ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics Hockey: ಬ್ರಿಟನ್ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಭಾರತ

Published : 4 ಆಗಸ್ಟ್ 2024, 10:03 IST
Last Updated : 4 ಆಗಸ್ಟ್ 2024, 10:03 IST
ಫಾಲೋ ಮಾಡಿ
Comments

ಪ್ಯಾರಿಸ್‌: ಒಲಿಂಪಿಕ್‌ ಕ್ರೀಡಾಕೂಟದ ಪುರುಷರ ಹಾಕಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಬ್ರಿಟನ್ ತಂಡವನ್ನು ಮಣಿಸಿರುವ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಉಭಯ ತಂಡಗಳು ಪಂದ್ಯದುದ್ದಕ್ಕೂ ಜಿದ್ದಾಜಿದ್ದಿನ ಹೋರಾಟ ನಡೆಸಿದವು. ನಾಯಕ ಮನ್‌ಪ್ರಿತ್‌ ಸಿಂಗ್‌ 22ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಇದಾದ ಐದು ನಿಮಿಷಗಳಲ್ಲೇ ಬ್ರಿಟನ್‌ ತಿರುಗೇಟು ನೀಡಿತು. ಆ ತಂಡದ ಮಾರ್ಟನ್‌ ಲೀ ಗೋಲು ಬಾರಿಸಿ ಮಿಂಚಿದರು.

ನಿಗದಿತ (60 ನಿಮಿಷ) ಅವಧಿಯ ಆಟ ಮುಗಿದಾಗ ಎರಡೂ ತಂಡಗಳು 1–1ರ ಸಮಬಲ ಸಾಧಿಸಿದವು. ಹೀಗಾಗಿ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ನಡೆಸಲಾಯಿತು. ಈ ವೇಳೆ ಭಾರತ 4–2 ಅಂತರದ ಮುನ್ನಡೆ ಸಾಧಿಸಿ ಜಯದ ನಗೆ ಬೀರಿತು.

ಭಾರತದ ಅನುಭವಿ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌, ಮಹಾಗೋಡೆಯಂತೆ ನಿಂತರು. ಎದುರಾಳಿ ತಂಡ ಗೋಲು ಗಳಿಸುವ ಹಲವು ಅವಕಾಶಗಳನ್ನು ಭಗ್ನಗೊಳಿಸಿದರು. ಶ್ರೀಜೇಶ್‌ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಕೊನೇ ಕ್ರೀಡಾಕೂಟವಾಗಲಿದೆ.

ಶೂಟೌಟ್‌ನಲ್ಲಿ 4–2ರ ಮುನ್ನಡೆ
ಬ್ರಿಟನ್‌ ಪರ ಶೂಟೌಟ್‌ನಲ್ಲಿ ಗೋಲು ಬಾರಿಸಲು ಬಂದ ಅಲ್ಬೆರಿ ಜೇಮ್ಸ್‌ ಹಾಗೂ ವಲ್ಲೇಸ್‌ ಜಾಕ್‌ ಮೊದಲೆರಡು ಅವಕಾಶಗಳಲ್ಲಿ ಗೋಲು ಬಾರಿಸಿದರು. ಆದರೆ, ನಂತರ ಬಂದ ವಿಲಿಯಮ್ಸನ್‌ ಕಾನರ್‌, ರೋಪರ್‌ ಫಿಲಿಪ್‌ ವಿಫಲರಾದರು.

ಆದರೆ, ಭಾರತದ ಪರ ನಾಯಕ ಮನ್‌ಪ್ರೀತ್‌ ಸಿಂಗ್‌, ಸಿಂಗ್‌ ಸುಖಜೀತ್‌, ಉಪಾಧ್ಯಾಯ ಲಲಿತ್‌ ಕುಮಾರ್‌ ಮತ್ತು ಪಾಲ್‌ ರಾಜ್‌ ಕುಮಾರ್‌ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾದರು. ಹೀಗಾಗಿ, ಟೀಂ ಇಂಡಿಯಾ 4–2ರ ಅಂತರದ ಮುನ್ನಡೆ ಸಾಧಿಸಿ ಗೆದ್ದು ಬೀಗಿತು.

ಕ್ವಾರ್ಟರ್‌ಫೈನಲ್‌ ಸುತ್ತಿನ ಉಳಿದ ಮೂರು ಪಂದ್ಯಗಳೂ ಇದೇ ದಿನ ನಿಗದಿಯಾಗಿವೆ. 2ನೇ ಪಂದ್ಯದಲ್ಲಿ ಬೆಲ್ಜಿಯಂ ಹಾಗೂ ಸ್ಪೇನ್‌, 3ನೇ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ಹಾಗೂ ಆಸ್ಟ್ರೇಲಿಯಾ, 4ನೇ ಪಂದ್ಯದಲ್ಲಿ ಜರ್ಮನಿ ಹಾಗೂ ಅರ್ಜೆಂಟೀನಾ ಮುಖಾಮುಖಿಯಾಗಲಿವೆ.

ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳು ಆಗಸ್ಟ್‌ 6 ಮತ್ತು 8ರಂದು ನಡೆಯಲಿವೆ.

ಹತ್ತೇ ಆಟಗಾರರೊಂದಿಗೆ ಆಡಿದ ಭಾರತ
ಭಾರತ ತಂಡವು 42 ನಿಮಿಷಗಳ ಕಾಲ ಕೇವಲ 10 ಆಟಗಾರರೊಂದಿಗೆ ಸೆಣಸಾಟ ನಡೆಸಿತು.

ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಓಡುತ್ತಿದ್ದ ವೇಳೆ ಅಮಿತ್‌ ರೋಹಿದಾಸ್‌ ಅವರು ಬ್ರಿಟನ್‌ ಆಟಗಾರ ವಿಲಿಯಮ್‌ ಕಾಲ್ನನ್‌ ಅವರ ಮುಖದ ಹತ್ತಿರಕ್ಕೆ ಹಾಕಿ ಸ್ಟಿಕ್‌ ಕೊಂಡೊಯ್ದಿದ್ದರು. ಹೀಗಾಗಿ, ಅವರಿಗೆ ರೆಡ್‌ ಕಾರ್ಡ್‌ ನೀಡಿ ಹೊರಗುಳಿಯುವಂತೆ ಮಾಡಲಾಯಿತು.

ಆದಾಗ್ಯೂ ಎದೆಗುಂದದೆ ಆಡಿದ ಭಾರತ, ನಿಗದಿತ ಅವಧಿಯಲ್ಲಿ ಸಮಬಲದ ಪ್ರದರ್ಶನ ತೋರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT