ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics 2024: ‘ಪ್ರೇಮನಗರಿ’ಯಲ್ಲಿ ಮನಗೆದ್ದ ಕ್ಷಣಗಳು

Published : 10 ಆಗಸ್ಟ್ 2024, 23:35 IST
Last Updated : 10 ಆಗಸ್ಟ್ 2024, 23:35 IST
ಫಾಲೋ ಮಾಡಿ
Comments
ಪ್ಯಾರಿಸ್‌: ಯಾವುದೇ ಕ್ರೀಡಾಕೂಟದಲ್ಲಿ ಪದಕ, ಪ್ರಶಸ್ತಿ ಜಯಿಸಿದವರು ಸಂಭ್ರಮಿಸುವುದು ಮತ್ತು ಸೋತವರು ಹತಾಶರಾಗುವುದು ಸಹಜ. ಇಂತಹ ಕ್ಷಣಗಳು ಒಂದಿಷ್ಟು ಕಾಲ ನೆನಪಿನಲ್ಲಿ ಉಳಿಯುತ್ತವೆ. ಆದರೆ ಸೋಲು, ಗೆಲುವಿನಾಚೆ ದಾಖಲಾಗುವ ಕ್ರೀಡಾಸ್ಫೂರ್ತಿಯ ಕ್ಷಣಗಳ ನೆನಪುಗಳಿಗೆ ದೀರ್ಘ ಆಯಸ್ಸು ಇರುತ್ತದೆ ಎಂಬುದು ಸುಳ್ಳಲ್ಲ. ಪ್ರತಿ ಒಲಿಂಪಿಕ್ಸ್‌ನಲ್ಲಿಯೂ ಇಂತಹ ಘಟನೆಗಳು ನಡೆಯುತ್ತವೆ. ಪ್ಯಾರಿಸ್ ಒಲಿಂಪಿಕ್ಸ್‌ ಕೂಡ ಇಂತಹ ಕೆಲವು ಕ್ಷಣಗಳಿಗೆ ಸಾಕ್ಷಿಯಾಗಿದೆ. ಅದರ ಪ್ರಮುಖವಾಗಿರುವ ಕೆಲ ಘಟನೆಗಳು ಇಲ್ಲಿವೆ.
1. ನೀರಜ್– ಅರ್ಷದ್ ಗಳಸ್ಯ ಕಂಠಸ್ಯ

ಭಾರತ ಮತ್ತು ಪಾಕಿಸ್ತಾನ ನಡುವಣ ಕ್ರಿಕೆಟ್, ಹಾಕಿ ಮತ್ತಿತರ ಪಂದ್ಯಗಳು ನಡೆದಾಗ ಎಂತಹ ವಾತಾವರಣ ಇರುತ್ತದೆ ಎಂಬುದು ಗೊತ್ತಿರುವ ವಿಷಯವೇ. ಆದರೆ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ತಾರೆಯರಾದ ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಂ ಅವರ ಆತ್ಮೀಯ ಸ್ನೇಹ ಈಗ ಜಗದಗಲ ಪಸರಿಸಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚಿನ್ನ ಗೆದ್ದಿದ್ದರು, ಆಗ ಪಾಕಿಸ್ತಾನದ ನದೀಂ ಐದನೇ ಸ್ಥಾನ ಪಡೆದಿದ್ದರು. ಅದರ ನಂತರ ಅವರಿಬ್ಬರ ಸ್ನೇಹ ದಿನದಿಂದ ದಿನಕ್ಕೆ ಗಟ್ಟಿಯಾಯಿತು. ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನೀರಜ್ ಚಿನ್ನ ಮತ್ತು ನದೀಂ ಬೆಳ್ಳಿ ಗೆದ್ದರು. ಒಬ್ಬರಿನ್ನೊಬ್ಬರ ಹೆಗಲ ಮೇಲೆ ಕೈಹಾಕಿಕೊಂಡು ಸಂಭ್ರಮಿಸಿದರು. ಇದೀಗ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನದೀಮ್  ಚಿನ್ನ ಗೆದ್ದರೆ, ನೀರಜ್ ಬೆಳ್ಳಿ ಜಯಿಸಿದ್ದಾರೆ. ಒಂದು ಕಾಲದಲ್ಲಿ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಅಮೆರಿಕ, ಯುರೋಪ್ ದೇಶಗಳ ಪ್ರಾಬಲ್ಯವಿತ್ತು. ಈಗ ನೀರಜ್  ಮತ್ತು ನದೀಂ ಗೆಳೆತನದಿಂದಾಗಿ ಏಷ್ಯಾದ ಶಕ್ತಿ ಹೆಚ್ಚಿದೆ. ಅಷ್ಟೇ ಅಲ್ಲ. ನೀರಜ್ ಮತ್ತು ನದೀಂ ಅವರ ತಾಯಂದಿರಿಬ್ಬರೂ ನೀಡಿದ ಹೇಳಿಕೆಗಳು ಸೌಹಾರ್ದತೆಯ ಸಂದೇಶವಾಗಿ ಜನಮನ ಸೆಳೆದಿವೆ.

ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಂ  –ಪಿಟಿಐ ಚಿತ್ರ 
ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಂ  –ಪಿಟಿಐ ಚಿತ್ರ 
2. ಬೈಲ್ಸ್‌–ರೆಬೆಕಾ ದೋಸ್ತಿ

ಮಹಿಳೆಯರ ಜಿಮ್ನಾಸ್ಟಿಕ್ಸ್ ಕ್ರೀಡೆಯಲ್ಲಿ ಅಮೆರಿಕದ ಸಿಮೊನ್ ಬೈಲ್ಸ್ ಮತ್ತು ಬ್ರೆಜಿಲ್‌ನ ರೆಬೆಕಾ ಆ್ಯಂಡ್ರೆಡ್ ಅವರ ನಡುವಿನ ಪೈಪೋಟಿ ಜಗಜ್ಜಾಹೀರು. ಯಾವುದೇ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಪದಕ ಗೆಲುವಿನಲ್ಲಿ ಇವರಿಬ್ಬರ ಸ್ಪರ್ಧೆಯು ತಾರಕಕ್ಕೇರುತ್ತದೆ. ಆದರೆ ಒಬ್ಬರಿನ್ನೊಬ್ಬರ ಸಾಧನೆಯನ್ನು ಪ್ರಶಂಸೆ ಮಾಡುವಾಗಲೂ ಮುಂಚೂಣಿಯಲ್ಲಿರುತ್ತಾರೆ.  ಹಾಗೆ ನೋಡಿದರೆ ರೆಬೆಕಾಗಿಂತ ಸಿಮೋನ್ ಇದುವರೆಗೆ ಹೆಚ್ಚು ಪದಕಗಳನ್ನು ಜಯಿಸಿರುವ ಚಾಂಪಿಯನ್ ಜಿಮ್ನಾಸ್ಟ್. ಆದರೆ ರೆಬೆಕಾ ಬಗ್ಗೆ ಅವರಿಗೆ ಅಪಾರ ಪ್ರೀತಿ. ಪ್ಯಾರಿಸ್ ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಸಿಮೊನ್ ಮೂರು ಚಿನ್ನ ಗೆದ್ದರು. ಫ್ಲೋರ್ ಎಕ್ಸ್‌ಸೈಜ್ ವಿಭಾಗದಲ್ಲಿಯೂ ಜಯಿಸಿದ್ದರೆ ಎಲ್ಲ ವಿಭಾಗದಲ್ಲಿಯೂ ಚಾಂಪಿಯನ್ ಆದಂತೆ ಆಗುತ್ತಿತ್ತು. ಆದರೆ, ಫ್ಲೋರ್‌ನಲ್ಲಿ ರೆಬೆಕಾ ಗೆದ್ದರು. ಸಿಮೊನ್ ಬೆಳ್ಳಿ ಪಡೆದರು. ಇದನ್ನು ಮನಸ್ಸಿಗೆ ಹಚ್ಚಿಕೊಳ್ಳದ ಸಿಮೊನ್  ಅವರು ರೆಬೆಕಾಳನ್ನು ಬಿಗಿದಪ್ಪಿ ಅಭಿನಂದಿಸಿದರು. ವಿಜಯ ವೇದಿಕೆಯಲ್ಲಿ ಪದಕ ಪಡೆದ ನಂತರ ಸಿಮೊನ್ ಅವರು ಮಂಡಿಯೂರಿ ತಮ್ಮ ತಲೆ ಬಾಗಿಸಿ ರೆಬೆಕಾಗೆ ಗೌರವ ಸಲ್ಲಿಸಿದರು. ಅವರಿಗೆ ಕಂಚಿನ ಪದಕ ಗೆದ್ದ ಜೋರ್ಡನ್ ಚಿಲ್ಸ್‌ ಕೂಡ ಜೊತೆಯಾದರು. 

3‌. ರಗ್ಬಿ ಸೆವೆನ್ ಚಿತ್ರಕಥೆ

ಮಹಿಳೆಯರ ರಗ್ಬಿಯಲ್ಲಿ ನ್ಯೂಜಿಲೆಂಡ್ ತಂಡವು ಅಮೋಘ ಜಯ ಸಾಧಿಸಿ ಚಿನ್ನದ ಪದಕ ಗಳಿಸಿತು. ಕೆನಡಾ ಮತ್ತು ಅಮೆರಿಕ ತಂಡಗಳು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದವು. 

ವಿಜಯ ವೇದಿಕೆಯಲ್ಲಿ ಪದಕ ಜಯಿಸಿದ ನಂತರ ನ್ಯೂಜಿಲೆಂಡ್ ತಂಡವು ಗ್ರೂಪ್‌ ಫೋಟೊ ತೆಗೆಸಿಕೊಂಡಿತು. ಆಗ ತಂಡದ ಆಟಗಾರ್ತಿಯರು ಕೆನಡಾ ಮತ್ತು ಅಮೆರಿಕ ತಂಡಗಳನ್ನು
ತಮ್ಮೊಂದಿಗೆ ಸೇರಿಸಿಕೊಂಡು ಸಮೂಹ ಚಿತ್ರ ತೆಗೆಸಿಕೊಂಡು ‘ನಾವು ಗೆಳತಿಯರು’ ಎಂಬ ಸಂದೇಶ ನೀಡಿದರು. ‌

ಸಿಮೊನ್ ಬೈಲ್ಸ್ (ಎಡ) ರೆಬೆಕಾ ಆ್ಯಂಡ್ರೆಡ್ ಮತ್ತು ಜಾರ್ಡನ್ ಚಿಲಿಸ್

ಸಿಮೊನ್ ಬೈಲ್ಸ್ (ಎಡ) ರೆಬೆಕಾ ಆ್ಯಂಡ್ರೆಡ್ ಮತ್ತು ಜಾರ್ಡನ್ ಚಿಲಿಸ್   

4. ವೈಲ್ಡ್ ಪ್ರೀತಿ

ಟ್ರಯಥ್ಲಾನ್‌ನಲ್ಲಿ ಬ್ರಿಟನ್‌ನ ಅಲೆಕ್ಸ್ ಯೀ ಮತ್ತು ನ್ಯೂಜಿಲೆಂಡ್‌ನ ಹೇಡನ್ ವೈಲ್ಡ್‌ ಅವರ ಪೈಪೋಟಿಯು ಕ್ರೀಡಾಲೋಕದಲ್ಲಿ ಗೊತ್ತಿರುವಂತದ್ದೆ. ಇಬ್ಬರು ಕಣಕ್ಕಿಳಿದರೆ ಶತಾಯಗತಾಯ ಪರಸ್ಪರ ಒಬ್ಬರಿನ್ನೊಬ್ಬರನ್ನು ಸೋಲಿಸಲು ಪ್ರಯತ್ನಿಸುತ್ತಾರೆ. ಈ ಬಾರಿಯೂ ಅದೇ ರೀತಿ ಸ್ಪರ್ಧಿಸಿದರು. 

ಆದರೆ ವೈಯಕ್ತಿಕ ವಿಭಾಗದಲ್ಲಿ ಟ್ರಯಥ್ಲಾನ್‌ ಸ್ಪರ್ಧೆಯ ಕೊನೆಯ 400 ಮೀಟರ್ಸ್ ಅಂತರದಲ್ಲಿ ಅಲೆಕ್ಸ್‌ ಅವರು ಹೇಡನ್ ಅವರನ್ನು ಹಿಂದಿಕ್ಕಿದರು. ಚಿನ್ನದ ಪದಕ ಗಳಿಸಿದರು. ರೇಸ್ ಮುಕ್ತಾಯವಾದ ಕೂಡಲೇ ಅಲ್ಲಿಯೇ ಇದ್ದ ನೀಲಿ ಕಾರ್ಪೆಟ್ ಮೇಲೆ ಹೇಡನ್ ಅವರು ಕುಳಿತರು. ಅಲೆಕ್ಸ್‌ ಅವರನ್ನು ಎಳೆದು ತಮ್ಮ ಪಕ್ಕಕ್ಕೆ ಕೂರಿಸಿಕೊಂಡು ಅಭಿನಂದಿಸಿದರು. ನಂತರ ಈ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿ ‘ಪ್ರೀತಿಯ ಗೆಳೆಯ ಒಲಿಂಪಿಕ್ ಚಾಂಪಿಯನ್ ಆಗಲು ನೀನು ಅರ್ಹ’  ಎಂದು ಒಕ್ಕಣೆ ಬರೆದರು. ತಮ್ಮ ಕ್ರೀಡಾಜೀವನದ ಅತಿ ದೊಡ್ಡ ‘ವೈರಿ’ಯ ಕುರಿತು ಅವರು ಸ್ನೇಹದ ಸಿಂಚನ ಹರಿಸಿದರು.

5.ನೆರವಿನ ಹಸ್ತ ಚಾಚಿದ ಸಿಲಿನಾ

ಅಥ್ಲೆಟಿಕ್ಸ್‌ನಲ್ಲಿ ಮಹಿಳೆಯರ 100 ಮೀಟರ್ಸ್‌ ಹೀಟ್ಸ್‌ನಲ್ಲಿ ನಡೆದ ಒಂದು ಘಟನೆಯು ಕ್ರೀಡಾಪ್ರೇಮಿಗಳ ಮನಸ್ಸು ಗೆದ್ದಿತು. ಈ ಓಟ ನಡೆಯುವ ಸಂದರ್ಭದಲ್ಲಿ ದಕ್ಷಿಣ ಸುಡಾನ್‌ ಸ್ಪರ್ಧಿ ಲೂಸಿಯಾ ಮಾರಿಸ್ ತಮ್ಮ ಕಾಲಿನ ಸ್ನಾಯುಸೆಳೆತದಿಂದಾಗಿ ಟ್ರ್ಯಾಕ್‌ ಮೇಲೆ ಉರುಳಿದರು. ಎಲ್ಲ ಸ್ಪರ್ಧಿಗಳೂ ಗೆಲುವಿನ ರೇಖೆ ಮುಟ್ಟಿದರು.  ಆಗಲೂ ಲೂಸಿಯಾ ಇನ್ನೂ ಟ್ರ್ಯಾಕ್‌ ಮೇಲೆಯೇ ಒರಗಿದ್ದರು. ನೋವಿನಿಂದ ನರಳುತ್ತಿದ್ದರು. ಅದನ್ನು ನೋಡಿದ   ಪ್ರತಿಸ್ಪರ್ಧಿ ಲಾವೊಸ್‌ನ ಸಿಲಿನಾ ಫಾ ಅಫೆ ಅವರು ಲೂಸಿಯಾ ಅವರತ್ತ ಧಾವಿಸಿದರು. ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದರು. ವೈದ್ಯಕೀಯ ಸಿಬ್ಬಂದಿ ಬಂದು ಸ್ಟ್ರೇಚರ್‌ಗೆ ಲೂಸಿಯಾ ಅವರನ್ನು ಹೊತ್ತೊಯ್ಯಲು ಕೂಡ ಸಿಲಿನಾ ಸಹಕರಿಸಿದರು.

ಯಾವುದೇ ಕ್ರೀಡಾಕೂಟದಲ್ಲಿ ಪದಕ, ಪ್ರಶಸ್ತಿ ಜಯಿಸಿದವರು ಸಂಭ್ರಮಿಸುವ ಮತ್ತು ಸೋತವರು ಹತಾಶರಾಗುವುದು ಸಹಜ. ಇಂತಹ ಕ್ಷಣಗಳು ಒಂದಿಷ್ಟು ಕಾಲ ನೆನಪಿನಲ್ಲಿ ಉಳಿಯುತ್ತವೆ. ಆದರೆ ಸೋಲು, ಗೆಲುವಿನಾಚೆ ದಾಖಲಾಗುವ ಕ್ರೀಡಾಸ್ಫೂರ್ತಿಯ ಕ್ಷಣಗಳ ನೆನಪುಗಳಿಗೆ ದೀರ್ಘ ಆಯಸ್ಸು ಇರುತ್ತದೆಯೆಂಬುದು ಸುಳ್ಳಲ್ಲ.  ಪ್ರತಿಯೊಂದು ಒಲಿಂಪಿಕ್ಸ್‌ನಲ್ಲಿಯೂ ಇಂತಹ ಘಟನೆಗಳು ನಡೆಯುತ್ತವೆ. ಪ್ಯಾರಿಸ್ ಒಲಿಂಪಿಕ್ಸ್‌ ಕೂಡ ಇಂತಹ ಕೆಲವು ಕ್ಷಣಗಳಿಗೆ ಸಾಕ್ಷಿಯಾಗಿದೆ. ಅದರ ಪ್ರಮುಖವಾಗಿರುವ 10 ಘಟನೆಗಳು ಇಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT