ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಿ ಲೀನಿಯರ್‌ ಧೂಮಕೇತು

ಅಕ್ಷರ ಗಾತ್ರ

‘ಲೀ ನಿಯರ್’ ಧೂಮಕೂತು – ಚಳಿಗಾಲದ ಅಪರೂಪದ ಅತಿಥಿ. ಅನಾದಿಕಾಲದಿಂದಲೂ ಬಾನಂಗಳದಲ್ಲಿ ಗೋಚರಿಸುತ್ತಿರುವ ಆಕಾಶಕಾಯಗಳು ಮನುಷ್ಯನಲ್ಲಿ ಕುತೂಹಲ ಕೆರಳಿಸಿವೆ. ನಭೋಮಂಡಲದಲ್ಲಿ ಕೋಟ್ಯಾನುಕೋಟಿ ಕಾಯಗಳಿದ್ದರೂ, ಮನುಷ್ಯನಿಗೆ ಅತ್ಯಂತ ಆಕರ್ಷಣೆ ಹೊಂದಿರುವ ಕಾಯವೆಂದರೆ ‘ಧೂಮಕೇತು’  ಇದರ ಸೊಬಗು, ವೈಯಾರ, ಚಲನ ವಲನ, ಕಾಂತಿ  ಹಾಗೂ ಗೋಚರ ವರ್ಣನಾತೀತ. ಪರಿಚಿತವಾಗಿರುವ ಧೂಮಕೇತುಗಳೆಂದರೆ ಹ್ಯಾಲೀ, ಎನ್ಕೆ, ವೆಸ್ಟ್, ಬೆನೆಟ್‌, ಡೊನಾಟಿ, ಕೊಹೊಟೆಕ್‌, ಹೇಲ್‌ – ಬೊಪ್‌, ಲುಲಿನ್‌, ಐಕಾಮಿ – ಸಾಕಿ, ವೈಲ್ಡ್, ಡಿ’ಅರೆಸ್ಟ, ಟಟಲ್‌ ಮುಂತಾದವುಗಳು.

ಬೆಳಗಿನ ಆಕಾಶದಲ್ಲಿ ಸುಮಾರು ಐದು ಗಂಟೆಯ ಸಮಯದಲ್ಲಿ ವೀಕ್ಷಿಸಬಹುದಾದ ಧೂಮಕೇತು ‘ಲೀನಿಯರ್‌’. ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ಭಾರಿ ಸುದ್ದಿ ಮಾಡಿದ ಧೂಮಕೇತು ‘ಐಸಾನ್‌’ ದುರದೃಷ್ಟವಶಾತ್‌ ನಾಶವಾಗಿಬಿಟ್ಟಿತು. ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಿನಲ್ಲಿ ಖಗೋಳಜ್ಞರಿಗೆ ಹಾಗೂ ಆಕಾಶ ವೀಕ್ಷಕರಿಗೆ ಮನೋರಂಜನೆ ನೀಡಿದ ಧೂಮಕೇತುವೆಂದರೆ ‘ಲವ್‌ಜಾಮ್‌’. ಈ ವರ್ಷದ ಮೊದಲ ಎರಡು ತಿಂಗಳಲ್ಲಿ ವೀಕ್ಷಿಸಬಹುದಾದ ವಿಲಕ್ಷಣ ಧೂಮಕೇತುವೆಂದರೆ ‘ಲೀನಿಯರ್‌’.

ಹಲವರಿಗೆ ಧೂಮಕೇತುವೆಂದರೆ ಒಂದು ರೀತಿಯ ಭಯ, ಆತಂಕ ಮೂಡುವುದು ಸಹಜ. ಆದರೆ ನಿಜವಾದ ಸಂಗತಿಯೆಂದರೆ, ಇದನ್ನು ವೀಕ್ಷಿಸಿ, ಆನಂದಿಸಿ ಇದಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುವುದು ಸಂತಸಕರ ವಿಷಯ. ಧೂಮಕೇತುಗಳು ಖಂಡಿತವಾಗಿಯೂ  ಅನಿಷ್ಟಕಾರಕಗಳಲ್ಲ. ಸುಮಾರು 400 ವರ್ಷಗಳಿಂದಲೂ ಈ ಕಾಯದ ಬಗ್ಗೆ ಸುಧೀರ್ಘ ಅನ್ವೇಷಣೆ ಮಾಡಿ, ಹಲವಾರು ಚಿದಂಬರ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಧೂಮಕೇತುಗಳ ಯುಕ್ತಿ, ಕೌಶಲ್ಯ, ಬಾನಂಗಳದಲ್ಲಿ ತೋರುವ ಕಾರ್ಯದಕ್ಷತೆ ಹಾಗೂ ಸೃಜನಶೀಲ ನಡೆವಳಿಕೆ ಶ್ಲಾಘನೀಯ.

ಈ ವರ್ಷ ದಕ್ಷಿಣ ಭಾರತೀಯರಿಗೆ ಈ ವರ್ಣಮಯ ಧೂಮಕೇತುವನ್ನು ನೋಡುವ ಸುವರ್ಣಾವಕಾಶ ದೊರಕಿದೆ. ಮೊದಲೇ ತಿಳಿಸಿದ ಹಾಗೆ ಈ ಧೂಮಕೇತುವನ್ನು ಮೇರು ಆಕಾಶದಲ್ಲಿ ಸುಮಾರು ‘5’ ಗಂಟೆಗೆ ದೂರದರ್ಶಕದ ಸಹಾಯದಿಂದ ವೀಕ್ಷಿಸಬಹುದು. ‘ಲೀನಿಯರ್‌’ ಧೂಮಕೇತುವಿನ ವಿಸ್ತರಣೆ ಲಿಂಕನ್‌ ಲ್ಯಾಬರೋಟರಿ ನಿಯರ್‌ ಅರ್ತ್‌ ಅಸ್ಟೆರ್ಡ್‌ ರಿಸರ್ಚ್‌ ಪ್ರೊಜೆಕ್ಟ್‌ .

ಈ ಧೂಮಕೇತುವನ್ನು 2012ನೇ ಇಸವಿಯಲ್ಲಿ ಲಿಂಕನ್‌ ಪ್ರಯೋಗಶಾಲೆ ಕಂಡು ಹಿಡಿಯಿತು. ಖಗೋಳಿಯವಾಗಿ, ಇದರ ನಿಜನಾಮಧೇಯ ಸಿ/2012x1. ಧೂಮಕೇತು ವೀಕ್ಷಣೆ ಮಾಡಬೇಕಾದರೆ ಹಲವು ಅಂಶಗಳಿಂದ ಕಾಂತಿಮಾನತೆ, ಅಪರಮಿಯ ಅಂತರ, ಪುರರವಿಯ ಅಂತರ, ಕ್ರಾಂತಿವೃತ್ತದ ಕೋನ, ವಿಕೇಂದ್ರಿಯತೆ, ಕಕ್ಷಾ ಅವಧಿ ಹಾಗೂ ಭೂಮಿಯಿಂದ ಅಂತರ ವಿಷಯಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಯಾವುದೇ ಧೂಮಕೇತುವನ್ನು ವೀಕ್ಷಿಸಬೇಕಾದರೆ ಇದರ ಕಾಂತಿಮಾನ ತಿಳಿಯಬೇಕು. ಕಾಂತಿಮಾನ ಸಂಖ್ಯೆ ಕಡಿಮೆಯಿದ್ದಷ್ಟೂ, ಪ್ರಕಾಶಿಸುತ್ತದೆ. ಲೀನಿಯರ್‌ ಧೂಮಕೇತುವಿನ ಕಾಂತಿಮಾನ ಫೆಬ್ರುವರಿ ತಿಂಗಳಿನಲ್ಲಿ ಒಂದಾಗುವ ಸಾಧ್ಯತೆ ಹೆಚ್ಚಿದೆ. ಹೆಚ್ಚು ಪ್ರಕಾಶಮಾನವಾಗುತ್ತದೆ. ಈ ಧೂಮಕೇತು ಫೆಬ್ರುವರಿ 21 ರಂದು ಸೂರ್ಯನನ್ನು ಸಮೀಪಿಸಿ, ಬರಿ ಕಣ್ಣಿಗೆ ಗೋಚರಿಸಬಹುದು. ಈ ಕ್ರಿಯೆಗೆ ‘ಪುರರವಿ’ ಅಥವಾ ಪೆರಿಹೀಲಿಯನ್‌ ಎನ್ನುತ್ತಾರೆ.

ಫೆಬ್ರುವರಿಯಲ್ಲಿ ಈ ಧೂಮಕೇತು ಹರ್ಕೂಲಸ್‌ ರಾಶಿಯಿಂದ ‘ಒಪಿಯೋಕಸ್‌’ ರಾಶಿಗೆ ಸಾಗುತ್ತದೆ. ಈ ಧೂಮಕೇತುವಿನ ವೀಕ್ಷಣೆಗೆ ಪ್ರಶಸ್ತವಾದ ಸಮಯವೆಂದರೆ ಬೆಳಗಿನ ಜಾವ ಐದು ಗಂಟೆ. ಹಾಗಾದರೆ ತಡಮಾಡದೆ ದೂರದರ್ಶಕ  ನಾಕ್ಷತ್ರಿಕ ದುರ್ಬೀನಿನ ಸಹಾಯದಿಂದ ವೀಕ್ಷಿಸಿ, ಆನಂದಿಸಿ, ನಗರದ ಬೆಳಕಿನ ಮಾಲಿನ್ಯದಿಂದ ಬಿಡುಗಡೆ ಹೊಂದಿ. ದೂರದ ಗುಡ್ಡ – ಬೆಟ್ಟದ ಮೇಲಿನಿಂದ ಈ ಧೂಮಕೇತುವಿನ ಭಾವಚಿತ್ರವನ್ನು ಸುಲಭವಾಗಿ ಸೆರೆಹಿಡಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT