ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ ಟೂರ್ನಿ: ವಿದಿತ್‌ ವಿರುದ್ಧ ಗೆದ್ದ ಗುಕೇಶ್‌ಗೆ ಮತ್ತೆ ಜಂಟಿ ಅಗ್ರಸ್ಥಾನ

ಹಂಪಿಗೆ ಮಣಿದ ವೈಶಾಲಿ
Published 14 ಏಪ್ರಿಲ್ 2024, 14:58 IST
Last Updated 14 ಏಪ್ರಿಲ್ 2024, 14:58 IST
ಅಕ್ಷರ ಗಾತ್ರ

ಟೊರಾಂಟೊ: ಕುಶಲ ನಡೆಗಳನ್ನಿರಿಸಿದ ಡಿ.ಗುಕೇಶ್‌, ಸ್ವದೇಶದ ವಿದಿತ್‌ ಗುಜರಾತಿ ಅವರನ್ನು ಭಾನುವಾರ 38 ನಡೆಗಳಲ್ಲಿ ಸೋಲಿಸಿ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ಎಂಟನೇ ಸುತ್ತಿನ ನಂತರ ರಷ್ಯಾದ ಇಯಾನ್‌ ನೆಪೊಮ್‌ನಿಯಾಚಿ ಜೊತೆ ಮತ್ತೆ ಅಗ್ರಸ್ಥಾನ ಹಂಚಿಕೊಂಡರು.

ಆರ್‌.ಪ್ರಜ್ಞಾನಂದ ಅವರು ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಜೊತೆ 40 ನಡೆಗಳ ನಂತರ ಡ್ರಾ ಮಾಡಿಕೊಂಡರೆ, ಹಿಕಾರು ನಕಾಮುರಾ ಅವರು ಅಮೆರಿಕದ ಗ್ರ್ಯಾಂಡ್‌ಮಾಸ್ಟರ್‌ಗಳ ವ್ಯವಹಾರವಾಗಿದ್ದ ಇನ್ನೊಂದು ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಅವರಿಗೆ ಟೂರ್ನಿಯ ಮೊದಲ ಸೋಲು ಉಣಿಸಿದರು. ಬಿಳಿ ಕಾಯಿಗಳಲ್ಲಿ ನಕಾಮುರಾ 35 ನಡೆಗಳಲ್ಲಿ ಗೆದ್ದರು.

ಎಂಟು ಆಟಗಾರರ ಟೂರ್ನಿಯಲ್ಲಿ ಏಳನೇ ಸುತ್ತಿನ ನಂತರ ಒಂಟಿಯಾಗಿ ಅಗ್ರಸ್ಥಾನದಲ್ಲಿದ್ದ ನೆಪೊಮ್‌ನಿಯಾಚಿ, ಆರಂಭದಲ್ಲೇ ತಪ್ಪು ಮಾಡಿದ ಕಾರಣ ಕೊನೆಯ ಸ್ಥಾನದಲ್ಲಿರುವ ನಿಜತ್‌ ಅಬಸೋವ್‌ ಜೊತೆ ‘ಡ್ರಾ’ಕ್ಕೆ ಒಪ್ಪಿಕೊಳ್ಳಬೇಕಾಯಿತು.

ಇನ್ನೂ ಆರು ಸುತ್ತುಗಳು ಬಾಕಿವುಳಿದಿರುವಂತೆ ಗುಕೇಶ್‌ ಮತ್ತು ನೆಪೊಮ್‌ನಿಯಾಚಿ ತಲಾ 5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ನಕಾಮುರಾ ಮತ್ತು ಪ್ರಜ್ಞಾನಂದ ಅವರ ಸನಿಹದಲ್ಲಿದ್ದು ತಲಾ 4.5 ಪಾಯಿಂಟ್ಸ್ ಗಳಿಸಿದ್ದಾರೆ. ಕರುವಾನಾ (3.5) ಐದನೇ ಸ್ಥಾನದಲ್ಲಿದ್ದಾರೆ. ಗುಜರಾತಿ (3.5) ಆರನೇ, ಅಲಿರೇಝಾ (3) ಏಳನೇ ಮತ್ತು ಅಬಸೋವ್ (2.5) ಕೊನೆಯ ಸ್ಥಾನದಲ್ಲಿದ್ದಾರೆ.

ಒಂಬತ್ತನೇ ಸುತ್ತಿನಲ್ಲಿ ಗುಕೇಶ್‌ ಮತ್ತು ಪ್ರಜ್ಞಾನಂದ ಎದುರಾಳಿಗಳಾಗಿದ್ದಾರೆ. ಗುಜರಾತಿ ಅವರಿಗೆ ನಕಾಮುರಾ ಸವಾಲು ಎದುರಿಸಲು ಇದೆ.

ಕಪ್ಪುಕಾಯಿಗಳಲ್ಲಿ ಆಡಿದರೂ ಹೆಚ್ಚಿನ ಪತ್ಯಾಕ್ರಮಣ ಎದುರಿಸದೇ ಗೆದ್ದ ಬಗ್ಗೆ ಕೇಳಿದಾಗ ಗುಕೇಶ್ ಹೇಳಿದ್ದಿಷ್ಟು: ‘ಈ ಹಂತದಲ್ಲಿ ಇಂಥ ರೀತಿಯ ಪಂದ್ಯಗಳು ವಿರಳ. ಓಪನಿಂಗ್‌ನಲ್ಲೇ ಅವರು ಕೆಲವು ತಪ್ಪುನಡೆಗಳನ್ನಿರಿಸಿದರು. ಅವರ ಸ್ಥಿತಿ ಹಿತಕರವಾಗಿರಲಿಲ್ಲ. ನನಗೆ ಹಿಡಿತ ದೊರೆಯಿತು.’

ಹಂಪಿಗೆ ಮಣಿದ ವೈಶಾಲಿ: ಮಹಿಳಾ ವಿಭಾಗದಲ್ಲಿ ಕೋನೇರು ಹಂಪಿ (3.5) ಎಂಟನೇ ಸುತ್ತಿನಲ್ಲಿ ಸ್ವದೇಶದ ಆರ್‌.ವೈಶಾಲಿ ಅವರನ್ನು ಸೋಲಿಸಿದರು.

ಆದರೆ ಮಹತ್ವದ ಫಲಿತಾಂಶದಲ್ಲಿ, ಚೀನಾದ ಟಿಂಗ್ಜಿ ಲೀ ಅವರು ಇದುವರೆಗೆ ಅಗ್ರಸ್ಥಾನದಲ್ಲಿದ್ದ ತಮ್ಮದೇ ದೇಶದ ಆಟಗಾರ್ತಿ ಝೊಂಗ್ವಿ ತಾನ್‌ ಅವರನ್ನು ಮಣಿಸಿದರು. ಇದರಿಂದ ಟೂರ್ನಿಯ ಉಳಿದ ಆಟಗಾರ್ತಿಯರಿಗೂ ಮುನ್ನಡೆಯುವ ಅವಕಾಶ ಸಿಗಲಿದೆ.

ಝೊಂಗ್ವಿ, ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಮತ್ತು ಟಿಂಗ್ಜಿ ತಲಾ ಐದು ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ರಷ್ಯಾದ ಕ್ಯಾಥರಿನಾ ಲಾಗ್ನೊ (4.5) ಅವರು ಮೇಲಿನ ಮೂವರ ಬೆನ್ನತ್ತಿದ್ದಾರೆ. ಹಂಪಿ, ಬಲ್ಗೇರಿಯಾದ ನುರ್ಗ್ಯುಲ್‌ ಸಲಿಮೊವಾ ಅವರು ತಲಾ 3.5 ಪಾಯಿಂಟ್ಸ್‌ ಕಲೆಹಾಕಿದ್ದಾರೆ. ಅನ್ನಾ ಮುಝಿಚುಕ್ (3) ಏಳನೇ ಹಾಗೂ ವೈಶಾಲಿ (2.5) ಕೊನೆಯ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT