ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ ಶೂಟಿಂಗ್ ರೇಂಜ್‌ನಲ್ಲಿ ಒಲಿಂಪಿಯನ್ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್

ಹಾಕಿ ಅಂಗಣಕ್ಕೆ ಸೋಮಯ್ಯ, ಸಂದೀಪ್‌, ರವಿ ಭೇಟಿ; ಸ್ಪರ್ಧಾ ಕಣದಲ್ಲಿ ಐಶ್ವರ್ಯ ತೋಮರ್
Last Updated 29 ಏಪ್ರಿಲ್ 2022, 4:58 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರದ ಶೂಟಿಂಗ್ ರೇಂಜ್‌ನಲ್ಲಿ ಒಲಿಂಪಿಯನ್ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಗಮನ ಸೆಳೆಯುತ್ತಿದ್ದಾರೆ. ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ 50 ಮೀಟರ್ಸ್ ರೈಫಲ್ –3 ಪೊಸಿಷನ್‌ನ ಅಭ್ಯಾಸದ ವೇಳೆ ಕಾಣಿಸಿಕೊಂಡ ಅವರು ಸ್ಪರ್ಧೆಗೆ ಸಜ್ಜಾಗಿದ್ದಾರೆ.

21 ವರ್ಷದ ಶೂಟರ್ ತೋಮರ್ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಖೇಲೊ ಇಂಡಿಯಾ ಕೂಟದಲ್ಲಿ ಅಮೃತ್‌ಸರದ ಗುರುನಾನಕ್ ದೇವ್ ವಿವಿ ಪರವಾಗಿ ಕಣಕ್ಕೆ ಇಳಿಯಲಿದ್ದಾರೆ.

‘ಖೇಲೊ ಇಂಡಿಯಾ ಕ್ರೀಡಾಕೂಟವು ಅಂತರರಾಷ್ಟ್ರೀಯ ಮಟ್ಟದ ಕೂಟಕ್ಕೆ ಸಮಾನವಾಗಿದೆ. ಇಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬರಿಗೂ ಉನ್ನತ ಮಟ್ಟದ ಎದುರಾಳಿಗಳು ಇದ್ದಾರೆ. ಮುಂದಿನ ಹಾದಿಗೆ ಅದು ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.

’ಒಲಿಂಪಿಯನ್ನರ ಪೈಕಿ ಅನೇಕರು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು. ಅವರೆಲ್ಲರೂ ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತಾಗಬೇಕು. ಇದರಿಂದ ಅವರಿಗೆ ಹೊಸ ವಿಷಯಗಳನ್ನು ಕಲಿಯುವ ಅವಕಾಶ ಸಿಗಲಿದೆ. ನಾನು ಈ ಕಾರಣದಿಂದಲೇ ಇಲ್ಲಿಗೆ ಬಂದಿದ್ದೇನೆ. ಯುವ ಶೂಟರ್‌ಗಳ ಜೊತೆ ಮಾತನಾಡಿ ಅವರಿಗೆ ಅಗತ್ಯ ಸಲಹೆ ನೀಡಲು ತಯಾರಿದ್ದೇನೆ’ ಎಂದು ಅವರು ನುಡಿದರು.

ಕಳೆದ ವರ್ಷ ದೆಹಲಿಯಲ್ಲಿ ನಡೆದ ಐಎಸ್‌ಎಸ್ಎಫ್‌ ವಿಶ್ವಕಪ್‌ನಲ್ಲಿ ತೋಮರ್ 50 ಮೀ ರೈಫಲ್ –3 ಪೊಸಿಷನ್‌ ಸ್ಪರ್ಧೆಯಲ್ಲಿ ಚಿನ್ನ ಗಳಿಸಿದ್ದರು. ಪುರುಷರ 10 ಏರ್‌ ರೈಫೈಲ್‌ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು 50 ಮೀ ರೈಫಲ್ –3 ಪೊಸಿಷನ್‌ನ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದರು.

ಅಂಗಣದಲ್ಲಿ ಒಲಿಂಪಿಯನ್ ಹಾಕಿಪಟುಗಳು

ಖೇಲೊ ಇಂಡಿಯಾ ಕ್ರೀಡಾಕೂಟದ ಐದನೇ ದಿನ ಕ್ರೀಡಾಂಗಣಗಳಲ್ಲಿ ಕಾಣಿಸಿಕೊಂಡ ಒಲಿಂಪಿಯನ್ನರು ಅಥ್ಲೀಟ್‌ಗಳಲ್ಲಿ ರೋಮಾಂಚನ ಉಂಟುಮಾಡಿದರು. ರಾಜ್ಯ ಹಾಕಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಎಂ.ಎಂ.ಸೋಮಯ್ಯ, ಅನಿಲ್ ಆಲ್ಡ್ರಿನ್, ಸಂದೀಪ್ ಸೋಮೇಶ್ ಮತ್ತು ರವಿ ನಾಯ್ಕರ್ ಹಾಕಿ ಪಂದ್ಯಗಳನ್ನು ವೀಕ್ಷಿಸಿ ಆಟಗಾರರಿಗೆ ಹುರುಪು ತುಂಬಿದರು.

ಕೊಡಗಿನ ಸೋಮಯ್ಯ 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಕೇರಳದ ತಿರುವನಂತಪುರದಲ್ಲಿ ಜನಿಸಿದ ಡಿಫೆಂಡರ್ ಅನಿಲ್ ಆಲ್ಡ್ರಿನ್ 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಭಾರತ ತಂಡದ ನಾಯಕರಾಗಿಯೂ ಗಮನ ಸೆಳೆದಿದ್ದಾರೆ. ಸಂದೀಪ್ ಸೋಮೇಶ್ ಮತ್ತು ರವಿ ನಾಯ್ಕರ್ ಬಾರ್ಸಿಲೋನ ಒಲಿಂಪಿಕ್ಸ್‌ನಲ್ಲಿ ಆಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT