ಮೆದಾನ್, ಇಂಡೊನೇಷ್ಯಾ (ಪಿಟಿಐ): ಭಾರತದ ಉದಯೋನ್ಮುಖ ಆಟಗಾರ ಕಿರಣ್ ಜಾರ್ಜ್ ಅವರು ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆದರು.
ಭಾನುವಾರ ನಡೆದ ಫೈನಲ್‌ನಲ್ಲಿ 23 ವರ್ಷದ ಕಿರಣ್ 21–19, 22–20 ರಿಂದ ಜಪಾನ್‌ನ ಕೂ ತಕಹಶಿ ಅವರನ್ನು ಮಣಿಸಿದರು. ಈ ಪಂದ್ಯ 56 ನಿಮಿಷ ನಡೆಯಿತು.
ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ (ಪಿಪಿಬಿಎ) ತರಬೇತಿ ಪಡೆಯುತ್ತಿರುವ ಕಿರಣ್, ವೃತ್ತಿಜೀವನದಲ್ಲಿ ಪಡೆದ ಎರಡನೇ ಬಿಡಬ್ಲ್ಯುಎಫ್ ವಿಶ್ವ ಟೂರ್ ಸೂಪರ್ 100 ಪ್ರಶಸ್ತಿ ಇದಾಗಿದೆ.
‘ಇದು ಅತ್ಯುತ್ತಮ ಗೆಲುವು. ಕಿರಣ್ ತಮಗೆ ಲಭಿಸಿದ ಅವಕಾಶಗಳನ್ನು ಬಳಸಿಕೊಂಡು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡರು. ಈ ಸಾಧನೆ ನನಗೆ ಸಂತಸ ನೀಡಿದೆ’ ಎಂದು ಪಿಪಿಬಿಎ ನಿರ್ದೇಶಕ ವಿಮಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕೇರಳದ ಕೊಚ್ಚಿಯ ಕಿರಣ್, ಕಳೆದ ವರ್ಷ ಒಡಿಶಾ ಓಪನ್ ಗೆದ್ದು ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಮೊದಲ ಗೇಮ್‌ನಲ್ಲಿ 1–4 ರಿಂದ ಹಿನ್ನಡೆಯಲ್ಲಿದ್ದ ಅವರು, ಮರುಹೋರಾಟ ನಡೆಸಿ 8–8 ರಿಂದ ಸಮಬಲ ಸಾಧಿಸಿದರು. ಆ ಬಳಿಕ ತುರುಸಿನ ಪೈಪೋಟಿ ನಡೆಯಿತು. 15–18 ರಿಂದ ಹಿನ್ನಡೆಯಲ್ಲಿದ್ದ ತಕಹಶಿ ಕೆಲವೊಂದು ಉತ್ತಮ ಹೊಡೆತಗಳ ಮೂಲಕ ಅಂತರವನ್ನು 19–20ಕ್ಕೆ ತಗ್ಗಿಸಿದರು. ಒತ್ತಡವನ್ನು ಮೆಟ್ಟಿನಿಂತ ಕಿರಣ್ ಮೊದಲ ಗೇಮ್ ಗೆದ್ದುಕೊಂಡರು.
ಎರಡನೇ ಗೇಮ್‌ನಲ್ಲಿ ಕಿರಣ್ 16–11 ರಿಂದ ಮೇಲುಗೈ ಪಡೆದರು. ಜಪಾನ್ ಆಟಗಾರ ಮರುಹೋರಾಟ ನಡೆಸಿ 19–19 ರಿಂದ ಸಮಬಲ ಸಾಧಿಸಿದರು. ಆ ಬಳಿಕ ತಮಗೆ ಲಭಿಸಿದ ಎರಡನೇ ಗೇಮ್ ಪಾಯಿಂಟ್ಅನ್ನು ಜಯಿಸಿದ ಭಾರತದ ಆಟಗಾರ ಚಾಂಪಿಯನ್ ಆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.