ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಗರ್‌ ‘ಫೀನಿಕ್ಸ್‌’: ಪ್ರಾಯೋಜಕರಿಗೆ ‘ಮಾಸ್ಟರ್ಸ್‌’ ಸ್ಟ್ರೋಕ್‌

Last Updated 21 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಅದು, 2018ರ ಸೆಪ್ಟೆಂಬರ್. ಅಟ್ಲಾಂಟದ ಈಸ್ಟ್ ಲೇಕ್ ಗಾಲ್ಫ್ ಕ್ಲಬ್ ಆವರಣದಲ್ಲಿ ನಡೆದ ಪಿಜಿಎ ಟೂರ್ ಚಾಂಪಿಯನ್‌ಷಿಪ್‌ನ ಆಂತಿಮ ಹಂತದಲ್ಲಿ ಎಲ್ಲರ ನೋಟ ಇದ್ದದ್ದು ಟೈಗರ್ ವುಡ್ಸ್ ಮೇಲೆ. ದೈಹಿಕ ಮತ್ತು ಮಾನಸಿಕ ‘ಯಾತನೆ’ಯಿಂದ ನಿಧಾನವಾಗಿ ಹೊರಬರಲು ಪ್ರಯತ್ನಿಸುತ್ತಿದ್ದ ಟೈಗರ್ ಈ ಬಾರಿಯಾದರೂ ಯಶಸ್ಸು ಸಾಧಿಸುವರೇ ಎಂಬುದಾಗಿತ್ತು ಅಲ್ಲಿ ಸೇರಿದ್ದ ಗಾಲ್ಫ್ ಪ್ರಿಯರು ಮತ್ತು ಟೈಗರ್ ಅಭಿಮಾನಿಗಳಲ್ಲಿ ಮೂಡಿದ್ದ ಪ್ರಶ್ನೆ.

ನಿರೀಕ್ಷೆ ಹುಸಿಗೊಳಿಸದ ಟೈಗರ್ ಆ ಟೂರ್ನಿಯಲ್ಲಿ ಗೆದ್ದು ಐದು ವರ್ಷಗಳ ಬರವನ್ನು ನೀಗಿಸಿದ್ದರು. ನೋವಿನಿಂದ ಮುಕ್ತಿ ಪಡೆಯಲು ಪ್ರಯತ್ನಿಸುತ್ತಿದ್ದ ಅವರು ಗೆದ್ದ ಪ್ರಮುಖ ಪಿಜಿಎ ಟೂರ್ ಚಾಂಪಿಯನ್‌ಷಿಪ್‌ ಪ್ರಶಸ್ತಿಯಾಗಿತ್ತು ಅದು.

ಈ ಸಂದರ್ಭದಲ್ಲಿ ಕೇಳಿಬಂದ ಪ್ರಶಂಸೆ, ಹರಿದ ಅಭಿಮಾನದ ಹೊಳೆ ಮತ್ತು ಮೂಡಿದ ಭರವಸೆಯಿಂದಲೇ ಇರಬೇಕು, ಆರು ತಿಂಗಳ ನಂತರ ಅವರು ಮತ್ತೊಮ್ಮೆ ಜಗತ್ತಿನ ಗಮನ ಸೆಳೆದರು. ಕಳೆದ ವಾರ ಮುಕ್ತಾಯಗೊಂಡ 2019ರ ಮಾಸ್ಟರ್ಸ್‌ ಟೂರ್ನಿಯ ಪ್ರಶಸ್ತಿ ಬಗಲಿಗೆ ಹಾಕಿಕೊಂಡ ಅವರು ಒಂದು ದಶಕದ ನಂತರ ‘ಮಾಸ್ಟರ್ಸ್‌’ ಪ್ರಶಸ್ತಿ ಗೆದ್ದು ನಿಟ್ಟುಸಿರುಬಿಟ್ಟರು.

ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಸೇರಿದಂತೆ ಜಗತ್ತಿನ ಪ್ರಮುಖ ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಕಾತರ, ಕುತೂಹಲದಿಂದ ವೀಕ್ಷಿಸಿದ ಮಾಸ್ಟರ್ಸ್‌ ಟೂರ್ನಿಯಲ್ಲಿ ಗೆದ್ದ ಟೈಗರ್ ವುಡ್ಸ್‌ ಹೊಸ ದಾಖಲೆಯೊಂದರ ಒಡೆಯರಾದರು. ಕುಸಿತ ಕಂಡ ಕ್ರೀಡಾಪಟು ಒಬ್ಬ ಸುದೀರ್ಘ ಅವಧಿಯ ನಂತರ ಪುಟಿದೆದ್ದ ಅಪರೂಪದ ಪ್ರಸಂಗವಾಗಿ ಈ ಪ್ರಶಸ್ತಿ ಜಗತ್ತಿನಾದ್ಯಂತ ಸುದ್ದಿ ಮಾಡಿತು.

ದಾಂಪತ್ಯ ವಿರಸ, ದೈಹಿಕ ನೋವು
ಪತ್ನಿ ಎಲಿನ್ ನಾರ್ಡರೆನ್ ಜೊತೆಗಿನ ವಿರಸ ಮತ್ತು ಗಾಯದ ಸಮಸ್ಯೆಗಳಿಂದಾಗಿ 2009ರಲ್ಲಿ ಗಾಲ್ಫ್ ಅಂಗಳದಿಂದ ದೂರ ಉಳಿದ ಟೈಗರ್ ಮುಂದಿನ ವರ್ಷ ಮರುಪ್ರವೇಶ ಮಾಡಿದ್ದರು. ಆ ವರ್ಷ ಅವರ ವಿವಾಹ ವಿಚ್ಛೇದನವೂ ಆಯಿತು. ಹೀಗಾಗಿ ನಂತರದ ವರ್ಷದ ನವೆಂಬರ್‌ನಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 58ನೇ ಸ್ಥಾನಕ್ಕೆ ಕುಸಿದರು. ಆದರೆ 2013 ಮತ್ತು 2015ರಲ್ಲಿ ಮತ್ತೆ ಅಗ್ರಸ್ಥಾನ ತಮ್ಮದಾಗಿಸಿಕೊಂಡರು. 2015 ಮತ್ತು 2017ರ ಅವಧಿಯಲ್ಲಿ ಮತ್ತೊಮ್ಮೆ ಪತನದ ಹಾದಿ ಹಿಡಿದರು.

ಮಾಸ್ಟರ್ಸ್‌ ಟೂರ್ನಿಯಲ್ಲಿ ಮಾಡಿದ ಸಾಧನೆ ಅವರ ಬದುಕಿನ ಬಹುದೊಡ್ಡ ತಿರುವು ಎಂದೇ ತಿಳಿಯಲಾಗಿದೆ. ಮೊಣಕಾಲು ನೋವಿನಿಂದ ಬಳಲುತ್ತಿದ್ದ ರೋಜರ್ ಫೆಡರರ್ ಪುಟಿದೆದ್ದು ಆಸ್ಟ್ರೇಲಿಯಾ ಓಪನ್ ಟೂರ್ನಿಯ ಪ್ರಶಸ್ತಿ ಗೆದ್ದದ್ದು, 141ನೇ ರ‍್ಯಾಂಕಿಂಗ್‌ಗೆ ಕುಸಿದಿದ್ದ ಆ್ಯಂಡ್ರೆ ಅಗಾಸಿ 1999ರ ಫ್ರಂಚ್‌ ಓಪನ್ ಟೂರ್ನಿಯ ಚಾಂಪಿಯನ್ ಆದದ್ದು, 2001ರ ಕೋಲ್ಕತ್ತ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ 274 ರನ್‌ಗಳ ಮುನ್ನಡೆ ಬಿಟ್ಟುಕೊಟ್ಟ ಭಾರತ ನಂತರ ಪಂದ್ಯ ಗೆದ್ದದ್ದು.... ಹೀಗೆ ಕ್ರೀಡಾಲೋಕದಲ್ಲಿ ದಾಖಲಾದ ಅಪರೂಪದ ‘ಫೀನಿಕ್ಸ್’ ಪ್ರಕರಣಗಳ ಪೈಕಿ ಅತ್ಯಂತ ರಂಗಿನದು ಟೈಗರ್ ವುಡ್ಸ್ ಅವರ ಗೆಲುವು ಎಂದು ಬಣ್ಣಿಸಲಾಗುತ್ತಿದೆ.

ಕಾಲೇಜು ದಿನಗಳಲ್ಲೇ ಗಾಲ್ಫ್‌ನಲ್ಲಿ ಸಾಧನೆ ಮಾಡುತ್ತಿದ್ದ ವುಡ್ಸ್ 1996ರಿಂದ ವೃತ್ತಿಪರ ಟೂರ್ನಿಗಳಲ್ಲಿ ನಾಗಾಲೋಟಕ್ಕೆ ನಾಂದಿ ಹಾಡಿದ್ದರು. ಒಂದು ವರ್ಷದ ಅವಧಿಯಲ್ಲಿ ಮೂರು ಪಿಜಿಎ ಟೂರ್ನಿಗಳ ಪ್ರಶಸ್ತಿ ಗೆದ್ದ ಅವರು ಮೊದಲ ಮಾಸ್ಟರ್ಸ್‌ ಪ್ರಶಸ್ತಿಯನ್ನೂ ಈ ಅವಧಿಯಲ್ಲಿ ಬಗಲಿಗೆ ಹಾಕಿಕೊಂಡರು. ನಂತರ ಅವರ ಎದುರು ಸೆಟೆದು ನಿಲ್ಲುವವರು ಯಾರೂ ಇರಲಿಲ್ಲ. ಇಂಥ ಸಂದರ್ಭದಲ್ಲಿ ಬಂದೆರಗಿತ್ತು ಮಾನಸಿಕ ಮತ್ತು ದೈಹಿಕ ನೋವಿನ ಬರ ಸಿಡಿಲು. ಇದೀಗ 43ರ ಹರೆಯದಲ್ಲಿ 15ನೇ ಪ್ರಮುಖ ಪ್ರಶಸ್ತಿ ಗೆದ್ದು ಮತ್ತೆ ಗಮನ ಸೆಳೆದಿದ್ದಾರೆ.

ಪ್ರಾಯೋಜಕರಿಗೆ ‘ಮಾಸ್ಟರ್ಸ್‌’ ಸ್ಟ್ರೋಕ್‌
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಟೈಗರ್ ಅವರನ್ನು ಪ್ರಾಯೋಜಕರೂ ಕೈಬಿಟ್ಟಿದ್ದರು. ಆದರೆ ಮಾಸ್ಟರ್ಸ್‌ ಪ್ರಶಸ್ತಿ ಗೆದ್ದು ಮತ್ತೊಮ್ಮೆ ಭಾರಿ ಆದಾಯದ ಒಡೆಯನಾಗುವತ್ತ ದಾಪುಗಾಲು ಹಾಕಿದ್ದಾರೆ. ಪ್ರಶಸ್ತಿ ಮೊತ್ತ ₹ 12 ಕೋಟಿ 48 ಲಕ್ಷ ಗಳಿಸಿದ ಅವರ ಆದಾಯ ಏಕಾಏಕಿ ₹ 700 ಕೋಟಿಗೂ ಅಧಿಕವಾಗಿದೆ. ಮಾಸ್ಟರ್ಸ್‌ ಟೂರ್ನಿ ಪ್ರಶಸ್ತಿ ಗೆಲ್ಲುವ ಮೂಲಕ ಐದನೇ ಬಾರಿ ಗ್ರೀನ್ ಜಾಕೆಟ್ ಮೈಮೇಲೆ ಹಾಕಿಕೊಂಡ ಅವರ ಖಾತೆಗೆ ಇನ್ನೆಷ್ಟು ಮೊತ್ತ ಬಂದು ಸೇರುತ್ತದೆಯೋ ಎಂಬುದು ಈಗ ವಾಣಿಜ್ಯ ಲೋಕದಲ್ಲಿ ಚರ್ಚೆಯಾಗುತ್ತಿರುವ ವಿಷಯ.

ಟೈಗರ್ ವುಡ್ಸ್ ಕುರಿತು...
ಪೂರ್ಣ ಹೆಸರು:
ಎಡ್ರಿಕ್ ಟಾಂಟ್ ವುಡ್ಸ್
ಅಡ್ಡ ಹೆಸರು: ಟೈಗರ್
ಜನನ: 1975, ಡಿಸೆಂಬರ್ 30 (ಕ್ಯಾಲಿಫೋರ್ನಿಯಾ)
ಶಿಕ್ಷಣ:
ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯ
ಪಿಜಿಎ ಪ್ರಶಸ್ತಿಗಳು: 81
ಯುರೋಪಿಯನ್ ಟೂರ್:41
ಜಪಾನ್ ಟೂರ್: 2
ಏಷ್ಯನ್ ಟೂರ್: 1
ಆಸ್ಟ್ರೇಲೇಷ್ಯಾ ಪಿಜಿಎ ಟೂರ್: 1
ಇತರೆ: 16

ಪ್ರಮುಖ ಟೂರ್ನಿಗಳಲ್ಲಿ ಸಾಧನೆ
ಮಾಸ್ಟರ್ಸ್‌ ಟೂರ್ನಿ ಪ್ರಶಸ್ತಿಗಳು:
1997, 2001, 2002, 2005, 2019
ಯುಎಸ್ ಓಪನ್ ಪ್ರಶಸ್ತಿಗಳು: 2000, 2002, 2008
ಓಪನ್ ಚಾಂಪಿಯನ್‌ಷಿಪ್‌ ಪ್ರಶಸ್ತಿ: 2000, 2005, 2006
ಪಿಜಿಎ ಚಾಂಪಿಯನ್‌ಷಿಪ್‌ ಪ್ರಶಸ್ತಿ: 1999, 2000, 2006, 2007

ಪ್ರಮುಖ ಪ್ರಶಸ್ತಿಗಳು
ಪಿಜಿಎ ಟೂರ್ ವರ್ಷದ ಶ್ರೇಷ್ಠ ವ್ಯಕ್ತಿ: 1 (1996)
ಪಿಜಿಎ ವರ್ಷದ ಆಟಗಾರ: 11 (1997ರಿಂದ 2013)
ಪಿಜಿಎ ಟೂರ್: 6 (2002-2013)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT