ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್ಚರಿ ಅಂತಿಮ ಕ್ವಾಲಿಫೈಯರ್ಸ್‌: ಉಕ್ರೇನ್‌ಗೆ ಮಣಿದ ಮಹಿಳಾ ರಿಕರ್ವ್‌ ತಂಡ

Published 14 ಜೂನ್ 2024, 15:52 IST
Last Updated 14 ಜೂನ್ 2024, 15:52 IST
ಅಕ್ಷರ ಗಾತ್ರ

ಅಂತಾಲ್ಯ (ಟರ್ಕಿ): ಉತ್ತಮ ಮುನ್ನಡೆ ಕೈಚೆಲ್ಲಿದ ಭಾರತದ ಮಹಿಳಾ ರಿಕರ್ವ್‌ ತಂಡ, ಒಲಿಂಪಿಕ್‌ ಆರ್ಚರಿ ಅಂತಿಮ  ಕ್ವಾಲಿಫೈಯರ್ಸ್‌ನ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಶುಕ್ರವಾರ ಕಡಿಮೆ ಕ್ರಮಾಂಕದ ಉಕ್ರೇನ್ ತಂಡದೆದುರು 3–5ರಲ್ಲಿ ಸೋಲಿನ ಆಘಾತ ಅನುಭವಿಸಿತು.

ಐದನೇ ಶ್ರೇಯಾಂಕದ ಭಾರತ ತಂಡ (ದೀಪಿಕಾ ಕುಮಾರಿ, ಭಜನ್ ಕೌರ್ ಮತ್ತು ಅಂಕಿತಾ ಭಕತ್) ಪ್ರಿಕ್ವಾರ್ಟರ್‌ಫೈನಲ್‌ಗೆ ಬೈ ಪಡೆದಿತ್ತು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕಾದರೆ, ಭಾರತ ಎಲಿಮಿನೇಷನ್‌ ಸುತ್ತಿನಲ್ಲಿ ಎರಡು ಪಂದ್ಯಗಳನ್ನಷ್ಟೇ ಗೆಲ್ಲಬೇಕಾಗಿತ್ತು. ಸೆಮಿಫೈನಲ್ ತಲುಪುವ ನಾಲ್ಕು ತಂಡಗಳು, ರಿಕರ್ವ್ ವಿಭಾಗದಲ್ಲಿ ಪ್ಯಾರಿಸ್‌ಗೆ ಟಿಕೆಟ್‌ ಪಡೆಯಲಿವೆ.

ಆದರೆ ವಿಶ್ವ ಕ್ರಮಾಂಕದಲ್ಲಿ ಎಂಟನೇ ಸ್ಥಾನದಲ್ಲಿರುವ ಭಾರತ, ತನಗಿಂತ ಹತ್ತು ಸ್ಥಾನ ಕೆಳಗಿರುವ ಉಕ್ರೇನ್ ವಿರುದ್ಧ 3–1 ಮುನ್ನಡೆಯಿದ್ದರೂ, ಅದನ್ನು ಕಾಪಾಡುವಲ್ಲಿ ವಿಫಲವಾಗಿ 3–5 ರಲ್ಲಿ (51–51, 55–52, 53–54, 52–54) ಅಚ್ಚರಿಯ ಸೋಲು ಕಂಡಿತು.

ಭಜನ್ ಕೌರ್ ಮತ್ತು ಅಂಕಿತಾ ಅವರ ಅನನುಭವ ಭಾರತಕ್ಕೆ ದುಬಾರಿಯಾಯಿತು. ನಾಲ್ಕನೇ ಸೆಟ್‌ನಲ್ಲಿ ‘ಡ್ರಾ’ ಮಾಡಿಕೊಂಡಲ್ಲಿ ಪಂದ್ಯ ಶೂಟ್‌–ಆಫ್‌ಗೆ ಹೋಗುತಿತ್ತು. ಆದರೆ ಉಕ್ರೇನ್‌ನ ವೆರೋನಿಕಾ ಮರ್ಚೆಂಕೊ, ಅನಸ್ತೇಸಿಯಾ ಪಾವ್ಲೊವಾ ಮತ್ತು ಒಲ್ಹಾ ಚೆಬೊಟರೆಂಕೊ ಅವರು ಉತ್ತಮ ಪ್ರದರ್ಶನ ನೀಡಿ ತಂಡವನ್ನು ಕ್ವಾರ್ಟರ್‌ಫೈನಲ್‌ಗೆ ತಲುಪಿಸಿದರು.

