ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾಸ್ಪೋರ್ಟ್ಸ್‌ನಲ್ಲ ಕೂಡ್ಲಿಗಿ ತಾಲ್ಲೂಕು ಕಾಟ್ರಹಳ್ಳಿ ಯುವಕನ ಸಾಧನೆ

Last Updated 6 ಸೆಪ್ಟೆಂಬರ್ 2018, 3:54 IST
ಅಕ್ಷರ ಗಾತ್ರ

ಕೂಡ್ಲಿಗಿ: ತಾಲ್ಲೂಕಿನ ಕಾಟ್ರಹಳ್ಳಿ ಕುಗ್ರಾಮದ ಯುವಕನೊಬ್ಬ ತನ್ನ ಅಮೋಘ ಸಾಧನೆಯಿಂದ ವಿದೇಶದಲ್ಲಿ ದೇಶದ ಗೌರವ ಹೆಚ್ಚಿಸಿದ್ದಾನೆ. ಸಾಧನೆ ಮಾಡಬೇಕೆಂಬ ಅವರಲ್ಲಿನ ತುಡಿತಕ್ಕೆ ಬಡತನ ಅಡ್ಡಿಯಾಗಲಿಲ್ಲ.

ಅದಕ್ಕೆ ಇತ್ತೀಚಿನ ತಾಜಾ ನಿದರ್ಶನವೆಂದರೆ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಸೌತ್ ವೆಸ್ಟ್‌ ಏಷ್ಯಾ ಪ್ಯಾರಾ ಒಲಿಂಪಿಕ್‌ನಲ್ಲಿ ಭಾಗವಹಿಸಿ, ಗುಂಡು ಎಸೆತದಲ್ಲಿ ಬೆಳ್ಳಿ ಹಾಗೂ ಭಲ್ಲೆ ಎಸೆತದಲ್ಲಿ ಕಂಚಿನ ಪದಕ ಗೆದ್ದಿರುವುದು. ಅಂದಹಾಗೆ ಆ ಯುವಕನ ಹೆಸರು ಕೆ.ಎಂ. ಶರಣಯ್ಯ.

ಎಂ.ಎ. ಪದವೀಧರರಾಗಿರುವ ಶರಣಯ್ಯನವರ ಎರಡು ಕಾಲುಗಳು ಬಾಲ್ಯದಿಂದಲೇ ಊನಗೊಂಡಿವೆ. ಆದರೆ, ಕ್ರೀಡೆ ಬಗೆಗಿನ ಅವರ ಆಸಕ್ತಿ ಶಾಲಾ, ಕಾಲೇಜು ದಿನಗಳಿಂದಲೇ ಅದರಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿತು. ಅದರ ಪರಿಣಾಮ ತಾಲ್ಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ಯಾರಾ ಒಲಿಂಪಿಕ್‌ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು. ಈಗ ಅದು ಒಂದು ಹೆಜ್ಜೆ ಮುಂದೆ ಹೋಗಿ ಸೌತ್‌ ವೆಸ್ಟ್‌ ಏಷ್ಯಾಪ್ಯಾರಾ ಸ್ಪೋರ್ಟ್ಸ್ ವರೆಗೆ ವಿಸ್ತರಿಸಿದೆ. ಅವರ ಮುಂದಿನ ಗುರಿ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸುವುದು.

ಆಗಸ್ಟ್‌ನಲ್ಲಿ ಕಠ್ಮಂಡುವಿನಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟದ ಸಂದರ್ಭದಲ್ಲಿ ಪ್ರತಿಕೂಲ ವಾತಾವರಣ ಇತ್ತು. ಎಷ್ಟೋ ಕ್ರೀಡಾಪಟುಗಳು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದೆ ಅಸ್ವಸ್ಥರಾಗಿದ್ದರು. ಆದರೆ, ಶರಣಯ್ಯನವರು ಮಾತ್ರ ಅದೆಲ್ಲವನ್ನು ಮೀರಿ ಈ ಸಾಧನೆ ಮಾಡಿದ್ದಾರೆ. ಈಜು ಸ್ಪರ್ಧೆಯಲ್ಲೂ ಪದಕ ಗಳಿಸಬೇಕೆಂಬ ಆಸೆ ಇತ್ತು. ಆದರೆ, ಅದು ಈಡೇರಿಲ್ಲ ಎಂಬುದು ಅವರ ಕೊರಗು.

‘ದೊಡ್ಡ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು ಮೊದಲ ಸಲ. ಸಂಪೂರ್ಣ ವಿಭಿನ್ನವಾದ ಅನುಭವ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಸ್ಪರ್ಧೆಯಲ್ಲಿ ಪದಕ ಗಳಿಸುವುದು ಸವಾಲಿನ ಕೆಲಸವಾಗಿತ್ತು. ಆದರೆ, ಪದಕ ಗೆದ್ದೇ ದೇಶಕ್ಕೆ ಹಿಂತಿರುಗಬೇಕೆಂದು ಮನಸ್ಸು ಮಾಡಿದ್ದೆ. ಅದು ಈಡೇರಿದೆ’ ಎಂದು ಶರಣಯ್ಯ ಹೆಮ್ಮೆಯಿಂದ ಹೇಳುತ್ತಾರೆ.

‘ಈ ಹಿಂದೆ ನಡೆದ ಪ್ಯಾರಾ ಒಲಿಂಪಿಕ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಆದರೆ, ಆಗ ನಯಾ ಪೈಸೆಯೂ ನನ್ನ ಬಳಿ ಇರಲಿಲ್ಲ. ಇದರಿಂದಾಗಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಸಲ ನನ್ನ ಚಿಕ್ಕಮ್ಮ ಬಸಮ್ಮ, ಅತ್ತೆ ಶಾರದಮ್ಮ, ಸಹೋದರಿ ಸುಶೀಲಮ್ಮ, ಚಿಕ್ಕಪ್ಪಂದಿರಾದ ಸಣ್ಣ ಶರಣಯ್ಯ, ದೊಡ್ಡ ಶರಣಯ್ಯ ಅಣುಬೂರ್‌ ಶಿವಯ್ಯನವರು ನೀಡಿದ ಕೈಸಾಲ ಮತ್ತು ಗ್ರಾಮದ ಕೆಲವರ ಸಹಕಾರದಿಂದ ಭಾಗವಹಿಸಿದ್ದೇನೆ. ಪದಕವೇನೋ ಗೆದ್ದು ಬಂದಿದ್ದೇನೆ. ಈಗ ₨1 ಲಕ್ಷ ಕೈ ಸಾಲ ಹೇಗೆ ಹಿಂತಿರುಗಿಸಬೇಕು ಎಂಬ ಚಿಂತೆ ಕಾಡುತ್ತಿದೆ’ ಎಂದು ನೋವು ತೋಡಿಕೊಂಡರು.

‘ಮುಂದಿನ ಕ್ರೀಡಾಕೂಟ ದುಬೈನಲ್ಲಿ ಹಮ್ಮಿಕೊಂಡಿದ್ದು, ಅದರಲ್ಲೂ ಭಾಗವಹಿಸಿ ದೇಶಕ್ಕೆ ಕೀರ್ತಿ ತರಬೇಕು ಅಂದುಕೊಂಡಿದ್ದೇನೆ. ಅದಕ್ಕೆ ದಾನಿಗಳು ಹಣಕಾಸಿನ ನೆರವು ನೀಡಬೇಕು’ ಎಂದು ಕೋರಿದ್ದಾರೆ. ದಾನಿಗಳು ಶರಣಯ್ಯನವರ ಕೂಡ್ಲಿಗಿ ಎಸ್‌.ಬಿ.ಐ. ಶಾಖೆಯ ಖಾತೆ ಸಂಖ್ಯೆ 3109173418ಗೆ ನೆರವು ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT