ನವದೆಹಲಿ: ಭಾರತದ ರೈಫಲ್ ಮತ್ತು ಪಿಸ್ತೂಲ್ ಶೂಟರ್‌ಗಳು, ಪೆರು ರಾಜಧಾನಿ ಲಿಮಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಬೇಟೆ ಮುಂದುವರಿಸಿದ್ದಾರೆ. ಸ್ಪರ್ಧೆಯ ನಾಲ್ಕನೇ ದಿನವಾದ ಬುಧವಾರ ಐದು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ.
ಭಾರತ ಕೂಟದಲ್ಲಿ ಒಟ್ಟು 14 ಪದಕಗಳನ್ನು (10 ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚು) ಗೆದ್ದುಕೊಂಡು ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಮೆರಿಕ (10) ಮತ್ತು ಇಟಲಿ (8) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.
ದಿವಾನ್ಶಿ ಮತ್ತು ಮುಕೇಶ್ ನೆಲವಳ್ಳಿ ಅವರು ಕ್ರಮವಾಗಿ ವೈಯಕ್ತಿಕ ಮಹಿಳೆಯರ ಮತ್ತು ಪುರುಷರ 25 ಮೀ ಪಿಸ್ತೂಲ್‌ನಲ್ಲಿ ಚಿನ್ನದ ಪದಕ ಗೆದ್ದರು.
ದಿವಾನ್ಶಿ ಅವರು ಫೈನಲ್ ಸುತ್ತಿನಲ್ಲಿ ಎರಡು ಪಾಯಿಂಟ್ಸ್‌ಗಳಿಂದ ಇಟಲಿಯ ಕ್ರಿಸ್ಟಿನಾ ಮ್ಯಾಗ್ನಾನಿ ಅವರನ್ನು ಸೋಲಿಸಿದರು. ಫ್ರಾನ್ಸ್‌ನ ಹೆಲೋಯಿಸ್ ಫೋರ್ ಕಂಚಿನ ಪದಕ ಗೆದ್ದರು.
ದಿವಾನ್ಶಿ ತಂಡ ಸ್ಪರ್ಧೆದಲ್ಲೂ ಚಿನ್ನ ಗೆದ್ದರು. ತೇಜಸ್ವಿನಿ ಮತ್ತು ವಿಭೂತಿ ಭಾಟಿಯಾ ಅವರನ್ನು ಒಳಗೊಂಡ ಮೂರು ಶೂಟರ್‌ಗಳ ತಂಡವು ಮಹಿಳೆಯರ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ 1711 ಪಾಯಿಂಟ್‌ಗಳೊಂದಿಗೆ ಚಿನ್ನದ ಸಾಧನೆ ಮೆರೆಯಿತು. ಝೆಕ್ ರಿಪಬ್ಲಿಕ್ ಮತ್ತು ಜರ್ಮನಿ ನಂತರದ ಸ್ಥಾನ ಪಡೆಯಿತು.
ಮುಕೇಶ್ ಕೂಡ ಎರಡು ಚಿನ್ನಕ್ಕೆ ಕೊರಳೊಡ್ಡಿದರು. ಈ ಮೂಲಕ ಕೂಟದಲ್ಲಿ ಹ್ಯಾಟ್ರಿಕ್ ಸ್ವರ್ಣದ ಸಾಧನೆ ಮಾಡಿದರು. 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ 585 ಅಂಕ ಪಡೆದ ಅವರು, ಸ್ವದೇಶದ ಸೂರಜ್ ಶರ್ಮಾ ಅವರನ್ನು ಎರಡು ಪಾಯಿಂಟ್‌ಗಳಿಂದ ಸೋಲಿಸಿದರು.
ಮುಕೇಶ್, ಸೂರಜ್ ಮತ್ತು ಪ್ರದ್ಯುಮ್ನ್ ಸಿಂಗ್ (561) ಅವರನ್ನು ಒಳಗೊಂಡ ತಂಡವು 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ 1726 ಅಂಕಗಳೊಂದಿಗೆ ಚಾಂಪಿಯನ್ ಆಯಿತು. ಪೋಲೆಂಡ್ ಮತ್ತು ಇಟಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದುಕೊಂಡಿತು.
ಶೌರ್ಯ ಸೈನಿ, ವೇದಾಂತ್ ನಿತಿನ್ ಮತ್ತು ಪರೀಕ್ಷಿತ್ ಸಿಂಗ್ ಬ್ರಾರ್ ಸಂಯೋಜನೆಯ ತಂಡವು ಪುರುಷರ 50 ಮೀಟರ್ ರೈಫಲ್ 3 ಸ್ಪರ್ಧೆಯಲ್ಲಿ 1753 ಅಂಕಗಳೊಂದಿಗೆ ಚಿನ್ನ ಗೆದ್ದಿತು. ಎಲಿಮಿನೇಷನ್ ಸುತ್ತಿನಲ್ಲಿ ಈ ತಂಡವು ಜೂನಿಯರ್ ವಿಶ್ವ ದಾಖಲೆಯನ್ನು ಸರಿಗಟ್ಟಿತು. ನಾರ್ವೆ ಮತ್ತು ಸ್ವೀಡನ್ ತಂಡಗಳು ನಂತರದ ಸ್ಥಾನ ಪಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.