ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನತಿಗೆ ಮಾನ್ಯತೆ ನೀಡಲ್ಲ, ರಾಷ್ಟ್ರೀಯ ಕುಸ್ತಿ ಆಯೋಜಿಸುತ್ತೇವೆ: ಸಂಜಯ್ ಸಿಂಗ್

Published 1 ಜನವರಿ 2024, 16:12 IST
Last Updated 1 ಜನವರಿ 2024, 16:12 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ನೂತನ ಆಡಳಿತ ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತು ಮಾಡಿ, ತಾತ್ಕಾಲಿಕ ಸಮಿತಿ ನೇಮಕ ಮಾಡಿರುವುದಕ್ಕೆ ಮಾನ್ಯತೆ ನೀಡುವುದಿಲ್ಲ. ಶೀಘ್ರದಲ್ಲೇ ರಾಷ್ಟ್ರೀಯ ಸೀನಿಯರ್‌ ಕುಸ್ತಿ ಚಾಂಪಿಯನ್‌ಷಿಪ್ ಆಯೋಜಿಸಲಾಗುವುದು ಎಂದು ಚುನಾಯಿತ ಅಧ್ಯಕ್ಷ ಸಂಜಯ್‌ ಸಿಂಗ್ ಸೋಮವಾರ ಹೇಳಿದ್ದಾರೆ.  

ನಿಯಮ ಉಲ್ಲಂಘನೆ ಕಾರಣಕ್ಕೆ ಡಬ್ಲ್ಯುಎಫ್‌ಐ ನೂತನ ಆಡಳಿತ ಸಮಿತಿಯನ್ನು ಕ್ರೀಡಾ ಸಚಿವಾಲಯ ಡಿ.24ರಂದು ಅಮಾನತು ಮಾಡಿತ್ತು. ಡಬ್ಲ್ಯುಎಫ್‌ಐ ದೈನಂದಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತ ಒಲಿಂಪಿಕ್ಸ್ ಸಂಸ್ಥೆ ನೇಮಿಸಿರುವ ಮೂರು ಸದಸ್ಯರ ಅಡ್‌ಹಾಕ್ ಸಮಿತಿಯು ಜೈಪುರದಲ್ಲಿ ಫೆಬ್ರುವರಿ 2 ರಿಂದ 5ರವರೆಗೆ ರಾಷ್ಟ್ರೀಯ ಸೀನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ ನಡೆಸುವುದಾಗಿ ಘೋಷಿಸಿದೆ. 

‘ನಾವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದೇವೆ. ರಿಟರ್ನಿಂಗ್ ಆಫೀಸರ್ ಕಾಗದ ಪತ್ರಗಳಿಗೆ ಸಹಿ ಹಾಕಿದ್ದಾರೆ. ಅವರು ಅದನ್ನು ಹೇಗೆ ನಿರ್ಲಕ್ಷಿಸುತ್ತಾರೆ. ಈ ತಾತ್ಕಾಲಿಕ ಸಮಿತಿಗೆ ಮಾನ್ಯತೆ ನೀಡುವುದಿಲ್ಲ. ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್ ಆಯೋಜಿಸಲಾಗುವುದು’  ಎಂದು ಸಂಜಯ್ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

‘ಡಬ್ಲ್ಯುಎಫ್‌ಐ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ. ನಾವು ಕೆಲಸ ಮಾಡುತ್ತಿದ್ದೇವೆ. ರಾಜ್ಯ ಸಂಸ್ಥೆಗಳು  ತಂಡಗಳನ್ನು ಕಳುಹಿಸದಿದ್ದರೆ ಅವರು (ತಾತ್ಕಾಲಿಕ ಸಮಿತಿ) ಕುಸ್ತಿ ಚಾಂಪಿಯನ್‌ಷಿಪ್‌ ಅನ್ನು ಹೇಗೆ ಆಯೋಜಿಸುತ್ತಾರೆ. ಶೀಘ್ರದಲ್ಲೇ ನಾವು  ಆಯೋಜಿಸುತ್ತೇವೆ ಮತ್ತು ಕಾರ್ಯಕಾರಿ ಸಮಿತಿ ಸಭೆಯನ್ನು ಕರೆಯುತ್ತಿದ್ದೇವೆ. ಸಭೆಯ ನೋಟಿಸ್ ಅನ್ನು ಒಂದು ಅಥವಾ ಎರಡು ದಿನಗಳಲ್ಲಿ ಕಳುಹಿಸಲಾಗುವುದು. ತಾತ್ಕಾಲಿಕ ಸಮಿತಿಗೂ ಮೊದಲು ನಾವು ಚಾಂಪಿಯನ್‌ಷಿಪ್ ಆಯೋಜಿಸುತ್ತೇವೆ‘ ಎಂದು ಹೇಳಿದರು.

‘ನಾವು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಕ್ರೀಡಾ ಸಚಿವಾಲಯಕ್ಕೆ ವಿವರಣೆ ಕಳುಹಿಸಿದ್ದೇವೆ. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ.  ಒಂದು ಅಥವಾ ಎರಡು ದಿನ ಕಾಯುತ್ತೇವೆ. ಅವರು ನಮ್ಮೊಂದಿಗೆ ತೊಡಗಿಸಿಕೊಳ್ಳಲು ಬಯಸದಿದ್ದರೆ, ನಾವು ಸಹ ಆಸಕ್ತಿ ಹೊಂದಿಲ್ಲ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT