ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಾ ಶಟ್ಲರ್‌ ಭಗತ್‌ಗೆ 18 ತಿಂಗಳ ನಿಷೇಧ

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಕಳೆದುಕೊಳ್ಳಲಿರುವ ಟೋಕಿಯೊ ಚಿನ್ನ ವಿಜೇತ
Published 13 ಆಗಸ್ಟ್ 2024, 5:55 IST
Last Updated 13 ಆಗಸ್ಟ್ 2024, 5:55 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ನ ಡೋಪಿಂಗ್‌ ನಿಗ್ರಹ ನಿಯಮದ ‘ವಾಸ್ತವ್ಯ ಅಧಿನಿಯಮ’ ಉಲ್ಲಂಘಿಸಿದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್‌ ಭಗತ್‌ ಅವರ ಮೇಲೆ 18 ತಿಂಗಳ ನಿಷೇಧ ಹೇರಲಾಗಿದೆ. ಟೋಕಿಯೊ ಪ್ಯಾರಾ ಕ್ರೀಡೆಗಳಲ್ಲಿ ಚಿನ್ನ ವಿಜೇತರಾಗಿದ್ದ ಅವರು ಪ್ಯಾರಿಸ್‌  ಪ್ಯಾರಾಲಿಂಪಿಕ್ಸ್‌ನಲ್ಲಿ ಅದನ್ನು ಉಳಿಸಿಕೊಳ್ಳುವ ಅವಕಾಶ ಕಳೆದುಕೊಂಡು ಆಘಾತ ಎದುರಿಸುವಂತಾಗಿದೆ.

‘2020ರ ಪ್ಯಾರಾಲಿಂಪಿಕ್‌ ಚಾಂಪಿಯನ್‌ ಪ್ರಮೋದ್ ಭಗತ್‌ ಅವರ ಮೇಲೆ 18 ತಿಂಗಳ ನಿಷೇಧ ಹೇರಲಾಗಿದ್ದು, ಅವರು ಪ್ಯಾರಿಸ್‌ 2024 ಪ್ಯಾರಾಲಿಂಪಿಕ್ಸ್‌ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ (ಬಿಡಬ್ಲ್ಯುಎಫ್‌) ಖಚಿತಪಡಿಸುತ್ತದೆ’ ಎಂದು ಫೆಡರೇಷನ್ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ಉದ್ದೀಪನ ಮದ್ದುಪರೀಕ್ಷೆಗೆ ಬರುವ ಸಿಬ್ಬಂದಿಗೆ 12 ತಿಂಗಳಲ್ಲಿ ಮೂರು ಬಾರಿ ವಾಸ್ತವ್ಯ ಮಾಹಿತಿ ನೀಡದಿದ್ದರೆ ಅದನ್ನು ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. 2024ರ ಮಾರ್ಚ್‌ 1ರಂದು ಭಗತ್ ಅವರು ಮೂರನೇ ಬಾರಿ ವಾಸ್ತವ್ಯ ಸ್ಥಳದ ಮಾಹಿತಿ ನೀಡದಿರುವುದನ್ನು ಕ್ರೀಡಾ ನ್ಯಾಯ ಮಂಡಳಿಯ (ಸಿಎಎಸ್‌) ಉದ್ದೀಪನ ಮದ್ದುಸೇವನೆ ವಿಭಾಗವು ಪರಿಗಣಿಸಿ ನಿಷೇಧಕ್ಕೆ ಮುಂದಾಗಿದೆ.

36 ವರ್ಷವಯಸ್ಸಿನ ಭಗತ್ ಅವರು ಎಸ್‌ಎಲ್‌3 ಅಥ್ಲೀಟ್‌ ಆಗಿದ್ದಾರೆ. ‘ಈ ನಿರ್ಧಾರದಿಂದ ಬೇಸರವಾಗಿದೆ. ತಾಂತ್ರಿಕ ಸಮಸ್ಯೆಯ ಪರಿಣಾಮ ಈ ರೀತಿ ಆಗಿದೆ’ ಎಂದಿದ್ದಾರೆ.

‘ನನ್ನ ಪಾಲಿಗೆ ಈ ನಿರ್ಧಾರ ಅತ್ಯಂತ ಕಠಿಣವೆನಿಸಿದೆ. ವಿಶ್ವ ಉದ್ದೀಪನ ಮದ್ದುಸೇವನೆ ತಡೆ ಸಂಸ್ಥೆ (ವಾಡಾ)ಯ ಬಗ್ಗೆ ನನಗೆ ಗೌರವವಿದೆ. ಅದು ಎಲ್ಲ ಆಟಗಾರರಿಗೆ ನಿಯಮದ ಚೌಕಟ್ಟು ರೂಪಿಸಿದೆ. ಆದರೆ ತಾಂತ್ರಿಕ ಕಾರಣ ಮುಂದಿಟ್ಟು ನಿಷೇಧ ಹೇರುವುದು ಸರಿಯಲ್ಲ’ ಎಂದು ಬಿಹಾರದವರಾದ ಭಗತ್‌ ಪಿಟಿಐಗೆ ತಿಳಿಸಿದ್ದಾರೆ.

‘ಇದು ಯಾವುದೇ ಮದ್ದು ಸೇವನೆಯಾದ ವಿಷಯವಲ್ಲ. ಇದು ವಾಸ್ತವ್ಯದ ವಿವರ ನೀಡಲಾಗದ ವಿಷಯ. ಎರಡು ಬಾರಿ ನಾನು ಬೇರೆ ಬೇರೆ ಸ್ಥಳಗಳಲ್ಲಿದ್ದ ಕಾರಣ ಪರೀಕ್ಷೆ ತಪ್ಪಿಸಿಕೊಂಡೆ. ಆದರೆ ಮೂರನೇ ಸಲ ನಾನು ಎಲ್ಲ ಸಾಕ್ಷ್ಯಾಧಾರಗಳೊಂದಿಗೆ ಸಜ್ಜಾಗಿದ್ದೆ. ಆದರೆ ಅವರು ನನ್ನ ಮನವಿ ಕೇಳಲಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ನನಗೆ ಇದು ದೊಡ್ಡನಷ್ಟ. ನಾನು ಪ್ಯಾರಿಸ್‌ನ ಪ್ಯಾರಾ ಕ್ರೀಡೆಗಳಿಗೆ ಸಜ್ಜುಗೊಳ್ಳುತ್ತಿದ್ದೆ. ಇದು ಎಲ್ಲ ಅಥ್ಲೀಟುಗಳಿಗೆ ದೊಡ್ಡ ಕೂಡ. ಇದರಿಂದ ಎದೆಬಿರಿದ ಅನುಭವವಾಯಿತು’ ಎಂದು ಪ್ರತಿಕ್ರಿಯಿಸಿದರು.

ಭಗತ್‌ ಈ ನಿರ್ಧಾರದ ವಿರುದ್ಧ ಕ್ರೀಡಾ ನ್ಯಾಯಮಂಡಳಿ ವಿಭಾಗಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಕಳೆದ ತಿಂಗಳು ಅದು ತಿರಸ್ಕೃತಗೊಂಡಿದೆ.

ಅವರ ನಿಷೇಧ ಅವಧಿಯು 2025ರ ಸೆಪ್ಟೆಂಬರ್‌ 1ರವರೆಗೆ ಜಾರಿಯಲ್ಲಿ ಇರಲಿದೆ.

ಭಗತ್‌, 2021 ಟೋಕಿಯೊ ಕ್ರೀಡೆಗಳ ಎಸ್‌ಎಲ್‌3 ವಿಭಾಗದ ಫೈನಲ್‌ನಲ್ಲಿ ಗ್ರೇಟ್‌ ಬ್ರಿಟನ್‌ನ ಡೇನಿಯಲ್‌ ಬೆತೆಲ್ ಅವರನ್ನು ಸೋಲಿಸಿ ಬ್ಯಾಡ್ಮಿಂಟನ್ ಚಿನ್ನ ಗೆದ್ದಿದ್ದರು.‌

ಥಾಯ್ಲೆಂಡ್‌ನ ಪಟ್ಟಾಯದಲ್ಲಿ ಫೆಬ್ರುವರಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಬಾರಿ ಗೆಲ್ಲುವ ಮೂಲಕ ಚೀನಾದ ದಂತಕಥೆ ಲಿನ್‌ ಡಾನ್ ಅವರ ದಾಖಲೆ ಸರಿಗಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT