ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಎಆರ್‌: ಬಿಂಬ–ಪ್ರತಿಬಿಂಬ

Last Updated 24 ಜೂನ್ 2018, 20:16 IST
ಅಕ್ಷರ ಗಾತ್ರ

ಮಾಹಿತಿ ಯುಗದಲ್ಲಿ ಕ್ರೀಡೆಯ ಮೇಲೆ ತಂತ್ರಜ್ಞಾನ, ಗಾಢ ಪ್ರಭಾವ ಬೀರುತ್ತಿದೆ. ಆಟದ ಗುಣಮಟ್ಟ ಹೆಚ್ಚಿಸುವ ಮತ್ತು ಪಂದ್ಯದ ಅಧಿಕಾರಿಗಳು ನೀಡುವ ತೀರ್ಪುಗಳು ಪಾರದರ್ಶಕ ಮತ್ತು ನಿಖರವಾಗಿರುವಂತೆ ನೋಡಿಕೊಳ್ಳುವ ಉದ್ದೇಶದಿಂದ ಕ್ರೀಡಾ ಸಂಸ್ಥೆಗಳು ವಿನೂತನ ತಂತ್ರಜ್ಞಾನ ಮತ್ತು ನಿಯಮಗಳನ್ನು ಜಾರಿಗೆ ತರುತ್ತಿವೆ.

ಫೆಡರೇಷನ್‌ ಇಂಟರ್‌ನ್ಯಾಷನಲ್‌ ಡಿ ಫುಟ್‌ಬಾಲ್‌ ಅಸೋಸಿಯೇಷನ್‌ (ಫಿಫಾ), ರಷ್ಯಾದಲ್ಲಿ ನಡೆಯುತ್ತಿರುವ 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ವಿಡಿಯೊ ಅಸಿಸ್ಟೆಂಟ್‌ ರೆಫರಿ (ವಿಎಆರ್‌) ಪದ್ಧತಿ ಅಳವಡಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಇದರ ಕುರಿತು ಫುಟ್‌ಬಾಲ್‌ ವಲಯದಲ್ಲಿ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಕಾಲ್ಚೆಂಡಿನಾಟದ ಸೊಬಗು ಸವಿಯಲು ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರಿಗೆ ಈ ಪದ್ಧತಿಯಿಂದ ನಿರಾಸೆಯಾಗುತ್ತಿದೆ. ಪಂದ್ಯದ ರೋಚಕ ಕ್ಷಣಗಳಿಗೆ ಇದರಿಂದ ಧಕ್ಕೆಯುಂಟಾಗುತ್ತಿದೆ ಎಂದು ಹಲವರು ದೂರಿದ್ದಾರೆ.

‘ಅಂಗಳದ ರೆಫರಿ, ಒಮ್ಮೆ ವಿಎಆರ್‌ಗೆ ಮನವಿ ಮಾಡಿದರೆ ಕನಿಷ್ಠ ಮೂರು ನಿಮಿಷ ಆಟ ಸ್ಥಗಿತವಾಗುತ್ತದೆ. ರೆಫರಿ, ಮನವಿ ಮಾಡಿದ ಮೇಲೆ ವಿಡಿಯೊ ರೆಫರಿ, ಎಲ್ಲಾ ಆಯಾಮಗಳಿಂದಲೂ ವಿಡಿಯೊ ತುಣುಕುಗಳನ್ನು ಪರಿಶೀಲಿಸಿ ನಿರ್ಧಾರ ಪ್ರಕಟಿಸಲು ಕನಿಷ್ಠ ಎರಡು ನಿಮಿಷವಾದರೂ ಬೇಕು. ಇದರಿಂದ ಆಟದ ವೇಗ ಕುಂಠಿತವಾಗುತ್ತದೆ’ ಎಂದು ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ನ ಕೋಚ್‌ ಜೋಸ್‌ ಮೌರಿನ್ಹೊ ಕಿಡಿಕಾರಿದ್ದಾರೆ.

2017ರಲ್ಲಿ ನಡೆದಿದ್ದ ಕಾನ್ಫೆಡರೇಷನ್‌ ಕಪ್‌ನಲ್ಲಿ ಮೊದಲ ಬಾರಿಗೆ ವಿಎಆರ್‌ ಅಳವಡಿಸಲಾಗಿತ್ತು. ನಂತರ ಯೂರೋಪ್‌ನ ಸೀರಿ ‘ಎ’, ಬಂಡೆಸ್‌ ಲೀಗಾ ಮತ್ತು ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ಗಳಲ್ಲೂ ಇದು ಬಳಕೆಯಾಗಿತ್ತು. ಆಗಲೇ ಈ ಪದ್ಧತಿಯ ಬಗ್ಗೆ ಅಪಸ್ವರಗಳು ಎದ್ದಿದ್ದವು. ಇದರಲ್ಲಿ ಸಾಕಷ್ಟು ಲೋಪಗಳಿವೆ, ಹೀಗಾಗಿ ವಿಶ್ವಕಪ್‌ನಲ್ಲಿ ಅಳವಡಿಸುವುದು ಬೇಡ ಎಂದು ಹಲವರು ಹೇಳಿದ್ದರು. ಹೀಗಿದ್ದರೂ ಈ ಪದ್ಧತಿಯನ್ನು ವಿಶ್ವಕಪ್‌ ಟೂರ್ನಿಯಲ್ಲಿ ಜಾರಿಗೊಳಿಸಲು ಮಾರ್ಚ್‌ನಲ್ಲಿ ನಡೆದಿದ್ದ ಫಿಫಾ ಸಭೆಯಲ್ಲಿ ಒ‍ಪ್ಪಿಗೆ ನೀಡಲಾಗಿತ್ತು.

(ಡೆನ್ಮಾರ್ಕ್‌ ಮತ್ತು ಪೆರು ನಡುವಣ ವಿಶ್ವಕಪ್‌ ಪಂದ್ಯದ ವೇಳೆ ರೆಫರಿ ಬ್ಯಾಕರಿ ಗಸಾಮ ಅವರು ವಿಎಆರ್‌ಗೆ ಮನವಿ ಮಾಡಿದ್ದ ಸಂದರ್ಭ)

ಏನಿದು ವಿಎಆರ್‌?

ಇದು ಫುಟ್‌ಬಾಲ್‌ನಲ್ಲಿ ಜಾರಿಗೊಳಿಸಲಾಗಿರುವ ಮೊದಲ ವಿಡಿಯೊ ತಂತ್ರಜ್ಞಾನ. ಆಟಗಾರ ಗಳಿಸಿದ ಗೋಲು ‘ಆಫ್‌ ಸೈಡ್‌’ ಆಗಿರುವ ಬಗ್ಗೆ ಸಂದೇಹ ಬಂದರೆ, ಯಾವ ಆಟಗಾರನಿಗೆ ಹಳದಿ ಅಥವಾ ಕೆಂಪು ಕಾರ್ಡ್‌ ತೋರಿಸಬೇಕು ಎನ್ನುವುದರ ಕುರಿತು ನಿಖರತೆ ಇಲ್ಲದಿದ್ದಾಗ ಅಂಗಳದ ರೆಫರಿ, ವಿಎಆರ್‌ಗೆ ಮನವಿ ಮಾಡಬಹುದು. ಆಗ ವಿಡಿಯೊ ರೆಫರಿ, ವಿಡಿಯೊ ತುಣುಕುಗಳನ್ನು ಪರಿಶೀಲಿಸಿ ಏನು ಲೋಪವಾಗಿದೆ, ಯಾರಿಂದ ತಪ್ಪಾಗಿದೆ ಎನ್ನುವುದನ್ನು ಅಂಗಳದ ರೆಫರಿಗೆ ತಿಳಿಸುತ್ತಾರೆ.

ಕ್ರೀಡಾಂಗಣದಲ್ಲಿ ನಿರ್ಮಿಸಿರುವ ವಿಡಿಯೊ ಆಪರೇಷನ್‌ ಕೊಠಡಿಯಲ್ಲಿ (ವಿಒಆರ್‌) ಮುಖ್ಯ ರೆಫರಿಯೊಬ್ಬರು ಕಾರ್ಯನಿರ್ವಹಿಸುತ್ತಾರೆ. ಅವರಿಗೆ ಇಬ್ಬರು ಸಹಾಯಕರು ಇರುತ್ತಾರೆ. ಈ ತಂಡ ಕೊಠಡಿಯಲ್ಲಿ ಅಳವಡಿಸಿರುವ ಟಿ.ವಿ.ಗಳಲ್ಲಿ ಪಂದ್ಯದ ವಿಡಿಯೊ ತುಣುಕುಗಳನ್ನು ವೀಕ್ಷಿಸಿ ಅಂಗಳದ ರೆಫರಿಯ ಸಂದೇಹ ಪರಿಹರಿಸುತ್ತದೆ.

