ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಗ್ ಮಾಸ್ಟರ್ಸ್ ಚೆಸ್‌ ಟೂರ್ನಿ: ಇರಾನ್‌ ಆಟಗಾರನಿಗೆ ಮಣಿದ ಪ್ರಜ್ಞಾನಂದ

Published 29 ಫೆಬ್ರುವರಿ 2024, 12:16 IST
Last Updated 29 ಫೆಬ್ರುವರಿ 2024, 12:16 IST
ಅಕ್ಷರ ಗಾತ್ರ

ಪ್ರಾಗ್‌: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ, ಸಮಯದ ಒತ್ತಡದಲ್ಲಿ ತಪ್ಪೆಸಗಿದ ಪರಿಣಾಮ ಪ್ರಾಗ್ ಮಾಸ್ಟರ್ಸ್ ಚೆಸ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಇರಾನ್‌ನ ಆಟಗಾರ ಪರ್ಹಾಮ್ ಮಘಸೂಡ್ಲು ಅವರೆದುರು ಸೋಲನುಭವಿಸಬೇಕಾಯಿತು.

ಈ ಸೋಲಿನಿಂದಾಗಿ ಕ್ಲಾಸಿಕಲ್ ಮಾದರಿಯ ಚೆಸ್‌ನಲ್ಲಿ ಪ್ರಜ್ಞಾನಂದ ಅವರ 47 ಪಂದ್ಯಗಳ ಅಜೇಯ ಸರಣಿ ಗುರುವಾರ ಕಡಿತಗೊಂಡಿತು. ಲೈವ್‌ ರೇಟಿಂಗ್‌ನಲ್ಲಿ ಭಾರತದ ಆಟಗಾರರಲ್ಲಿ ಅಗ್ರ ಕ್ರಮಾಂಕವನ್ನೂ ಕಳೆದುಕೊಂಡರು. ಈ ಟೂರ್ನಿಯ ಪ್ರಚಾರ ರಾಯಭಾರಿಯೂ ಆಗಿರುವ ವಿಶ್ವನಾಥನ್ ಆನಂದ್ ಮತ್ತೆ ಆ ಸ್ಥಾನಕ್ಕೇರಿದರು.

ಭಾರತದ ಇನ್ನೊಬ್ಬ ಆಟಗಾರ ಡಿ.ಗುಕೇಶ್, ಕಪ್ಪು ಕಾಯಿಗಳಲ್ಲಿ ಸ್ಪೂರ್ತಿಯುತ ಪ್ರದರ್ಶನವಿತ್ತು ಝೆಕ್‌ ರಿಪಬ್ಲಿಕ್‌ನ ಎನ್ಗುಯೆನ್ ಥಾಯ್ ದೈ ವಾನ್ ಅವರನ್ನು 52 ನಡೆಗಳಲ್ಲಿ ಸೋಲಿಸಿದರು. 10 ಆಟಗಾರರ ರೌಂಡ್‌ರಾಬಿನ್ ಟೂರ್ನಿಯ ಇತರ ಮೂರು ಪಂದ್ಯಗಳು ‘ಡ್ರಾ’ ಆದವು.

ಇನ್ನೂ ಏಳು ಸುತ್ತುಗಳಿದ್ದು, ಮಘಸೂಡ್ಲು ಅವರು ಎರಡು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಗುಕೇಶ್ ಮತ್ತು ಉಜ್ಬೇಕಿಸ್ತಾನದ ನಾದಿರ್ಬೆಕ್ ಅಬ್ದುಸತ್ತಾರೋವ್ ಅವರು (ತಲಾ 1.5) ಎರಡನೇ ಸ್ಥಾನದಲ್ಲಿದ್ದಾರೆ. ಉಜ್ಬೇಕ್ ಆಟಗಾರ ಎರಡೆನೇ ಸುತ್ತಿನಲ್ಲಿ ಭಾರತದ ವಿದಿತ್ ಗುಜರಾತಿ (1) ಜೊತೆ 35 ನಡೆಗಳ ನಂತರ ಪಾಯಿಂಟ್‌ ಹಂಚಿಕೊಂಡರು.

ಪ್ರಜ್ಞಾನಂದ, ವಿದಿತ್‌, ರುಮೇನಿಯಾದ ರಿಚಾರ್ಡ್‌ ರ‍್ಯಾಪೋರ್ಟ್‌, ಝೆಕ್‌ ರಿಪಬ್ಲಿಕ್‌ನ ಡೇವಿಡ್‌ ನವಾರಾ ಅವರು ತಲಾ ಒಂದು ಪಾಯಿಂಟ್ಸ್ ಪಡೆದಿದ್ದಾರೆ. ಜರ್ಮನಿಯ ವಿನ್ಸೆಂಟ್‌ ಕೀಮರ್ ಮತ್ತು ಪೋಲೆಂಡ್‌ನ ಮಾಥ್ಯುಸ್ ಬಾರ್ಟೆಲ್ ತಲಾ 0.5 ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಝೆಕ್‌ ರಿಪಬ್ಲಿಕ್‌ನ ದೈ ವಾನ್‌ ಇನ್ನೂ ಖಾತೆ ತೆರೆದಿಲ್ಲ.

ಕಪ್ಪು ಕಾಯಿಗಳಲ್ಲಿ ಆಡಿದ ಪ್ರಜ್ಞಾನಂದ ಪಂದ್ಯದ ಮಧ್ಯಮ ಹಂತದಲ್ಲಿ ಸ್ವಲ್ಪ ಉತ್ತಮ ಸ್ಥಿತಿಗೆ ಬಂದಂತೆ ಕಂಡರೂ ಅವರಿಗೆ ನಡೆಗಳನ್ನು ಇರಿಸಲು ಸಮಯ ಕಡಿಮೆಯಿತ್ತು. ಈ ಪರಿಸ್ಥಿತಿಯಲ್ಲಿ ಎದುರಾಳಿಯ ತಪ್ಪಿಗೆ ಕಾಯ್ದ ಮಘಸೂಡ್ಲು 38 ನಡೆಗಳಲ್ಲಿ ಪಂದ್ಯ ಗೆದ್ದರು.

ಇತರ ಪಂದ್ಯಗಳಲ್ಲಿ ಬಾರ್ಟೆಲ್ ಮಾಥ್ಯೂಸ್, ರ‍್ಯಾಪೋರ್ಟ್‌ ಜೊತೆ ‘ಡ್ರಾ’ ಮಾಡಿಕೊಂಡರೆ, ಕೀಮರ್‌ ಮತ್ತು ನವಾರರ ನಡುವಣ ಪಂದ್ಯ ‘ಡ್ರಾ’ ಆಯಿತು.

ಚಾಲೆಂಜರ್ಸ್‌ ವಿಭಾಗದಲ್ಲಿ ಆರ್‌.ವೈಶಾಲಿ, ಟರ್ಕಿಯ ಇಡಿಝ್ ಗುರೆಲ್ ಎದುರು ಸೋಲನುಭವಿಸಿದರು. ಇದು ಅವರಿಗೆ ಟೂರ್ನಿಯಲ್ಲಿ ಎರಡನೇ ಸೋಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT