ಪುಣೆ : ಪ್ರತಿಭಾನ್ವಿತ ಆಟಗಾರ್ತಿ ಯರಾದ ದಿಶಾ ಸಂತೋಷ್ ಮತ್ತು ಆರಾಧ್ಯ ಶರ್ಮಾ ಅವರು ಇಂಡಿಯಾ ಜೂನಿಯರ್ ಇಂಟರ್‌ನ್ಯಾಷನಲ್ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಶ್ರೇಯಾಂಕ ಆಟಗಾರ್ತಿಯರನ್ನು ಸೋಲಿಸಿ ಗಮನಸೆಳೆದರು.
ಬುಧವಾರ ನಡೆದ ಪಂದ್ಯದಲ್ಲಿ ದಿಶಾ 21–15, 21–18 ರಿಂದ ಆರನೇ ಶ್ರೇಯಾಂಕದ ಲಿಯಾವೊ ಜುಯಿ–ಚಿ (ಚೀನಾ ತೈಪಿ) ವಿರುದ್ಧ ಜಯಗಳಿಸಿದರು.
ಅಗ್ರ ಶ್ರೇಯಾಂಕದ ಪ್ರಕೃತಿ ಭರತ್ 21–10, 21–13 ರಿಂದ ಸಾರಾ ಶರ್ಮಾ ವಿರುದ್ಧ ಗೆಲುವು ಪಡೆದರು. ಕರ್ನಾಟಕದ ರುಜುಲಾ ರಾಮು 19–21, 21–15, 21–5 ರಿಂದ 16ನೇ ಶ್ರೇಯಾಂಕದ ಯಶ್ವಿ ಭಟ್ ವಿರುದ್ಧ ಜಯಗಳಿಸಿದರು.
ಬಾಲಕರ ಸಿಂಗಲ್ಸ್‌ನಲ್ಲಿ ಅರ್ಹತಾ ಸುತ್ತಿನಿಂದ ಬಂದಿದ್ದ ಆರಾಧ್ಯ 15–21, 21–7, 21–15 ರಿಂದ ಐದನೇ ಶ್ರೇಯಾಂಕದ ಸಾಯಿಪ್ರಸಾದ್ ತೀಗಳ ವಿರುದ್ಧ ಜಯಗಳಿಸಿದರು.
ಪ್ರತೀಕ್ ಕೌಂಡಿಲ್ಯ 21–19, 21–12 ರಿಂದ ಹತ್ತನೇ ಶ್ರೇಯಾಂಕದ ಸಾಯಿ ಶ್ರೇಯಸ್ ಪಲ್ಲೇರ್ಲ ವಿರುದ್ಧ ಜಯ ಪಡೆದರು. ತಂಕರ ಜ್ಞಾನದತ್ತು 20–22, 21–19, 23–21 ರಿಂದ ಆಸ್ಟ್ರೇಲಿಯಾದ ಶ್ರೇಯ್ ಧಂಡ್ ಅವರನ್ನು ಮಣಿಸಿದರು. ಅಭಿಷೇಕ್ ಕನಪಲ 21–16, 21–11 ರಿಂದ ಶೌರಿನ್ ಅಬ್ಬಾಸಿ ವಿರುದ್ಧ ಗೆದ್ದು ಎರಡನೇ ಸುತ್ತಿಗೆ ಮುನ್ನಡೆದರು.