ನವದೆಹಲಿ: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಕ್ರೀಡಾಪಟು ಬಬಿತಾ ಫೋಗಟ್, ತನ್ನ ಸೋದರ ಸಂಬಂಧಿ ವಿನೇಶ್ ಫೋಗಟ್ ಅವರಿಗೆ ಕುಸ್ತಿಗೆ ನಿವೃತ್ತಿ ಘೋಷಿಸಿರುವ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಾಗಿದ್ದರಿಂದ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ಕುಸ್ತಿ 50 ಕೆ.ಜಿ ವಿಭಾಗದ ಫೈನಲ್‌ನಲ್ಲಿ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿತ್ತು. ಆ ಬಳಿಕ ಮನನೊಂದು ಅವರು ಕುಸ್ತಿಗೆ ವಿದಾಯ ಹೇಳಿದ್ದರು. ಕುಸ್ತಿಯಲ್ಲಿ ಮುಂದುವರಿಯಲು ನನ್ನಲ್ಲಿ ಯಾವುದೇ ಶಕ್ತಿ ಉಳಿದಿಲ್ಲ ಎಂದು ಹೇಳಿದ್ದರು.
‘2012ರಲ್ಲಿ ನಾನು 200 ಗ್ರಾಂ ಹೆಚ್ಚು ತೂಕವಿದ್ದ ಕಾರಣ ಏಷ್ಯನ್ ಚಾಂಪಿಯನ್‌ನಲ್ಲಿ ಆಡಲು ನನಗೆ ಅವಕಾಶ ಸಿಗಲಿಲ್ಲ. ತೂಕ ಹೆಚ್ಚಿದ್ದ ಕಾರಣ ಆಡಲು ಅವಕಾಶ ಸಿಗದ ಹಲವು ನಿದರ್ಶ ನಗಳು ಕುಸ್ತಿಯಲ್ಲಿವೆ. ಕಠಿಣ ನಿಯಮಗಳಿಂದಾಗಿ ನಿಮ್ಮ ಅನರ್ಹತೆಯಾಗಿದೆ ಎಂದು ಇಡೀ ಜಗತ್ತಿಗೆ ಗೊತ್ತಿದೆ’ ಎಂದು ಪಿಟಿಐ ಹಂಚಿಕೊಂಡಿರುವ ವಿಡಿಯೊದಲ್ಲಿ ಬಬಿತಾ ಹೇಳಿದ್ದಾರೆ.
ಒಲಿಂಪಿಕ್ಸ್ ಕುಸ್ತಿ ಫೈನಲ್‌ನಲ್ಲಿ ವಿನೇಶ್ ಅನರ್ಹತೆಯಿಂದ ಇಡೀ ದೇಶಕ್ಕೆ ನೋವಾಗಿದೆ. ಆದರೂ ಅವರು ತಮ್ಮ ನಿವೃತ್ತಿ ನಿರ್ಧಾರ ಕೈಬಿಟ್ಟು 2028ರ ಲಾಸ್ ಏಂಜಲೀಸ್‌ನ ಒಲಿಂಪಿಕ್ಸ್‌ನಲ್ಲಿ ಆಡಲಿದ್ದಾರೆ ಎಂಬ ಭರವಸೆ ಇದೆ ಎಂದಿದ್ದಾರೆ.
ಕಳೆದ ವರ್ಷ ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಭೂಷಣ್ ಸಿಂಗ್ ಅವರ ವಿರುದ್ಧ ಕೇಳಿಬಂದಿದ್ದ ಲೈಂಗಿಕ ದೌರ್ಜನ್ಯ ಆರೋಪದ ಹೋರಾಟವನ್ನು ಬಬಿತಾ ದುರ್ಬಲಗೊಳಿಸಿದರು ಎಂದು ವಿನೇಶ್ ಆರೋಪಿಸಿದ್ದರು.
ಕುಸ್ತಿಪಟುಗಳ ಹಕ್ಕುಗಳ ಪರವಾಗಿ ನೀವು ನಿಲ್ಲದಿದ್ದರೂ ಪರವಾಗಿಲ್ಲ. ನಮ್ಮ ಹೋರಾಟವನ್ನು ದುರ್ಬಲಗೊಳಿಸಬೇಡಿ ಎಂದು ವಿನೇಶ್ ಅವರು ಬಬಿತಾ ವಿರುದ್ಧ ಕಿಡಿಕಾರಿದ್ದರು.