ಪುರುಷರ ವಿಭಾಗದ ಕ್ವಾಲಿಫೈಯಿಂಟ್‌ ಸ್ಪರ್ಧೆ ಶನಿವಾರ ನಡೆಯಲಿದೆ. ಲಭ್ಯವಿರುವ ಮೂರು ಕೋಟಾಗಳಿಗೆ 46 ತಂಡಗಳ ನಡುವೆ ಉತ್ತಮ ಪೈಪೋಟಯಿದೆ.

ವೈಯಕ್ತಿಕ ಕೋಟಾ ಸ್ಪರ್ಧೆಗಳು ಭಾನುವಾರ ನಡೆಯಲಿವೆ.

ಅರ್ಹತೆಗಿದೆ ಇನ್ನೂ ಇದೆ ಅವಕಾಶ:

ಭಾರತ ಮಹಿಳಾ ರಿಕರ್ವ್‌ ತಂಡ, ರ‍್ಯಾಂಕಿಂಗ್ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲೂ ಇನ್ನೊಂದು ದಾರಿಯಿದೆ.

ಕ್ವಾಲಿಫಿಕೇಷನ್‌ ನಿಯಮಕ್ಕೆ ತಂದಿರುವ ಹೊಸ ತಿದ್ದುಪಡಿ ಪ್ರಕಾರ, ಕ್ವಾಲಿಫೈಯರ್ಸ್‌ ಮೂಲಕ ಪ್ರವೇಶ ಪಡೆಯದ ಅಗ್ರ ಕ್ರಮಾಂಕದ ಎರಡು ತಂಡಗಳಿಗೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಅವಕಾಶವಿದೆ.

ಭಾರತ ಸದ್ಯ ವಿಶ್ವ ಕ್ರಮಾಂಕದಲ್ಲಿ ಎಂಟನೇ ಸ್ಥಾನದಲ್ಲಿದೆ. ದಕ್ಷಿಣ ಕೊರಿಯಾ, ಜರ್ಮನಿ, ಫ್ರಾನ್ಸ್‌, ಮೆಕ್ಸಿಕೊ, ಅಮೆರಿಕ ರ್‍ಯಾಂಕಿಂಗ್‌ನಲ್ಲಿ  ಭಾರತಕ್ಕಿಂತ ಮೇಲೆ ಇದ್ದು ಈಗಾಗಲೇ ಪ್ಯಾರಿಸ್‌ ಕ್ರೀಡೆಗಳಿಗೆ ಅರ್ಹತೆ ಪಡೆದಿವೆ. ಎರಡನೇ ಕ್ರಮಾಂಕದ ಚೀನಾ ಮತ್ತು ಏಳನೇ ಕ್ರಮಾಂಕದ ಚೀನಾ ತೈಪೆ ಭಾರತಕ್ಕಿಂತ ಮೇಲಿವೆ. ಈ ಎರಡೂ ತಂಡಗಳು ಹಾಲಿ ಅಂತಿಮ ಕ್ವಾಲಿಫೈಯರ್ಸ್‌ನ ಕ್ವಾರ್ಟರ್‌ಫೈನಲ್ ತಲುಪಿವೆ. ಇನ್ನೊಂದು  ಪಂದ್ಯ ಗೆದ್ದರೆ ಅವು ಟೀಮ್‌ ಕೋಟಾ ಪಡೆಯಲಿವೆ. ಅವು ಅರ್ಹತಾ ಕೋಟಾ ಪಡೆದಲ್ಲಿ ನಂತರದ ಸ್ಥಾನದಲ್ಲಿರುವ ಭಾರತಕ್ಕೆ ಟೀಮ್‌ ಕೋಟಾದಡಿ ಪ್ಯಾರಿಸ್‌ ಟಿಕೆಟ್‌ ಪಡೆಯುವ ಅವಕಾಶ ಉಜ್ವಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT