ಪ್ಯಾರಿಸ್: ವಿನೇಶಾ ಫೋಗಟ್ ಪ್ಯಾರಿಸ್ ಕ್ರೀಡೆಗಳಲ್ಲಿ ದೊಡ್ಡ ಅನಿರೀಕ್ಷಿತ ಫಲಿತಾಂಶವೊಂದನ್ನು ನೀಡಿದರು. ಮಂಗಳವಾರ ನಡೆದ ಮಹಿಳೆಯರ ಕುಸ್ತಿ ಸ್ಪರ್ಧೆಗಳ 50 ಕೆ.ಜಿ. ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಯುಯಿ ಸುಸಾಕಿ ಅವರಿಗೆ ಪರಿಪೂರ್ಣ ತಂತ್ರಗಾರಿಕೆಯಿಂದ ಅವರು ಆಘಾತ ನೀಡಿದರು. ನಂತರ ಉಕ್ರೇನ್‌ನ ಕುಸ್ತಿಪಟುವನ್ನು ಸೋಲಿಸಿ ಸೆಮಿಫೈನಲ್ ತಲುಪಿದರು.
ಟೋಕಿಯೊ ಕ್ರೀಡೆಗಳಲ್ಲಿ ಚಿನ್ನ ಗೆದ್ದಿದ್ದ, ಜೊತೆಗೆ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಜಪಾನ್‌ನ ಕುಸ್ತಿಪಟು ಪ್ಯಾರಿಸ್‌ನಲ್ಲೂ ಚಿನ್ನಕ್ಕೆ ನೆಚ್ಚಿನ ಸ್ಪರ್ಧಿ ಆಗಿದ್ದರು. ಆದರೆ ಈ ಕ್ರೀಡೆಗಳ ಮೊದಲ ಸೆಣಸಾಟದಲ್ಲೇ 2–3 ರಿಂದ ಅನಿರೀಕ್ಷಿತ ರೀತಿ ಸೋತರು.
ಅಗ್ರ ಶ್ರೇಯಾಂಕದ ಸುಸಾಕಿ ಅವರಿಗೆ ಇದು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಎದುರಾದ ಮೊದಲ ಸೋಲು ಕೂಡ.
ಈ ಅಚ್ಚರಿಯ ಫಲಿತಾಂಶದ ನಂತರ ವಿನೇಶಾ ಕ್ವಾರ್ಟರ್‌ಫೈನಲ್‌ನಲ್ಲಿ ಯುರೋಪಿನ ಮಾಜಿ ಚಾಂಪಿಯನ್, ಉಕ್ರೇನಿನ ಒಕ್ಸಾನಾ ಲಿವಾಚ್ ಅವರ ಸವಾಲನ್ನು 7–5 ರಿಂದ ಬದಿಗೊತ್ತಿ ಮೊದಲ ಬಾರಿ ಸೆಮಿಫೈನಲ್ ತಲುಪಿದರು.
ರಿಯೊ ಮತ್ತು ಟೋಕಿಯೊ ಕ್ರೀಡೆಗಳಲ್ಲಿ ಹಿನ್ನಡೆ ಕಂಡಿದ್ದ 29 ವರ್ಷ ವಯಸ್ಸಿನ ವಿನೇಶಾ ಅವರಿಗೆ ಒಲಿಂಪಿಕ್ಸ್‌ನ ಚೊಚ್ಚಲ ಪದಕ ಗೆಲ್ಲಲು ಇನ್ನು ಒಂದು ಗೆಲುವಷ್ಟೇ ಅಗತ್ಯವಿದೆ.
ವಿನೇಶಾ ಅವರ ಮನೆಯ ಕಪಾಟಿನಲ್ಲಿ ಇತರೆಲ್ಲಾ ಪ್ರಮುಖ ಸ್ಪರ್ಧೆಗಳಲ್ಲಿ ಗೆದ್ದ ಪದಕಗಳಿವೆ. ಅವರು ಮೂರು ಬಾರಿ ಕಾಮನ್ವೆಲ್ತ್ ಕ್ರೀಡೆಗಳ ಚಾಂಪಿಯನ್, ಒಂದು ಏಷ್ಯನ್ ಗೇಮ್ಸ್ ಚಿನ್ನ, ಎಂಟು ಬಾರಿ ಏಷ್ಯನ್ ಚಾಂಪಿಯನ್‌ಷಿಪ್ ಪದಕ, ಎರಡು ವಿಶ್ವ ಚಾಂಪಿಯನ್‌ಷಿಪ್ ಕಂಚು ಗೆದ್ದಿದ್ದಾರೆ. ಆದರೆ ಈ ಹಿಂದಿನ ಎರಡು ಒಲಿಂಪಿಕ್ಸ್‌ಗಳಲ್ಲಿ ಯಶಸ್ಸು ದೊರೆತಿರಲಿಲ್ಲ.
ವಿನೇಶಾ ಅವರು ಮಹತ್ವದ ಪ್ರಿಕ್ವಾರ್ಟರ್‌ಫೈನಲ್‌ಗೆ ತಂತ್ರ ರೂಪಿಸಿದ್ದಂತೆ ಕಂಡಿತು. ಆರು ನಿಮಿಷಗಳ ಅವಧಿಯ ಹೋರಾಟದ ಕೊನೆಯ ಕ್ಷಣದಲ್ಲಿ ದಿಢೀರನೇ ಆಕ್ರಮಣಕಾರಿ ಪಟ್ಟು ಹಾಕುವ ಈ ಯೋಜನೆಯಲ್ಲಿ ಯಶಸ್ವಿಯೂ ಆದರು. ಮೊದಲು 90 ಸೆಕೆಂಡುಗಳವರೆಗೆ ಅಂಥ ಹೋರಾಟ ಕಾಣಿಸಲಿಲ್ಲ. 25 ವರ್ಷ ವಯಸ್ಸಿನ ಜಪಾನ್ ಸ್ಪರ್ಧಿ ಹೋರಾಟ ಅರ್ಧ ಮುಗಿದಾಗ 2–0 ಮುನ್ನಡೆ ಪಡೆದರು.
ಮೊದಲು ಐದು ನಿಮಿಷ 40 ಸೆಕೆಂಡುಗಳ ಕಾಲ ಎದುರಾಳಿಗೆ ಪಾಯಿಂಟ್ ಗಳಿಕೆಗೆ ಅವಕಾಶ ನೀಡದೇ ರಕ್ಷಣೆಗೇ ಒತ್ತುಕೊಟ್ಟಿದ್ದ ಅವರು ಕೊನೆಯ 20 ಸೆಕೆಂಡುಗಳಿರುವಾಗ ತಮ್ಮೆಲ್ಲಾ ಸಾಮರ್ಥ್ಯ ಬಳಸಿ ಯೋಜಿತ ರೀತಿ ಎದುರಾಳಿ ಮೇಲೆ ದಾಳಿ ನಡೆಸಿದರು. ಈ ಅನಿರೀಕ್ಷಿತ ಪಟ್ಟಿನಿಂದ ಸೂಸಾಕಿ ಕಾಲಿನ ಬ್ಯಾಲೆನ್ಸ್ ಕಳೆದುಕೊಂಡರು. ಇದರ ಲಾಭವನ್ನು ವಿನೇಶಾ ಬಿಟ್ಟುಕೊಡಲಿಲ್ಲ. ಈ ಪಟ್ಟು ಅವರಿಗೆ ಹೆಚ್ಚಿನ ಎರಡು ಪಾಯಿಂಟ್‌ಗಳನ್ನು ಗಳಿಸಿಕೊಟ್ಟಿತು.
ಈ ಪಟ್ಟು ಯಶಸ್ವಿಯಾಗಿದ್ದು ಮನವರಿಕೆಯಾದ ತಕ್ಷಣವೇ ಅವರು ಒಮ್ಮೆ ಮ್ಯಾಟ್‌ನಲ್ಲಿ ಜಿಗಿದರು. ನಂತರ ಅಲ್ಲೇ ಅಂಗಾತ ಮಲಗಿ ಖುಷಿಪಟ್ಟರು.
‘ಪವಾಡಕ್ಕಿಂತ ಕಡಿಮೆಯಲ್ಲ:’
‘ಇದು ಪವಾಡ. ವಿನೇಶಾ ಇವತ್ತು ಏನನ್ನು ಸಾಧಿಸಿದರೊ ಅದು ಪವಾಡಕ್ಕಿಂತ ಕಡಿಮೆಯೇನಲ್ಲ. ಸೋಮವಾರ ನಡೆದ ಸೆಣಸಾಟದಲ್ಲಿ ನಿಶಾ (ದಹಿಯಾ) ಅವರಿಗೆ ಗಾಯವಾಗಿದ್ದರಿಂದ ನಮಗೆಲ್ಲಾ ಬೇಸರವಾಗಿತ್ತು. ಆದರೆ ವಿನೇಶಾ ಅವರ ಗೆಲುವು ಮಂಗಳವಾರ ದಿನವನ್ನು ಪ್ರಕಾಶಮಾನಗೊಳಿಸಿತು’ ಎಂದು ಭಾರತ ತಂಡದ ಕೋಚ್ ವಿರೇಂದರ್ ದಹಿಯಾ ಪ್ರತಿಕ್ರಿಯಿಸಿದರು.
‘ನಿಶಾ ಗೆಲುವು ಭಾರತದ ಪಾಳಯದಲ್ಲಿ ಮಾತ್ರ ಸಂಭ್ರಮ ತರಲಿಲ್ಲ. ಅವರು ಇದ್ದ ‘ಡ್ರಾ’ದಲ್ಲಿನ ಇತರ ಕುಸ್ತಿಪಟುಗಳೂ ನಿಟ್ಟುಸಿರು ಬಿಡುವಂತೆ ಮಾಡಿತು. ಅದು ನಂತರದ ಸೆಣಸಿನಲ್ಲಿ ಸೋತ ಲಿವಾಚ್ ಮಾತಿನಲ್ಲಿ ಬಿಂಬಿತವಾಯಿತು.
‘ವಿಶ್ವ ಚಾಂಪಿಯನ್ ಸೋತ ಕಾರಣ ನನಗೆ ಉತ್ತಮ ಅವಕಾಶವಿದೆಯೆಂದು ಯೋಚಿಸಿದ್ದೆ. ಆದರೆ ವಿನೇಶಾ ತುಂಬಾ ಬಲಿಷ್ಠ. ನಾನು ಹೋರಾಟ ನಡೆಸಿದೆ. ಆದರೆ ಕೆಲವು ತಪ್ಪುಗಳನ್ನು ಎಸಗಿದೆ’ ಎಂದು ಎಂಟರ ಘಟ್ಟದಲ್ಲಿ ಅವರೆದುರು ಸೋತ ಲಿವಾಚ್ ಹೇಳಿದರು.
🇮🇳🔥 𝗔𝗻𝗼𝘁𝗵𝗲𝗿 𝘁𝗼𝗽 𝘄𝗶𝗻 𝗳𝗼𝗿 𝗩𝗶𝗻𝗲𝘀𝗵 𝗣𝗵𝗼𝗴𝗮𝘁! Vinesh Phogat was brilliant once again, defeating Oksana Livach in the quarter-final in the women's freestyle 50kg category. Oksana applied pressure on Vinesh in the last minute but Vinesh Phogat showed her class… pic.twitter.com/QhZ4AFRRUr
— India at Paris 2024 Olympics (@sportwalkmedia) August 6, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.