ಕ್ರಿಕೆಟ್‌ನಲ್ಲಿ ಯುಡಿಆರ್‌ಎಸ್‌ (ಅಂಪೈರ್‌ ಡಿಸಿಷನ್‌ ರಿವೀವ್‌ ಸಿಸ್ಟಂ) ಪದ್ಧತಿ ಜಾರಿಯಲ್ಲಿದೆ. ಇದರ ಅನ್ವಯ ಅಂಪೈರ್‌ ನೀಡಿದ ತೀರ್ಪನ್ನು ಮರು ಪರಿಶೀಲಿಸಲು ಒಂದು ತಂಡಕ್ಕೆ ಎರಡು ಅವಕಾಶಗಳು ನೀಡಲಾಗಿರುತ್ತದೆ. ತಂಡದ ನಾಯಕ ಅಥವಾ ಬ್ಯಾಟ್ಸ್‌ಮನ್‌ ಡಿಆರ್‌ಎಸ್‌ಗೆ ಮನವಿ ಮಾಡಬಹುದು. ಆದರೆ ಫುಟ್‌ಬಾಲ್‌ನಲ್ಲಿ ವಿಎಆರ್‌ಗೆ ಮನವಿ ಮಾಡುವ ಅಧಿಕಾರ ಅಂಗಳದ ರೆಫರಿಗಳಿಗೆ ಮಾತ್ರ ನೀಡಲಾಗಿದೆ. ಕ್ರಿಕೆಟ್‌ನಲ್ಲಿರುವಂತೆ ಫುಟ್‌ಬಾಲ್‌ನಲ್ಲಿಯೂ ಮೇಲ್ಮನವಿ ಸಲ್ಲಿಸಲು ನಾಯಕರಿಗೆ ಅಥವಾ ಕೋಚ್‌ಗಳಿಗೆ ಅವಕಾಶ ನೀಡಬೇಕು ಎಂದು ಹಲವು ಹಿರಿಯ ಆಟಗಾರರು ಒತ್ತಾಯಿಸಿದ್ದಾರೆ.

ಯಾವಾಗ ವಿಎಆರ್‌ಗೆ ಮನವಿ ಮಾಡಬಹುದು?

ಗೋಲು: ಆಟಗಾರ ಗಳಿಸಿದ ಗೋಲು ‘ಆಫ್‌ ಸೈಡ್‌’ ಆಗಿರುವ ಕುರಿತು ಸಂದೇಹ ವ್ಯಕ್ತವಾದಾಗ, ಚೆಂಡು ನಿರ್ದಿಷ್ಟ ಗೆರೆಯನ್ನು ದಾಟಿದ ಮೇಲೆ (ಲೈನ್‌ ಕ್ರಾಸ್‌) ಆಟಗಾರ ಅದನ್ನು ಗುರಿ ಸೇರಿಸಿರುವ ಬಗ್ಗೆ ಅನುಮಾನ ಮೂಡಿದರೆ, ಪಂದ್ಯದ ರೆಫರಿ ವಿಎಆರ್‌ ಮೂಲಕ ಅನುಮಾನ ಪರಿಹರಿಸಿಕೊಳ್ಳಬಹುದು.

ಪೆನಾಲ್ಟಿ ನೀಡುವ ಸಂದರ್ಭ: ಪೆನಾಲ್ಟಿ ಕಿಕ್‌ ನೀಡುವ ಅಥವಾ ನಿರಾಕರಿಸುವ ಬಗ್ಗೆ ಸ್ಪಷ್ಟತೆ ಇಲ್ಲದಿದ್ದಾಗಲೂ ವಿಎಆರ್‌ ಮೊರೆ ಹೋಗಬಹುದು.

ನೇರವಾಗಿ ಕೆಂಪು ಕಾರ್ಡ್‌ ತೋರಿಸುವಾಗ: ಫುಟ್‌ಬಾಲ್‌ನಲ್ಲಿ ಪಂದ್ಯದ ವೇಳೆ ಆಟಗಾರರ ನಡುವೆ ಘರ್ಷಣೆ ನಡೆಯುವುದು ಸಾಮಾನ್ಯ. ಎದುರಾಳಿ ಆಟಗಾರನನ್ನು ಗುದ್ದುವುದು, ತಳ್ಳುವುದು, ಮೇಲಕ್ಕೆ ಜಿಗಿದು ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವ ಸಂದರ್ಭಗಳಲ್ಲಿ ಆಟಗಾರ ಕೆಳಗೆ ಬಿದ್ದಾಗ ಉದ್ದೇಶಪೂರ್ವಕವಾಗಿಯೇ ಆತನ ಕೈ ಅಥವಾ ಕಾಲನ್ನು ತುಳಿದು ಗಾಯ ಗೊಳಿಸಿರುವ ಘಟನೆಗಳು ಸಾಕಷ್ಟು ನಡೆದಿವೆ. ಇಂತಹ ಸಂದರ್ಭಗಳಲ್ಲಿ ತಪ್ಪಿತಸ್ಥ ಯಾರು ಎಂಬುದನ್ನು ಪತ್ತೆ ಹಚ್ಚಲು ರೆಫರಿಗಳಿಗೆ ಸಾಧ್ಯವಾಗುವುದಿಲ್ಲ. ಆಗ ಅವರು, ವಿಡಿಯೊ ಅಸಿಸ್ಟೆಂಟ್‌ ರೆಫರಿಯ ನೆರವು ಪಡೆಯಬಹುದು.

(ಫ್ರಾನ್ಸ್‌ ಮತ್ತು ಆಸ್ಟ್ರೇಲಿಯಾ ಎದುರಿನ ಪಂದ್ಯದ ವೇಳೆ ಫ್ರಾನ್ಸ್‌ಗೆ ಪೆನಾಲ್ಟಿ ನೀಡುವ ಮುನ್ನ ರೆಫರಿ ಆ್ಯಂಡ್ರೆಸ್‌ ಕುನ್ಹಾ ವಿಡಿಯೊ ತುಣುಕನ್ನು ಪರಿಶೀಲಿಸುತ್ತಿರುವುದು ರಾಯಿಟರ್ಸ್‌ ಚಿತ್ರ)

ವಿಶ್ವಕಪ್‌ನಲ್ಲಿ ಪ್ರಯೋಜನವಾಗಿದೆಯೇ?

ಈ ಬಾರಿಯ ವಿಶ್ವಕಪ್‌ನಲ್ಲಿ ವಿಎಆರ್‌ ಮೊದಲು ವರವಾಗಿ ಪರಿಣಮಿಸಿದ್ದು ಸ್ವೀಡನ್‌ ತಂಡಕ್ಕೆ.

ಜೂನ್‌ 18 ರಂದು ನಡೆದಿದ್ದ ಹಣಾಹಣಿಯಲ್ಲಿ ಸ್ವೀಡನ್‌ 1–0 ಗೋಲಿನಿಂದ ದಕ್ಷಿಣ ಕೊರಿಯಾ ಎದುರು ಗೆದ್ದಿತ್ತು.

ದಕ್ಷಿಣ ಕೊರಿಯಾದ ಆಟಗಾರ ಕಿಮ್‌ ಮಿನ್‌ ವೊ ಅವರಿಂದ ಪೆನಾಲ್ಟಿ ಆವರಣದಲ್ಲಿ ‘ಫೌಲ್‌’ ಆಗಿರುವ ಬಗ್ಗೆ ಅನುಮಾನ ಮೂಡಿದ್ದರಿಂದ ಅಂಗಳದ ರೆಫರಿ ಜೋಯೆಲ್‌ ಅಗುಯಿಲರ್‌, ವಿಎಆರ್‌ಗೆ ಮನವಿ ಸಲ್ಲಿಸಿದ್ದರು. ವಿಡಿಯೊ ರೆಫರಿ, ಇದನ್ನು ಖಚಿತಪಡಿಸಿದ ನಂತರ ಅಗುಯಿಲರ್‌ ಸ್ವೀಡನ್‌ಗೆ ಪೆನಾಲ್ಟಿ ನೀಡಿದರು. ಈ ಅವಕಾಶದಲ್ಲಿ ಸ್ವೀಡನ್‌ನ ನಾಯಕ ಆ್ಯಂಡ್ರೆಸ್‌ ಗ್ರಾನ್‌ಕ್ವಿಸ್ಟ್‌ ಗೋಲು ದಾಖಲಿಸಿದ್ದರು.

ಇರಾನ್‌ ಮತ್ತು ಸ್ಪೇನ್‌ ಎದುರಿನ ಪಂದ್ಯದಲ್ಲಿ ಸ್ಪೇನ್‌ ತಂಡ ವಿಎಆರ್‌ನ ಪ್ರಯೋಜನ ಪಡೆದಿತ್ತು. ಇರಾನ್‌ ತಂಡದ ಆಟಗಾರ ಗಳಿಸಿದ ಗೋಲು ‘ಆಫ್ ಸೈಡ್‌’ ಆಗಿದ್ದರಿಂದ ಅಂಗಳದ ರೆಫರಿ ಅದನ್ನು ಮಾನ್ಯ ಮಾಡಿರಲಿಲ್ಲ. ಇದರಿಂದಾಗಿ ಡ್ರಾ ಮಾಡಿಕೊಳ್ಳುವ ಕನಸು ಕಂಡಿದ್ದ ಇರಾನ್‌ಗೆ ನಿರಾಸೆ ಎದುರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT