಷ್ಮಿ ಗೆಮ್ಮೆಲ (5.91ಮೀ) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಜಯಿಸಿದರು.