ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಈಜು ಚಾಂಪಿಯನ್‌ಷಿಪ್‌: ಕೇಟಿ ಲೆಡೆಕಿ ಎರಡು ವಿಶ್ವದಾಖಲೆ

Published 29 ಜುಲೈ 2023, 16:13 IST
Last Updated 29 ಜುಲೈ 2023, 16:13 IST
ಅಕ್ಷರ ಗಾತ್ರ

ಫುಕೊವೊಕಾ (ಜಪಾನ್‌): ವಿಶ್ವದ ಶ್ರೇಷ್ಠ ಈಜುಗಾರ್ತಿ ಎಂಬ ಖ್ಯಾತಿಯನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕದ ಕೇಟಿ ಲೆಡೆಕಿ ಅವರು ಶನಿವಾರ ವಿಶ್ವ ಈಜು ಚಾಂಪಿಯನ್‌ಷಿಪ್‌ನ 800 ಮೀಟರ್ ಫ್ರೀಸ್ಟೈಲ್‌ನಲ್ಲಿ ಚಿನ್ನವನ್ನು ಗೆದ್ದರು. ಜೊತೆಗೆ ಎರಡು ದಾಖಲೆಗಳಿಗೂ ಅವರು ಒಡತಿಯಾದರು.

26 ವರ್ಷದ ಲೆಡೆಕಿ ಅವರು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಒಂದೇ ಸ್ಪರ್ಧೆಯನ್ನು ಆರು ಬಾರಿ ಗೆದ್ದ ಮೊದಲ ಈಜುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಜತೆಗೆ ವೈಯಕ್ತಿಕ ವಿಭಾಗದಲ್ಲಿ 16ನೇ ಚಿನ್ನ ಗೆದ್ದು, ಅಮೆರಿಕದ ಮೈಕೆಲ್ ಫೆಲ್ಪ್ಸ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.

ಅವರು 8 ನಿಮಿಷ 8.87 ಸೆಕೆಂಡ್‌ನಲ್ಲಿ ಗುರಿಮುಟ್ಟಿದರೆ, ಚೀನಾದ ಲಿ ಬಿಂಗ್ಜಿ (8ನಿ.13.31ಸೆ), ಆಸ್ಟ್ರೇಲಿಯಾದ ಅರಿಯಾರ್ನೆ ಟಿಟ್ಮಸ್ (8ನಿ.13.59ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. 

ಸಾರಾ ವಿಶ್ವದಾಖಲೆ: ಸ್ವೀಡನ್‌ನ ಈಜುಗಾರ್ತಿ ಸಾರಾ ಸ್ಜೋಸ್ಟ್ರೋಮ್ ಅವರು 50 ಮೀಟರ್‌ ಫ್ರೀಸ್ಟೈಲ್‌ನಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದರು.

ಸೆಮಿಫೈನಲ್‌ ಸುತ್ತಿನಲ್ಲಿ 23.61 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ, 2017ರಲ್ಲಿ ತಾವೇ ಸ್ಥಾಪಿಸಿದ್ದ (23.67 ಸೆ) ದಾಖಲೆಯನ್ನು ಮುರಿದರು. ಅವರು ವಿಶ್ವ ಈಜು ಚಾಂಪಿಯನ್‌ಷಿಪ್‌ಗಳಲ್ಲಿ 11 ಚಿನ್ನ ಸೇರಿದಂತೆ 20 ವೈಯಕ್ತಿಕ ಪದಕ ಗೆದ್ದಿದ್ದಾರೆ.

ಸರಿಗಟ್ಟಿದ ದಾಖಲೆ: ಲಿಥುವೇನಿಯಾದ ರುತಾ ಮಿಲುಟೈಟ್ ಅವರು ಮಹಿಳೆಯರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಿನ್ನದ ಪದಕದೊಂದಿಗೆ ವಿಶ್ವದಾಖಲೆ ಸರಿಗಟ್ಟಿದರು.

ಅವರು 29.30 ಸೆಕೆಂಡ್‌ನಲ್ಲಿ ಗುರಿಮುಟ್ಟಿ, 2021ರಲ್ಲಿ ‌ಇಟಲಿಯ ಬೆನೆಡೆಟ್ಟಾ ಪಿಲಾಟೊ ಸ್ಥಾಪಿಸಿದ ವಿಶ್ವದಾಖಲೆಯನ್ನು ಸರಿಗಟ್ಟಿದರು. ಅವರು ವಾರದ ಹಿಂದೆ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಿನ್ನ ಗೆದ್ದಿದ್ದರು.

ಮಿಕ್ಸೆಡ್‌ ರಿಲೇ ತಂಡ ದಾಖಲೆ: ಆಸ್ಟ್ರೇಲಿಯಾದ ಮಿಕ್ಸೆಡ್‌ 4x100 ಮೀಟರ್‌ ಫ್ರೀಸ್ಟೈಲ್ ರಿಲೇ ತಂಡವು ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದೆ.

ಆಸ್ಟ್ರೇಲಿಯಾ ತಂಡವು 3 ನಿ.18.83 ಸೆಕೆಂಡ್‌ನಲ್ಲಿ ಗುರಿ ತಲುಪಿತು. ಕಳೆದ ವರ್ಷ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತನ್ನದೇ ಹೆಸರಿನಲ್ಲಿದ್ದ ದಾಖಲೆ (3 ನಿ.19.38ಸೆ) ಸುಧಾರಿಸಿತು. ವಿಜೇತ ತಂಡದಲ್ಲಿ ಜ್ಯಾಕ್ ಕಾರ್ಟ್‌ರೈಟ್, ಕೈಲ್ ಚಾಲ್ಮರ್ಸ್, ಶೈನಾ ಜ್ಯಾಕ್ ಮತ್ತು ಮೊಲ್ಲಿ ಒಕಲ್ಲಾಘನ್ ಇದ್ದರು.

ಅಮೆರಿಕ (3ನಿ.20.82ಸೆ) ಮತ್ತು ಬ್ರಿಟನ್‌ (3ನಿ.21.68ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡವು.

ಅಮೆರಿಕದ ಕೇಟಿ ಲೆಡೆಕಿ– ಎಎಫ್‌ಪಿ ಚಿತ್ರ
ಅಮೆರಿಕದ ಕೇಟಿ ಲೆಡೆಕಿ– ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT