ಮುಂಬೈ: ರಾಜಸ್ಥಾನದ ರೈಡರ್ ಸಚಿನ್ ತನ್ವರ್ ಅವರು ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಗೆ ನಡೆದ ಆಟಗಾರರ ಹರಾಜು ಪ್ರಕ್ರಿಯೆಯ ಮೊದಲ ದಿನವಾದ ಗುರುವಾರ ‘ಎ’ ಕೆಟಗರಿ ಆಟಗಾರರ ಪೈಕಿ ಅತಿ ಹೆಚ್ಚಿನ ಮೊತ್ತಕ್ಕೆ, ₹2.15 ಕೋಟಿಗೆ ತಮಿಳು ತಲೈವಾಸ್ ಪಾಲಾದರು. ಅವರು ಇರಾನ್‌ನ ಮೊಹಮ್ಮದ್‌ರೇಝಾ ಶಾಡ್ಲುಯಿ ಚಿಯೆನ್ನ, ಪವನ್ ಸೆಹ್ರಾವತ್ ಅಂಥವರನ್ನು ಹಿಂದೆಹಾಕಿದರು.
ಪಿಕೆಲ್‌ನಲ್ಲಿ 22 ಪಂದ್ಯಗಳನ್ನು ಆಡಿರುವ ಅವರು ಹಿಂದೆ ಪಟ್ನಾ ಪೈರೇಟ್ಸ್ ತಂಡದಲ್ಲಿದ್ದರು. ಇರಾನ್‌ನ ಆಲ್‌ರೌಂಡರ್ ಮೊಹಮ್ಮದ್‌ರೇಝಾ ಅವರನ್ನು ಹರಾಜಿನಲ್ಲಿ ಮೊದಲನೆಯವರಾಗಿ ₹2.07 ಕೋಟಿ ಮೊತ್ತಕ್ಕೆ ಹರಿಯಾಣ ಸ್ಟೀಲರ್ಸ್ ತನ್ನದಾಗಿಸಿಕೊಂಡಿತು. ಹತ್ತನೇ ಸೀಸನ್ ಹರಾಜಿನಲ್ಲಿ ಅವರು ಅತಿ ಹೆಚ್ಚು ಮೊತ್ತಕ್ಕೆ (₹2.35 ಕೋಟಿ) ಪುಣೇರಿ ಪಲ್ಟನ್ಸ್ ಪಾಲಾಗಿದ್ದರು. ಆ ಋತುವಿನಲ್ಲಿ 99 ಟ್ಯಾಕಲ್ ಪಾಯಿಂಟ್ಸ್ ಪಡೆದು ತಮ್ಮ ಆಯ್ಕೆ ಸಮರ್ಥಿಸಿಕೊಂಡಿದ್ದರು.
ರೈಡರ್ ಗುಮನ್ ಸಿಂಗ್ ₹1.97 ಕೋಟಿ ಮೊತ್ತಕ್ಕೆ ಗುಜರಾತ್ ಜೈಂಟ್ಸ್ ಪಾಲಾದರು. ಅವರು ಕಳೆದ ಋತುವಿನಲ್ಲಿ ಯು ಮುಂಬಾ ತಂಡಕ್ಕೆ ಆಡಿದ್ದರು.
ಸ್ಟಾರ್ ರೈಡರ್ ಪವನ್ ಸೆಹ್ರಾವತ್ ಅವರನ್ನು ತೆಲುಗು ಟೈಟನ್ಸ್ ₹1.72 ಕೋಟಿ ಮೊತ್ತಕ್ಕೆ ಎಫ್‌ಬಿಎಂ (ಫೈನಲ್ ಬಿಡ್ ಮ್ಯಾಚ್ ಕಾರ್ಡ್) ಬಳಸಿ ತನ್ನಲ್ಲೇ ಉಳಿಸಿಕೊಂಡಿತು. ಮೂರು ವರ್ಷ ಹಿಂದೆ ಬೆಂಗಳೂರು ಬುಲ್ಸ್‌ಗೆ ಆಡಿದ್ದ ಅವರು ನಂತರ ಅವರು ತಲೈವಾಸ್‌ಗೆ ಒಂದು ಋತು ಆಡಿ, ಕಳೆದ ಬಾರಿ ₹2 ಕೋಟಿಗೂ ಹೆಚ್ಚು ಮೊತ್ತಕ್ಕೆ ತೆಲುಗು ಟೈಟನ್ಸ್ ಪಾಲಾಗಿದ್ದರು.
ಇನ್ನೊಬ್ಬ ಪ್ರಮುಖ ರೈಡರ್ ಮಣಿಂದರ್ ಸಿಂಗ್ ಅವರನ್ನು ಬೆಂಗಾಲ್ ವಾರಿಯರ್ಸ್ ₹1.15 ಕೋಟಿ ಮೊತ್ತಕ್ಕೆ ಎಫ್‌ಬಿಎಂ ಮೂಲಕ ತನ್ನಲ್ಲೇ ಉಳಿಸಿಕೊಂಡಿತು. ಅವರು ಕಳೆದ ಋತುವಿನಲ್ಲಿ ತಂಡದ ಕ್ಯಾಪ್ಟನ್ ಆಗಿದ್ದರು.
ರಕ್ಷಣೆ ವಿಭಾಗದಲ್ಲಿ ಸುನೀಲ್ ಕುಮಾರ್ ಮಲಿಕ್ ಅವರು ಅತಿ ಹೆಚ್ಚು ಮೊತ್ತಕ್ಕೆ, ₹1.015 ಕೋಟಿ) ಯು ಮುಂಬಾ ಪಾಲಾದರು. ಈ ಹಿಂದೆ ಜೈಪುರ ಪಿಂಕ್ ಪ್ಯಾಂಥರ್ಸ್ ನಾಯಕರಾಗಿ ಆಡಿದ್ದ ಅವರನ್ನು ಪಡೆಯಲು ಮುಂಬಾ ಮತ್ತು ಬುಲ್ಸ್ ನಡುವೆ ಪೈಪೋಟಿ ಏರ್ಪಟ್ಟಿತ್ತು.
ಇರಾನ್‌ನ ಡಿಫೆಂಡರ್ ಫಜಲ್ ಅತ್ರಾಚೆಲಿ ₹50 ಲಕ್ಷಕ್ಕೆ ಬೆಂಗಾಲ್ ವಾರಿಯರ್ಸ್ ತೆಕ್ಕೆಗೆ ಸೇರಿದರು. ಕಳೆದ ಸಲ ಅವರು ಗುಜರಾತ್ ಟೈಟನ್ಸ್ ಪರ ಆಡಿದ್ದರು.
ರೈಟ್ ಕಾರ್ನರ್ ಡಿಫೆಂಡರ್ ಕೃಷ್ಣನ್ ‘ಎ’ ಕೆಟಗರಿಯಲ್ಲಿ ₹70 ಲಕ್ಷಕ್ಕೆ ತೆಲುಗು ಟೈಟನ್ಸ್ ಪಾಲಾದರು.
‘ಬಿ’ ಕೆಟಗರಿ:
ಆಲ್‌ರೌಂಡರ್ ಭರತ್ ಈ ವಿಭಾಗದಲ್ಲಿ ₹1.30 ಕೋಟಿಗೆ ಯುಪಿ ಯೋಧಾಸ್ ಸೇರ್ಪಡೆಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.