ಬುಡಾಪೆಸ್ಟ್: ಐಎಂ ಆಟಗಾರ್ತಿ ವಂತಿಕಾ ಅಗರವಾಲ್, ಅಗತ್ಯ ಸಂದರ್ಭದಲ್ಲಿ ಗ್ರ್ಯಾಂಡ್‌ಮಾಸ್ಟರ್ ಐರಿನಾ ಕ್ರುಶ್ ಅವರನ್ನು ಸೋಲಿಸಿದರು. ಆ ಮೂಲಕ 45ನೇ ಚೆಸ್ ಒಲಿಂಪಿಯಾಡ್‌ನ ಒಂಬತ್ತನೇ ಸುತ್ತಿನಲ್ಲಿ ಭಾರತ ತಂಡ 2–2 ರಿಂದ ಅಮೆರಿಕ ಜೊತೆ ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾಯಿತು.
ಓಪನ್ ವಿಭಾಗದಲ್ಲಿ ಭಾರತ ತಂಡ 2–2 ರಿಂದ ಉಜ್ಬೇಕಸ್ತಾನ ಜೊತೆ ಡ್ರಾ ಮಾಡಿಕೊಂಡಿತು. ನಾಲ್ಕೂ ಪಂದ್ಯಗಳು ಡ್ರಾ ಆದವು. ಭಾರತ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಮಹಿಳಾ ವಿಭಾಗದಲ್ಲಿ ಕಜಕಸ್ತಾನವು (16 ಪಾಯಿಂಟ್ಸ್), ಭಾರತವನ್ನು (15 ಪಾಯಿಂಟ್ಸ್) ಎರಡನೇ ಸ್ಥಾನಕ್ಕೆ ಸರಿಸಿದೆ. 9 ತಂಡಗಳು ತಲಾ 14 ಪಾಯಿಂಟ್ಸ್ ಕಲೆಹಾಕಿ ಮೂರರಿಂದ 11ರವರೆಗಿನ ಸ್ಥಾನದಲ್ಲಿವೆ.
ಭಾರತ ತಂಡದ ಚಿಂತಕರ ಚಾವಡಿಯ, ಲಯದಲ್ಲಿ ಇಲ್ಲದ ದ್ರೋಣವಲ್ಲಿ ಹಾರಿಕಾ ಅವರಿಗೆ ವಿಶ್ರಾಂತಿ ನೀಡಿತು. ಆದರೆ ಅದರಿಂದ ದೊಡ್ಡ ಬದಲಾವಣೆಯೇನೂ ಕಾಣಲಿಲ್ಲ. ಮೊದಲ ಬೋರ್ಡ್‌ನಲ್ಲಿ ಆರ್ ವೈಶಾಲಿ, ಗುಲ್ರುಕ್‌ಬೇಗಿಮ್ ತೊಖಿರ್‌ಜೊನೊವಾ ಅವರಿಗೆ ಮಣಿದರು. ದಿವ್ಯಾ ದೇಶಮುಖ್ ಅಂಥ ಆಸಕ್ತಿ ಕೆರಳಿಸದ ಪಂದ್ಯದಲ್ಲಿ ಕರಿಸಾ ಯಿಪ್ ಜೊತೆ ‘ಡ್ರಾ’ಕ್ಕೆ ಒಪ್ಪಿಕೊಂಡರು.
ನಾಲ್ಕನೇ ಬೋರ್ಡ್‌ನಲ್ಲಿ ತಾನಿಯಾ ಸಚ್‌ದೇವ್, ಎದುರಾಳಿ ಅಲೈಸ್ ಲೀ ಎದುರು ಉತ್ತಮ ಪ್ರದರ್ಶನ ನೀಡಿದರೂ, ಗೆಲುವಿಗೆ ಬೇಕಾದ ಪಡೆ ಕ್ರೋಡೀಕರಿಸುವಲ್ಲಿ ವಿಫಲರಾಗಿ ‘ಡ್ರಾ’ಕ್ಕೆ ತೃಪ್ತಿಪಡಬೇಕಾಯಿತು.
ಹೀಗಾಗಿ ಸೋಲು ತಪ್ಪಿಸಿಕೊಳ್ಳಲು ಮೂರನೇ ಬೋರ್ಡ್‌ನಲ್ಲಿ ವಂತಿಕಾ ಆಟ ನಿರ್ಣಾಯಕವಾಯಿತು. ಆದರೆ ಇಚ್ಛಾಶಕ್ತಿಯೊಡನೆ ಆಡಿದ ಯುವ ಆಟಗಾರ್ತಿ, ಎದುರಾಳಿ ಗ್ರ್ಯಾಂಡ್‌ಮಾಸ್ಟರ್ ಐರಿನಾ ಅವರಿಗೆ ಆಘಾತ ನೀಡಿ ಪಂದ್ಯ ಸಮಬಲಗೊಳ್ಳಲು ಕಾರಣರಾದರು.
ಕೊನೆಯ ಎರಡು ಸುತ್ತುಗಳಲ್ಲಿ ಗೆದ್ದರೆ ಮಾತ್ರ ಭಾರತ ವನಿತೆಯರ ತಂಡಕ್ಕೆ ಚಿನ್ನದ ಆಸೆ ಈಡೇರಬಹುದು.
ಓಪನ್ ವಿಭಾಗದಲ್ಲಿ ಸತತ ಎಂಟು ಪಂದ್ಯಗಳಲ್ಲಿ ಜಯಗಳಿಸಿದ್ದ ಭಾರತ ಮೊದಲ ಬಾರಿ ಎದುರಾಳಿಗೆ ಪಾಯಿಂಟ್ ಬಿಟ್ಟುಕೊಟ್ಟಿತು. ಈ ಸುತ್ತು ಗೆದ್ದಿದ್ದರೆ ಭಾರತಕ್ಕೆ ಚಿನ್ನ ಖಚಿತವಾಗುತಿತ್ತು. ಆದರೆ ಒಂಬತ್ತನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಉಜ್ಬೇಕಿಸ್ತಾನ ಎದುರು 2–2 ಸಮಬಲ ಆಯಿತು. ಆದರೆ ಅಗ್ರಸ್ಥಾನಕ್ಕೆ ಚ್ಯುತಿಯಾಗಿಲ್ಲ. ಭಾರತ 17 ಪಾಯಿಂಟ್ಸ್ ಗಳಿಸಿದ್ದರೆ, ಮೂರು ತಂಡಗಳು (ಅಮೆರಿಕ, ಉಜ್ಬೇಕಿಸ್ತಾನ, ಚೀನಾ) ತಲಾ 15 ಪಾಯಿಂಟ್ಸ್ ಕಲೆಹಾಕಿವೆ.
ಅರ್ಜುನ್ ಇರಿಗೇಶಿ, ಎದುರಾಳಿ ಶಂಸಿದ್ದೀನ್ ವೊಖಿಡೋವ್ ಮಾಡಿದ ಪ್ರಮಾದವನ್ನು ಅಪರೂಪವೆಂಬಂತೆ ಸರಿಯಾಗಿ ಗಮನಿಸಲಿಲ್ಲ. ನಿಟ್ಟುಸಿರುಬಿಟ್ಟ ವೊಕಿಡೋವ್ ಮತ್ತೊಮ್ಮೆ ಅಂಥ ಅವಕಾಶ ನೀಡಲಿಲ್ಲ. ಇಬ್ಬರೂ ಪಾಯಿಂಟ್ ಹಂಚಿಕೊಂಡರು.
ಮೊದಲ ಬೋರ್ಡ್‌ನಲ್ಲಿ ಡಿ.ಗುಕೇಶ್ ಮತ್ತು ಉಜ್ಬೇಕಿಸ್ತಾನದ ಅಗ್ರ ಆಟಗಾರ ನಾಡಿರ್ಬೆಕ್ ಅಬ್ದುಸತ್ತಾರೊವ್ ನಡುವಣ ಪಂದ್ಯ ಸಮಬಲಗೊಂಡಿತು. ನಡೆಗಳ ಪುನರಾವರ್ತನೆ ಡ್ರಾಕ್ಕೆ ಹಾದಿಯಾಯಿತು.
ಎರಡನೇ ಬೋರ್ಡ್‌ನಲ್ಲಿ ಪ್ರಜ್ಞಾನಂದ ಮತ್ತು ಜಾವೊಕಿರ್ ಸಿಂಧರೋವ್ ಬೇಗನೇ ಡ್ರಾಕ್ಕೆ ಒಪ್ಪಿಕೊಂಡರು. ವಿದಿತ್ ಗುಜರಾತಿ ಮತ್ತು ಜಾಖೊಂಗಿರ್ ವಾಖಿಡೊವ್ ಸಹ ಸಾಹಸಗಳಿಗೆ ಹೋಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.