ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತಾ ಟೂರ್ನಿ: 12 ಸದಸ್ಯರ ಶಾಟ್‌ಗನ್ ತಂಡದ ಆಯ್ಕೆ

Published 19 ಮಾರ್ಚ್ 2024, 13:39 IST
Last Updated 19 ಮಾರ್ಚ್ 2024, 13:39 IST
ಅಕ್ಷರ ಗಾತ್ರ

ನವದೆಹಲಿ: ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ ಶ್ರೇಯಸಿ ಸಿಂಗ್‌, ಅನುಭವಿ ಮೈರಾಜ್ ಅಹ್ಮದ್ ಖಾನ್ ಮತ್ತು ವಿಶ್ವಕಪ್ ವಿಜೇತೆ ಗನೇಮತ್ ಸೆಖೋನ್ ಅವರು ದೋಹಾದಲ್ಲಿ ಏಪ್ರಿಲ್ 19 ರಿಂದ 29ರವರೆಗೆ ನಡೆಯಲಿರುವ ಪ್ಯಾರಿಸ್‌ ಒಲಿಂಪಿಕ್ಸ್‌ ಶೂಟಿಂಗ್‌ ಅರ್ಹತಾ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ 12 ಸದಸ್ಯರ ಭಾರತ ಶಾಟ್‌ಗನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಜುಲೈ– ಆಗಸ್ಟ್‌ನಲ್ಲಿ ನಿಗದಿಯಾಗಿರುವ ಒಲಿಂಪಿಕ್ಸ್‌ಗೆ ಪೂರ್ವಭಾವಿಯಾಗಿ ನಡೆಯುವ ನಾಲ್ಕು ಪ್ರಮುಖ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಮಂಗಳವಾರ ತಂಡಗಳನ್ನು ಪ್ರಕಟಿಸಿದೆ.

ಒಲಿಂಪಿಕ್ಸ್‌ಗೆ ಒಟ್ಟು ನಾಲ್ಕು ಕೋಟಾ ಸ್ಥಾನಗಳನ್ನು ಪಡೆಯಲು ದೋಹಾದಲ್ಲಿ ಅವಕಾಶ ಕಲ್ಪಿಸಲಾಗಿದೆ. ಪುರುಷರ ಮತ್ತು ಮಹಿಳೆಯರ ಟ್ರ್ಯಾಪ್‌ ಮತ್ತು ಸ್ಕೀಟ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದವರು ಅರ್ಹತೆ ಪಡೆಯುತ್ತಾರೆ. ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವರನ್ನು ಈ ಟೂರ್ನಿಯಿಂದ ಹೊರಗಿಡಲಾಗಿದೆ.‌‌

ಪ್ರಥ್ವಿರಾಜ್ ತೊಂಡೈಮನ್ ಮತ್ತು ವಿವಾನ್‌ ಕಪೂರ್‌ (ಪುರುಷರ ಟ್ರ್ಯಾಪ್), ಶ್ರೇಯಸಿ ಮತ್ತು ಮನೀಶಾ ಖೀರ್ (ಮಹಿಳೆಯರ ಟ್ರ್ಯಾಪ್), ಮೈರಾಜ್ ಮತ್ತು ಶೀರಾಜ್ ಶೇಖ್ (ಪುರುಷರ ಸ್ಕೀಟ್‌), ಗನೇಮತ್ ಮತ್ತು ಮಹೇಶ್ವರಿ ಚೌಹಾನ್ (ಮಹಿಳೆಯರ ಸ್ಕೀಟ್‌) ಅವರು ಮಾತ್ರ ನಾಲ್ಕೂ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.

ಝೊರಾವರ್ ಸಂಧು (ಪುರುಷರ ಟ್ರ್ಯಾಪ್‌), ನೀರೂ (ಮಹಿಳೆಯರ ಟ್ರ್ಯಾಪ್‌), ಅಂಗದ್‌ ಬಾಜ್ವಾ (ಪುರುಷರ ಸ್ಕೀಟ್‌) ಮತ್ತು ಅರೀಬಾ ಖಾನ್ (ಮಹಿಳೆಯರ ಸ್ಕೀಟ್‌) ಅವರು ದೋಹಾದಲ್ಲಿ ಒಲಿಂಪಿಕ್ಸ್‌ ಅರ್ಹತೆ ಪಡೆಯಲು ಪ್ರಯತ್ನಿಸಲಿದ್ದಾರೆ.

ಇಟಲಿಯ ಉಂಬ್ರಿಯಾದಲ್ಲಿ ಗ್ರೀನ್ ಕಪ್ ಶಾಟ್‌ಗನ್ ಸ್ಪರ್ಧೆ, ಅಜರ್‌ಬೈಜಾನ್‌ನ ಬಾಕುವಿನಲ್ಲಿ ಐಎಸ್‌ಎಸ್‌ಎಫ್‌ ಕಂಬೈನ್ಡ್‌ ವಿಶ್ವಕಪ್ (ಎರಡೂ ಮೇ ತಿಂಗಳಲ್ಲಿದೆ) ಮತ್ತು ಇಟಲಿಯ ಲೊನಾಟೊದಲ್ಲಿ ಶಾಟ್‌ಗನ್‌ ವಿಶ್ವಕಪ್ ಸ್ಪರ್ಧೆ (ಜೂನ್‌ನಲ್ಲಿ) ಒಲಿಂಪಿಕ್ಸ್‌ಗೆ ಮುನ್ನ ನಡೆಯುವ ಮೂರು ಅಂತಿಮ ಸ್ಪರ್ಧೆಗಳಾಗಿವೆ.

ಒಲಿಂಪಿಕ್ಸ್ ಶಾಟ್‌ಗನ್ ಸಂಭವನೀಯ ಶೂಟರ್‌ಗಳು ಪ್ರಸ್ತುತ ನವದೆಹಲಿಯಲ್ಲಿ ನಡೆಯುತ್ತಿರುವ ತಾಂತ್ರಿಕ ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಇದರ ನಂತರ ದೋಹಾಕ್ಕೆ ತೆರಳುವ ಮೊದಲು ಟ್ರ್ಯಾಪ್ ಮತ್ತು ಸ್ಕೀಟ್‌ ತಂಡಗಳಿಗೆ ಸಿದ್ಧತಾ ಶಿಬಿರ ನಡೆಯಲಿದೆ.

ಭಾರತ ಇದುವರೆಗೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ 19 ಕೋಟಾ ಸ್ಥಾನಗಳನ್ನು ಗಳಿಸಿದೆ. ಶಾಟ್‌ಗನ್ ವಿಭಾಗದಲ್ಲಿ ಅತಿ ಹೆಚ್ಚು ಮಂದಿ– ನಾಲ್ವರು ಒಲಿಂಪಿಕ್ಸ್‌ ಟಿಕೆಟ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT