ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್: ಮೋನು ‘ಸೂಪರ್‌’ ಆಟ, ಪಟ್ನಾ ಪೈರೇಟ್ಸ್‌ ಜಯಭೇರಿ

ತಮಿಳ್ ತಲೈವಾಸ್‌ಗೆ ಮೊದಲ ಜಯ; ಅಜಿಂಕ್ಯ ಪವಾರ್‌, ಮಣಿಂದರ್‌ ಮೋಹಕ ಆಟ
Last Updated 31 ಡಿಸೆಂಬರ್ 2021, 16:22 IST
ಅಕ್ಷರ ಗಾತ್ರ

ಬೆಂಗಳೂರು: ಮೋನು ಗೋಯತ್ ಮತ್ತು ಸಚಿನ್‌ ಅವರು ನಗರದ ವೈಟ್‌ಫೀಲ್ಡ್‌ನ ಹೋಟೆಲ್‌ ಶೆರಟಾನ್ ಗ್ರ್ಯಾಂಡ್‌ನ ‘ಮ್ಯಾಟ್‌’ನಲ್ಲಿ ಮಿಂಚು ಹರಿಸಿದರು. ಅಮೋಘ ರೇಡ್‌ ಮೂಲಕ ಎದುರಾಳಿ ಪಾಳಯದಲ್ಲಿ ಆತಂಕ ಮೂಡಿಸಿದರು. ಪಟ್ನಾ ಪೈರೇಟ್ಸ್‌ ಗೆಲುವಿನ ನಗೆ ಬೀರಿತು.

ಪ್ರೊ ಕಬಡ್ಡಿ ಲೀಗ್‌ನ ಶುಕ್ರವಾರದ ಪಂದ್ಯದಲ್ಲಿ ಮೋನು ಮತ್ತು ಸಚಿನ್ ಕ್ರಮವಾಗಿ ತಂದುಕೊಟ್ಟ ತಲಾ 15 ಮತ್ತು 9 ಪಾಯಿಂಟ್‌ಗಳ ನೆರವಿನಿಂದ ಪಟ್ನಾ 44–30ರಲ್ಲಿ ಬೆಂಗಾಲ್ ವಾರಿಯರ್ಸ್‌ ತಂಡವನ್ನು ಮಣಿಸಿತು.

ಆರಂಭದಲ್ಲಿ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಮೋನು ಮತ್ತು ಸಚಿನ್‌ ಪಟ್ನಾ ಪೈರೇಟ್ಸ್‌ಗೆ ಮತ್ತು ಮಣಿಂದರ್ ಸಿಂಗ್ ಬೆಂಗಾಲ್‌ಗೆ ಪಾಯಿಂಟ್‌ಗಳನ್ನು ಗಳಿಸಿಕೊಟ್ಟರು. ಕೊನೆಯಲ್ಲಿ ಮೋನು, ಸಚಿನ್‌ ಆಟ ಫಲ ಕಂಡಿತು.

ತಂಡಕ್ಕಾಗಿ ಸುನಿಲ್ 4 ಮತ್ತು ಪ್ರಶಾಂತ್ 3 ಪಾಯಿಂಟ್ ಗಳಿಸಿದರು. ಬೆಂಗಾಲ್ ಪರ ಮಣಿಂದರ್ ಸೂಪರ್ ಟೆನ್ (12 ಪಾಯಿಂಟ್‌) ಸಾಧನೆ ಮಾಡಿದರೆ ಅಮಿತ್‌ ನರ್ವಾಲ್ 5, ಸುಕೇಶ್ ಹೆಗ್ಡೆ ಮತ್ತು ಅಬೊಜರ್ ತಲಾ 3 ಪಾಯಿಂಟ್ ಗಳಿಸಿದರು.

ತಲೈವಾಸ್‌ಗೆ ಮೊದಲ ಜಯ
ಪುಣೇರಿ ಪಲ್ಟನ್ ವಿರುದ್ಧ ಆಧಿಪತ್ಯ ಸ್ಥಾಪಿಸಿದ ತಮಿಳ್‌ ತಲೈವಾಸ್ ತಂಡ ಲೀಗ್‌ನಲ್ಲಿ ಮೊದಲ ಜಯದ ಸಂಭ್ರಮದಲ್ಲಿ ಮಿಂದೆದ್ದಿತು. ಶುಕ್ರವಾರದ ಮೊದಲ ಪಂದ್ಯದಲ್ಲಿ ತಂಡ 36–26ರಲ್ಲಿ ಗೆಲುವು ಸಾಧಿಸಿತು.

ಟ್ಯಾಕ್ಲಿಂಗ್‌ನಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ಪ್ರದರ್ಶಿಸಿದವು. ಆದರೆ ರೇಡಿಂಗ್‌ನಲ್ಲಿ ತಲೈವಾಸ್ ಆಟಗಾರರು ಮಿಂಚಿದರು. ಬದಲಿ ಆಟಗಾರನಾಗಿ ಕಣಕ್ಕೆ ಇಳಿದ ಅಜಿಂಕ್ಯ ಪವಾರ್ ಮಿಂಚಿನ ಆಟದ ದಾಳಿ ಮೂಲಕ ಸಂಚಲನ ಸೃಷ್ಟಿಸಿದರು. 9 ಟಚ್ ಪಾಯಿಂಟ್‌ ಸೇರಿದಂತೆ ಅವರು ಒಟ್ಟು 11 ಪಾಯಿಂಟ್ ಗಳಿಸಿದರೆ 5 ಟಚ್ ಪಾಯಿಂಟ್‌ ಒಳಗೊಂಡಂತೆ ಮಂಜಿತ್ ಒಟ್ಟು 8 ಪಾಯಿಂಟ್ ಗಳಿಸಿದರು. ನಾಯಕ ಸುರ್ಜಿತ್ ಸಿಂಗ್ 3 ಪಾಯಿಂಟ್‌ಗಳ ಕಾಣಿಕೆ ನೀಡಿದರು.

ಚುರುಕಿನ ದಾಳಿ ಮತ್ತು ಎದುರಾಳಿಗಳ ಕೈಯಿಂದ ತಪ್ಪಿಸಿಕೊಳ್ಳುವ ಚಾಕಚಕ್ಯತೆಯ ಮೂಲಕ ಅಜಿಂಕ್ಯ ತಲೈವಾಸ್‌ಗೆ ಅಜಿಂಕ್ಯ ಪಾಯಿಂಟ್‌ಗಳನ್ನು ಗಳಿಸಿಕೊಟ್ಟರು. ಪಂದ್ಯ ಮುಂದುವರಿದಂತೆ ಅವರು ತಂಡದ ‘ಮಾಡು ಮಡಿ ರೇಡ್‌’ನ ಸ್ಪೆಷಲಿಸ್ಟ್ ಆದರು.

ಪುಣೇರಿ ಪರವಾಗಿ ಪಂಕಜ್ ಮೋಹಿತೆ, ಅಬಿನೇಶ್‌, ಅಸ್ಲಾಂ ಮತ್ತು ನಾಯಕ ವಿಶಾಲ್ ಉತ್ತಮ ಆಟವಾಡಿದರು. ಪಂಕಜ್‌ 8 ಪಾಯಿಂಟ್ ಗಳಿಸಿದರೆ ಉಳಿದ ಮೂವರು ತಲಾ 4 ಪಾಯಿಂಟ್ ಕಲೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT