ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

1000 ಖೇಲೊ ಇಂಡಿಯಾ ಕೇಂದ್ರಗಳ ಆರಂಭ

ಕ್ರೀಡೆಗಳ ಉತ್ತೇಜನಕ್ಕೆ ಜಿಲ್ಲಾ ಮಟ್ಟದಲ್ಲಿ ಯೋಜನೆ: ಕಿರಣ್‌ ರಿಜಿಜು
Published : 19 ಜೂನ್ 2020, 16:40 IST
ಫಾಲೋ ಮಾಡಿ
Comments

ನವದೆಹಲಿ: ದೇಶದಾದ್ಯಂತ ಜಿಲ್ಲಾ ಮಟ್ಟದಲ್ಲಿ 1000 ಖೇಲೊ ಇಂಡಿಯಾ ಕೇಂದ್ರಗಳನ್ನು (ಕೆಐಸಿ) ಆರಂಭಿಸಲು ಕೇಂದ್ರ ಕ್ರೀಡಾ ಸಚಿವಾಲಯ ಸಜ್ಜಾಗಿದೆ. ಈ ಕಾರ್ಯಕ್ಕೆ ಕ್ರೀಡಾ ಚಾಂಪಿಯನ್‌ಗಳ ನೆರವು ಪಡೆದು ಅವರಿಗೆ ಸಂಭಾವನೆ ನೀಡಲು ಇಲಾಖೆ ಚಿಂತನೆ ನಡೆಸಿದೆ.

ಈ ಹಿಂದೆ ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್‌ ಆದ ಪಟುಗಳು ಈ ಕೇಂದ್ರಗಳನ್ನು ಮುನ್ನಡೆಸಲಿದ್ದಾರೆ ಅಥವಾ ಅವರನ್ನು ಕೋಚ್‌ ಆಗಿಯೂ ನೇಮಿಸಿಕೊಳ್ಳಲಾಗುತ್ತದೆ.

‘ಭಾರತವನ್ನು ಒಂದು ಕ್ರೀಡಾ ಶಕ್ತಿಯಾಗಿ ರೂಪಿಸಲು ನಾವು ಶ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಯುವಕರಿಗೆ ಕ್ರೀಡೆಯು ವೃತ್ತಿಜೀವನದ ಕಾರ್ಯಸಾಧುಆಯ್ಕೆಯಾಗಿದೆ ಎಂಬುದನ್ನು ಖಚಿತಪಡಿಸಬೇಕಿದೆ’ ಎಂದು ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

‘ಅಥ್ಲೀಟ್‌ಗಳು ಸ್ಪರ್ಧಾತ್ಮಕ ಕ್ರೀಡೆಯಿಂದ ನಿವೃತ್ತರಾದ ಬಳಿಕವೂ, ಕ್ರೀಡೆಯು ಅವರಿಗೆ ನಿರಂತರ ಜೀವನೋಪಾಯ ಒದಗಿಸಲು ಸಾಧ್ಯವಾಗಬೇಕು. ಹಾಗಾದಾಗ ಪೋಷಕರು ಕ್ರೀಡೆಯನ್ನು ಒಂದು ಗಂಭೀರ ವೃತ್ತಿಯನ್ನಾಗಿ ಆಯ್ದುಕೊಳ್ಳಲು ಮಕ್ಕಳನ್ನು ಪ್ರೇರೇಪಿಸುತ್ತಾರೆ. ಶ್ರೇಷ್ಠ ಪ್ರತಿಭೆಗಳನ್ನು ಹೊರತರಲು ಇದೊಂದೇ ಮಾರ್ಗ. ನಾವು ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದೇವೆ’ ಎಂದು ರಿಜಿಜು ವಿವರಿಸಿದರು.

ಕಿರುಪಟ್ಟಿ ಯಾಂತ್ರಿಕ ವ್ಯವಸ್ಥೆ: ತಮ್ಮದೇ ಆದ ಅಕಾಡೆಮಿಯನ್ನು ಸ್ಥಾಪಿಸಲು ಅಥವಾ ಕೆಐಸಿಯಲ್ಲಿ ತರಬೇತುದಾರರಾಗಿ ಕೆಲಸ ಮಾಡಲು ಅರ್ಹರಾಗಿರುವ ಹಿರಿಯ ಚಾಂಪಿಯನ್‌ಗಳನ್ನು ಗುರುತಿಸಲು ಕಿರು-ಪಟ್ಟಿ ಯಾಂತ್ರಿಕ ವ್ಯವಸ್ಥೆಯನ್ನು ರೂಪಿಸಲಾಗಿದೆ. ಮೊದಲ ಆದ್ಯತೆಯಾಗಿ, ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ (ಎನ್‌ಎಸ್‌ಎಫ್‌) ಅಥವಾ ಅಸೋಸಿಯೇಷನ್‌ ಅಡಿಯಲ್ಲಿ ಅಂಗೀಕೃತ ಅಂತರರಾಷ್ಟ್ರೀಯ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದವರನ್ನು ಪರಿಗಣಿಸಲಾಗುವುದು.

ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಅಥವಾ ಮಾನ್ಯತೆ ಪಡೆದ ಎನ್‌ಎಸ್‌ಎಫ್‌ ಆಯೋಜಿಸಿದ್ದ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿಪದಕ ವಿಜೇತರನ್ನು ಎರಡನೇ ವರ್ಗದಲ್ಲಿ ಪರಿಗಣಿಸಲಾಗುವುದು.

ಮೂರನೇ ವರ್ಗದಲ್ಲಿ, ರಾಷ್ಟ್ರೀಯ ಅಖಿಲ ಭಾರತ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರನ್ನು ಆಯ್ಕೆಗೆ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಅಥವಾ ಖೇಲೊ ಇಂಡಿಯಾ ಕೂಟದಲ್ಲಿ ಭಾಗವಹಿಸಿದವರನ್ನು ನಾಲ್ಕನೇ ವರ್ಗದಲ್ಲಿ ಪರಿಗಣಿಸಲಾಗುತ್ತದೆ.

ಜಮ್ಮು ಮತ್ತು ಕಾಶ್ಮೀರ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಪ್ರದೇಶಗಳು ಮತ್ತು ಲಡಾಕ್‌ ಪ್ರದೇಶಗಳ ಅಥ್ಲೀಟುಗಳಿಗೆ ಈ ನಿಯಮದಿಂದ ಅಲ್ಪ ವಿನಾಯಿತಿ ಇದೆ. ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಐಎಸ್‌)ಯಿಂದ ತರಬೇತಿ ಪ್ರಮಾಣಪತ್ರ ಪಡೆದ ಈ ಈ ಪ್ರದೇಶಗಳಿಗೆ ಸೇರಿದ ಕೋಚ್‌ಗಳು ಅರ್ಜಿ ಸಲ್ಲಿಸಲು ಅವಕಾಶವಿದೆ.

ದೇಶದಾದ್ಯಂತ ಕೆಐಸಿ ಜಾಲ ನಿರ್ಮಿಸಲು, ಅಸ್ತಿತ್ವದಲ್ಲಿರುವ ಸಾಯ್‌ ವಿಸ್ತರಣಾ ಕೇಂದ್ರಗಳಿಗೆ, ಕೆಐಸಿಯಾಗಿ ಪರಿವರ್ತನೆ ಮತ್ತು ಯೋಜನೆಯಡಿ ಚಾಂಪಿಯನ್‌ಗಳನ್ನು ನೇಮಿಸಿಕೊಳ್ಳುವ ಆಯ್ಕೆಯನ್ನು ನೀಡಲಾಗುತ್ತದೆ.

ಕನಿಷ್ಠ ಐದು ವರ್ಷಗಳಿಂದ ಕ್ರೀಡೆಗಳನ್ನು ಉತ್ತೇಜಿಸುತ್ತಿರುವ ಸಂಸ್ಥೆಗಳೂ ಕೆಐಸಿಯನ್ನು ಸ್ಥಾಪಿಸಲು ಅರ್ಹರಾಗಿರುತ್ತವೆ.

14 ಕ್ರೀಡೆಗಳಲ್ಲಿ ತರಬೇತಿ: ಆರ್ಚರಿ, ಅಥ್ಲೆಟಿಕ್ಸ್‌, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌, ಸೈಕ್ಲಿಂಗ್‌, ಫೆನ್ಸಿಂಗ್‌, ಹಾಕಿ, ಜೂಡೊ, ರೋಯಿಂಗ್‌, ಶೂಟಿಂಗ್‌, ಈಜು, ಟೇಬಲ್‌ ಟೆನಿಸ್‌, ವೇಟ್‌ಲಿಫ್ಟಿಂಗ್‌ ಹಾಗೂ ಕುಸ್ತಿ ಸೇರಿದಂತೆ 14 ಕ್ರೀಡೆಗಳಿಗೆ ಈ ಯೋಜನೆಯಡಿ ತರಬೇತಿ ನೀಡಲಾಗುತ್ತದೆ. ಫುಟ್‌ಬಾಲ್‌ ಹಾಗೂ ಸಾಂಪ್ರದಾಯಿಕ ಕ್ರೀಡೆಗಳೂ ಇದರಲ್ಲಿವೆ.‌

ಹೊಸ ಕೆಐಸಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾ ಇಲಾಖೆಗಳು ನೋಡಿಕೊಳ್ಳುತ್ತವೆ. ಜಿಲ್ಲಾಧಿಕಾರಿಗಳು ಈ ಕಾರ್ಯಕ್ಕೆ ನೆರವು ನೀಡಲಿದ್ದಾರೆ. ಕೆಐಸಿಗಾಗಿ ಸಲ್ಲಿಸಿದ ಪ್ರಸ್ತಾವವನ್ನು ಹೆಚ್ಚಿನ ಪರಿಶೀಲನೆಗಾಗಿ ಸಾಯ್‌ನ ವಲಯ ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT