ನವದೆಹಲಿ: ‘ಭಾರತದ ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಂ ನಡುವಿನ ಒಡನಾಟವು ಎಲ್ಲೂ ಗಡಿಯನ್ನು ಮೀರಿದೆ’ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದಾರೆ.
‘ಸ್ಪರ್ಧೆಯ ಬಳಿಕ ನೀರಜ್ ಮತ್ತು ನದೀಂ ಅವರು ಪರಸ್ಪರ ಮಾತನಾಡುತ್ತಿದ್ದ ಕೆಲವು ಚಿತ್ರಗಳನ್ನು ನಾವು ನೋಡಿದ್ದೇವೆ. ಇಬ್ಬರೂ ತಮ್ಮ ದೇಶದ ಧ್ವಜಗಳನ್ನು ಹಿಡಿದು ಒಬ್ಬರನ್ನೊಬ್ಬರು ಕ್ರೀಡಾಪಟುವಾಗಿ ಗೌರವಿಸುತ್ತಾರೆ. ಕ್ರೀಡೆಗೆ ಗಡಿಯಿಲ್ಲ, ಅದು ಎಲ್ಲರನ್ನೂ ಒಂದುಗೂಡಿಸುತ್ತದೆ ಎಂಬುದನ್ನು ತೋರಿಸಿದ್ದಾರೆ. ಆದ್ದರಿಂದ ಅವರಿಬ್ಬರೂ ಉತ್ತಮ ಸಂದೇಶ ರವಾನಿಸಿದ್ದಾರೆ’ ಎಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ.
‘ನಾವು ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಆಡುವಾಗ ನಿಸ್ಸಂಶಯವಾಗಿ ಸ್ಪರ್ಧಾತ್ಮಕರಾಗಿದ್ದೇವೆ. ಆದರೆ, ಮೈದಾನದ ಹೊರಗೆ ಬಂದಾಗ ಉತ್ತಮ ಬಾಂಧವ್ಯವನ್ನು ಹಂಚಿಕೊಳ್ಳುತ್ತೇವೆ’ ಎಂದು ಮಾಜಿ ಸ್ಪಿನ್ನರ್, ರಾಜ್ಯಸಭೆಯ ಸದಸ್ಯರೂ ಆಗಿರುವ ಹರ್ಭಜನ್ ತಿಳಿಸಿದ್ದಾರೆ.