ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹೊಣೆ, ಹೊಸ ಕನಸು...

Last Updated 23 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಲೋಕದಲ್ಲಿ ಕರ್ನಾಟಕದ ಅರವಿಂದ್‌ ಸವುರ್‌ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಎಪ್ಪತ್ತರ ದಶಕದಲ್ಲಿ ಡೆನಿಶ್‌ ಟೇಲರ್‌,ವಿಲ್ಲೀ ಥೋರ್ನ್‌,ಫ್ಯಾಟ್‌ ಫೇಗನ್‌ ಅವರಂತಹ ಘಟಾನುಘಟಿ ಆಟಗಾರರನ್ನು ಮಣಿಸಿ ಗಮನ ಸೆಳೆದಿದ್ದ ಸವುರ್‌,1972 ಮತ್ತು 1980ರ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿದ್ದ ಹಿರಿಮೆ ಹೊಂದಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಆಟಗಾರ ಎಂಬ ದಾಖಲೆ ಅವರದ್ದು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಬಾರಿ ಪ್ರಶಸ್ತಿ ಜಯಿಸಿರುವ ಅರವಿಂದ್‌,ಕೋಚ್‌ ಆಗಿಯೂ ಅಪಾರ ಯಶಸ್ಸು ಕಂಡಿದ್ದಾರೆ. ಇವರು 19 ಬಾರಿಯ ವಿಶ್ವ ಚಾಂಪಿಯನ್‌ ಪಂಕಜ್‌ ಅಡ್ವಾಣಿ ಅವರ ಗುರು. ಸವುರ್‌ ಅವರು 1998ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ಬಿಲಿಯರ್ಡ್ಸ್‌ ತಂಡದ ಮುಖ್ಯ ಕೋಚ್‌ ಆಗಿದ್ದರು. ಇವರ ಸಾಧನೆಗೆ ಅರ್ಜುನ (1979–80) ಮತ್ತು ದ್ರೋಣಾಚಾರ್ಯ (2004) ಗೌರವಗಳು ಸಂದಿವೆ.

ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆಯ (ಕೆಎಸ್‌ಬಿಎ) ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅರವಿಂದ್‌,ತಮ್ಮ ಮುಂದಿರುವ ಸವಾಲು ಹಾಗೂ ಯೋಜನೆಗಳ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ಕೆಎಸ್‌ಬಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ. ಈಗ ನಿಮ್ಮ ಮುಂದಿರುವ ಸವಾಲುಗಳೇನು?

1997ರಲ್ಲಿ ಮೊದಲ ಬಾರಿಗೆ ಅಧ್ಯಕ್ಷನಾಗಿದ್ದೆ. 20 ವರ್ಷಗಳ ನಂತರ ಈಗ ಮತ್ತೆ ಈ ಹುದ್ದೆಯನ್ನು ಅಲಂಕರಿಸಿದ್ದೇನೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಖಂಡಿತವಾಗಿಯೂ ಆಸಕ್ತಿ ಇರಲಿಲ್ಲ. ಕ್ರೀಡೆಯ ಅಭಿವೃದ್ಧಿಯ ದೃಷ್ಟಿಯಿಂದ ನೀವು ಚುನಾವಣೆಗೆ ನಿಲ್ಲಲೇಬೇಕು ಎಂದು ಬಹಳಷ್ಟು ಮಂದಿ ಬಲವಂತ ಮಾಡಿದರು. ಅವರ ಒತ್ತಡಕ್ಕೆ ಮಣಿದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದಿದ್ದೇನೆ. ಹೀಗಾಗಿ ತುಂಬಾ ಖುಷಿಯಾಗಿದೆ. ಕೆಎಸ್‌ಬಿಎಯಲ್ಲಿ ಮೊದಲಿನಿಂದಲೂ ಗುಂಪುಗಾರಿಕೆ ಇದೆ. ಮೊದಲು ಅದಕ್ಕೆ ಕಡಿವಾಣ ಹಾಕಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನಡೆಸುವುದು ನನ್ನ ಗುರಿ. ಆ ನಿಟ್ಟಿನಲ್ಲಿಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.

ಕ್ರೀಡೆಯ ಅಭಿವೃದ್ಧಿಗೆ ನೀವು ರೂಪಿಸಿರುವ ಯೋಜನೆಗಳೇನು?

ತುಂಬಾ ಯೋಜನೆಗಳು ಇವೆ. ಕೆಎಸ್‌ಬಿಎಯಲ್ಲಿ ಈಗ ಕೇವಲ ಒಂದು ಬಿಲಿಯರ್ಡ್ಸ್‌ ಟೇಬಲ್‌ ಇದೆ. ಸದ್ಯದಲ್ಲೇ ಇನ್ನೆರಡು ಟೇಬಲ್‌ ಹಾಕಿಸುವ ಆಲೋಚನೆ ಇದೆ. ಇದರಿಂದ ಆಟಗಾರರಿಗೆ ಅಭ್ಯಾಸ ನಡೆಸಲು ಹೆಚ್ಚು ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಿಗೂ ಭೇಟಿ ನೀಡಿ ಮಕ್ಕಳಿಗೆ ತರಬೇತಿ ನೀಡಬೇಕು ಅಂದುಕೊಂಡಿದ್ದೇನೆ. ಎಲ್ಲಾ ಶಾಲೆಗಳಿಗೂ ಒಂದೊಂದು ಬಿಲಿಯರ್ಡ್ಸ್‌ ಟೇಬಲ್‌ ಕೊಡಿಸುವ ಬಗ್ಗೆಯೂ ಚಿಂತಿಸಿದ್ದೇವೆ. ಇದಕ್ಕಾಗಿ ಪ್ರಾಯೋಜಕರನ್ನು ಹುಡುಕುತ್ತಿದ್ದೇವೆ.

ಗ್ರಾಮೀಣ ಭಾಗದಲ್ಲಿ ಕ್ರೀಡೆಯನ್ನು ಅಭಿವೃದ್ಧಿಪಡಿಸಲು ಒತ್ತು ನೀಡುತ್ತೀರಾ?

ಖಂಡಿತವಾಗಿಯೂ. 25 ವರ್ಷಗಳ ಹಿಂದೆ ನಾನು ಕೆಎ‌ಸ್‌ಬಿಎ ಮಾನ್ಯತೆ ಹೊಂದಿರುವ 40ಕ್ಕೂ ಹೆಚ್ಚು ಗ್ರಾಮಾಂತರ ಕ್ಲಬ್‌ಗಳಿಗೆ ಭೇಟಿ ನೀಡಿ ಮಕ್ಕಳಿಗೆ,ಯುವಕರಿಗೆ ಮತ್ತು ಹಿರಿಯರಿಗೆ ಮಾರ್ಗದರ್ಶನ ನೀಡಿದ್ದೆ. ಜೊತೆಗೆ ನನ್ನ ಮನೆಯಲ್ಲಿ 250ಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡುತ್ತಿದ್ದೆ. ಈಗಲೂ ಎಲ್ಲಾ ಭಾಗಗಳಿಗೂ ಭೇಟಿ ನೀಡಿ ಅಲ್ಲಿ ತರಬೇತಿ ಕಾರ್ಯಗಾರಗಳನ್ನು ನಡೆಸುವ,ಆ ಮೂಲಕ ಮಕ್ಕಳು ಮತ್ತು ಯುವಕರಲ್ಲಿ ಈ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಬೇಕೆಂಬ ಉದ್ದೇಶ ಇದೆ.

ಸ್ನೂಕರ್‌ ಶ್ರೀಮಂತರ ಕ್ರೀಡೆ ಎಂಬ ಭಾವನೆ ಅನೇಕರಲ್ಲಿ ಇದೆಯಲ್ಲ?

ಇದು ತಪ್ಪು ಕಲ್ಪನೆ. ಟೇಬಲ್‌ ಟೆನಿಸ್‌,ಟೆನಿಸ್‌ ಹೀಗೆ ಯಾವುದೇ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕಾದರೆ ಕ್ಲಬ್‌ಗಳ ಸದಸ್ಯತ್ವ ಪಡೆಯಬೇಕಾಗುತ್ತದೆ. ಸದಸ್ಯತ್ವ ಪಡೆಯುವುದು ಸ್ವಲ್ಪ ಕಷ್ಟ. ಈ ಕಾರಣದಿಂದ ಈ ಕ್ರೀಡೆಗಳನ್ನು ಶ್ರೀಮಂತರ ಕ್ರೀಡೆ ಎಂದು ಬಹತೇಕರು ಭಾವಿಸುತ್ತಾರೆ. ಕ್ಲಬ್‌ಗಳು ಸಾಕಷ್ಟು ಹಣ ಹೂಡಿರುತ್ತವೆ. ಹೀಗಾಗಿ ಅಲ್ಲಿ ಆಡುವವರು ಗಂಟೆಗೆ ಇಂತಿಷ್ಟು ಹಣ ನೀಡಬೇಕಾಗುತ್ತದೆ. ಬೇರೆ ಕ್ರೀಡೆಗಳಿಗೆ ಹೋಲಿಸಿದರೆ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಕಲಿಕೆಗೆ ತಗಲುವ ವೆಚ್ಚ ತುಂಬಾ ಕಡಿಮೆ.

ಪಂಕಜ್‌ ಅವರನ್ನು ಬಿಟ್ಟರೆ ಈ ಕ್ರೀಡೆಯಲ್ಲಿ ಯಾರೂ ಎತ್ತರದ ಸಾಧನೆ ಮಾಡಿಲ್ಲ. ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಬರವಿದೆಯೇ?

ನಮ್ಮಲ್ಲಿ ಪ್ರತಿಭೆಗಳಿಗೆ ಬರವಿಲ್ಲ. ಜಯರಾಮ್‌,ಶ್ರೀನಿವಾಸ್‌ ಮೂರ್ತಿ ಮತ್ತು ಬಿ.ಭಾಸ್ಕರ್‌ ಅವರಂತಹ ಅನೇಕರು ರಾಜ್ಯಮಟ್ಟದ ಟೂರ್ನಿಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ್ದಾರೆ. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಮರ್ಥ್ಯ ತೋರಲು ಇವರಿಗೆ ಸಾಧ್ಯವಾಗಿಲ್ಲ. ಈಗ ಸಾಕಷ್ಟು ಮಂದಿ ಹೊಸಬರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ನಮ್ಮಲ್ಲಿ ಅತ್ಯಾಧುನಿಕ ಮೂಲ ಸೌಕರ್ಯಗಳಿವೆ. ನಮ್ಮವರ ಆಟದ ಗುಣಮಟ್ಟವೂ ಚೆನ್ನಾಗಿದೆ. ಹೆಚ್ಚೆಚ್ಚು ಟೂರ್ನಿಗಳನ್ನು ಆಯೋಜಿಸುವ ಮೂಲಕ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.

ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ನಲ್ಲಿ ದೊಡ್ಡ ಸಾಧನೆ ಮಾಡಿದರೂ ಸರ್ಕಾರದಿಂದ ಉದ್ಯೋಗ ಸಿಗುವುದಿಲ್ಲ. ಈ ಕಾರಣದಿಂದಲೇ ಅನೇಕರು ಈ ಕ್ರೀಡೆಯಿಂದ ವಿಮುಖರಾಗುತ್ತಿದ್ದಾರೆ ಎಂಬ ಮಾತಿದೆಯಲ್ಲ?

ಎಲ್ಲಾ ಕ್ರೀಡೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಕ್ರೀಡಾಪಟುಗಳಿಗೆರಾಜ್ಯ ಮತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಲು ಅಗತ್ಯವಿರುವ ಎಲ್ಲಾ ಸಹಕಾರವನ್ನೂ ನಾವು ನೀಡುತ್ತಿದ್ದೇವೆ. ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಆಡಲು ಸಾಕಷ್ಟು ಹಣ ವೆಚ್ಚವಾಗುತ್ತದೆ. ಈ ನಿಟ್ಟಿನಲ್ಲಿ ಕ್ರೀಡಾಪಟುಗಳಿಗೆ ಸರ್ಕಾರದ ಸಹಕಾರ ಅಗತ್ಯ. ನಮ್ಮ ಕ್ರೀಡೆಯಲ್ಲಿ ಎಷ್ಟೇ ಸಾಧನೆ ಮಾಡಿದರೂ ಬೇಗನೆ ಗುರುತಿಸುವುದಿಲ್ಲ. ಆದ್ದರಿಂದ ಸಹಜವಾಗಿಯೇ ನೋವಾಗುತ್ತದೆ. ಹೀಗಿದ್ದರೂ ಪಂಕಜ್‌ ಅಡ್ವಾಣಿ ಛಲಬಿಡದೆ,ಸಾಗಿದ ಹಾದಿಯಲ್ಲೆಲ್ಲಾ ಸಾಧನೆಯ ಮೈಲುಗಲ್ಲು ಸ್ಥಾಪಿಸುತ್ತಿದ್ದಾರೆ. ಅವರು ಎಲ್ಲರಿಗೂ ಆದರ್ಶವಾಗಲಿ.

ಒಲಿಂಪಿಕ್ಸ್‌ನಲ್ಲಿ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಕ್ರೀಡೆಯನ್ನು ಸೇರ್ಪಡೆ ಮಾಡಬೇಕೆಂಬ ಕೂಗು ಬಲವಾಗಿ ಕೇಳಿ ಬರುತ್ತಿದೆಯಲ್ಲ?

ಹೌದು,ಈ ನಿಟ್ಟಿನಲ್ಲಿ ಫೆಡರೇಷನ್‌ ಮೊದಲಿನಿಂದಲೂ ಹೋರಾಟ ನಡೆಸುತ್ತಿದೆ.ಇದು ಇನ್ನಷ್ಟು ತೀವ್ರತೆ ಪಡೆದುಕೊಳ್ಳಬೇಕು. ಒಲಿಂಪಿಕ್ಸ್‌ ಸಮಿತಿಗೆಈ ಕ್ರೀಡೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿನನ್ನಿಂದಾದ ಎಲ್ಲಾ ಪ್ರಯತ್ನ ಮಾಡುತ್ತೇನೆ.

ನೀವು ಅಧಿಕಾರವಹಿಕೊಂಡ ನಂತರ,ಏಳು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೇಯರ್‌ ಕಪ್‌ ಸ್ನೂಕರ್‌ ಟೂರ್ನಿಯನ್ನು ಆಯೋಜಿಸಿದ್ದೀರಿ. ಇದರ ಬಗ್ಗೆ ಏನಂತೀರಿ?

ಹಿಂದಿನ 20 ವರ್ಷಗಳ ಅವಧಿಯಲ್ಲಿ ದೊಡ್ಡ ಮಟ್ಟದ ಟೂರ್ನಿ ನಡೆಯದಿರುವುದು ಬೇಸರ ತರಿಸಿತ್ತು. ಆಟಗಾರರೂ ಈ ಕುರಿತು ಅಳಲು ತೋಡಿಕೊಂಡಿದ್ದರು. ಮೇಯರ್‌ ಸಂಪತ್‌ ರಾಜ್‌ ಅವರು ನಮ್ಮ ಕ್ಲಬ್‌ನ ಸದಸ್ಯರು. ನಾನು ಅಧಿಕಾರ ವಹಿಸಿಕೊಂಡ ನಂತರ ಅವರನ್ನು ಭೇಟಿ ಮಾಡಿದೆ. ಈ ವೇಳೆ ಮೇಯರ್‌ ಕಪ್‌ ಬಗ್ಗೆ ವಿಷಯ ಪ್ರಸ್ತಾಪಿಸಿ ಟೂರ್ನಿ ನಡೆಸಲು ಸಹಕಾರ ನೀಡುವಂತೆ ಕೇಳಿಕೊಂಡೆವು. ಅವರು ನಮ್ಮ ಮನವಿಗೆ ಸ್ಪಂದಿಸಿ ಶೀಘ್ರವೇ ₹ 10 ಲಕ್ಷ ಬಿಡುಗಡೆ ಮಾಡಿದರು. ಹೀಗಾಗಿ ಅಧ್ಯಕ್ಷನಾಗಿ ಒಂದು ತಿಂಗಳು ಕಳೆಯುವುದರೊಳಗೆ ಈ ಟೂರ್ನಿ ಆಯೋಜಿಸಲು ಸಾಧ್ಯವಾಯಿತು. ಇದರಿಂದ ತುಂಬಾ ಖುಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT