ಕೆಲ ದಿನಗಳ ಹಿಂದೆ ನಾನೊಂದು ಮದುವೆ ಮನೆಗೆ ಹೋಗಿದ್ದೆ. ನನ್ನ ಬಗ್ಗೆ ತಿಳಿದುಕೊಂಡಿದ್ದ ಇಬ್ಬರು ಹುಡುಗಿಯರು ಬಳಿ ಬಂದು ಮಾತನಾಡಿಸಿದರು. ಅವರು ದ್ವಿತೀಯ ಪಿಯುಸಿ ಮುಗಿಸಿ ಸಿಇಟಿ ತಯಾರಿಯಲ್ಲಿದ್ದರು. ಅವರಲ್ಲಿ ಹತ್ತು ಹಲವು ಸಂದೇಹಗಳಿದ್ದವು.

ಪಿಸಿಆರ್ ಎಂದರೇನು? ಡಿಎನ್ಎ, ಫಿಂಗರ ಪ್ರಿಂಟಿಂಗ್ ಎಂದರೇನು? ಇತ್ಯಾದಿಗಳ ಬಗ್ಗೆ ಕುತೂಹಲ ಇದ್ದರೂ ಅರಿವು ಕಡಿಮೆ ಇತ್ತು. ಸಾಕಷ್ಟು ಬುದ್ಧಿವಂತರಂತೆ ಕಂಡುಬಂದರೂ ಅವರು ವಿಜ್ಞಾನದ ಕೆಲವು ಮೂಲಭೂತ ವಿಷಯಗಳನ್ನು ತಪ್ಪಾಗಿ ಗ್ರಹಿಸಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂತು.

ಇದಕ್ಕೆ ಕಾರಣ ಏನಿರಬಹುದು? ಬೋಧನೆಯಲ್ಲಿ ಉಂಟಾದ ಕೊರತೆಯೇ ಅಥವಾ ಅವರ ಗ್ರಹಿಕಾ ಶಕ್ತಿಯ ಕೊರತೆಯೇ ಎಂದು ಚಿಂತಿಸತೊಡಗಿದೆ. ಆಗ ಇತ್ತೀಚೆಗೆ ಕೆಲ ಸಮಸ್ಯೆಗಳಿಗೆ ಪರಿಹಾರ ಬಯಸಿ ಬಂದ ಮತ್ತೊಬ್ಬ ವಿದ್ಯಾರ್ಥಿ ನೆನಪಾದ. ಅವನು ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರೂ ಅಂಡಾಶಯ ಬಿಡುಗಡೆಯನ್ನೇ ಋತುಸ್ರಾವವೆಂದು ಅಪಾರ್ಥ ಮಾಡಿಕೊಂಡಿದ್ದ.

ಇನ್ನೊಬ್ಬ ಯುವ ಶಿಕ್ಷಕರು ಜೀವಕೋಶ ಚಕ್ರದ (cell cycles) ವಿವಿಧ ಹಂತಗಳಲ್ಲಿ ವರ್ಣತಂತುಗಳ ಸಂಖ್ಯೆಯ ಮಾರ್ಪಾಡನ್ನು (ಕ್ರೊಮಾಟಿಡ್) ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ. ಇವರ ಮೂಲಭೂತ ಗ್ರಹಿಕೆ ತಪ್ಪಾಗಿವೆ ಅಥವಾ ಅಧ್ಯಯನದ ಬುನಾದಿ ಸದೃಢವಾಗಿಲ್ಲ ಎಂಬ ಭಾವನೆ ನನಗೆ ಬಂತು.

ಹೀಗೆಲ್ಲಾ ಯೋಚನೆ ಮಾಡುತ್ತಿರುವಾಗಲೇ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಆಯೋಜಿಸಿದ ವಿವಿ ಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ವಿದ್ಯಾರ್ಥಿಗಳ ವಿಜ್ಞಾನ ಜ್ಞಾನದ ಪೂರ್ಣ ಚಿತ್ರಣವನ್ನು ಕೊಟ್ಟಿತ್ತು. ಮೊದಲ ಸ್ಥಾನ ಪಡೆದ ತಂಡ ಗಳಿಸಿದ ಗರಿಷ್ಠ ಅಂಕ ಶೇ 30 ಮಾತ್ರ.

ಮೇಲಿನ ಎಲ್ಲ ಪ್ರಸಂಗಗಳು ನನ್ನಂಥವರಿಗೆ ಮಾತ್ರವಲ್ಲದೆ ಪ್ರಪಂಚದ ಶ್ರೇಷ್ಠ ಶಿಕ್ಷಣ ತಜ್ಞರು ಹಾಗೂ ವಿಜ್ಞಾನಿಗಳನ್ನೂ ಕಾಡುವ ಸಮಸ್ಯೆಯಾಗಿವೆ. ಈ ವರ್ಷ ಜನವರಿಯಲ್ಲಿ ಪುಣೆಯಲ್ಲಿ ಕೇಂದ್ರ ಸರ್ಕಾರದ ಆಶ್ರಯದಲ್ಲಿ ಜೀವಶಾಸ್ತ್ರ ಉಪನ್ಯಾಸಕರಿಗಾಗಿ ರಾಷ್ಟ್ರಮಟ್ಟದ ಕಾರ್ಯಾಗಾರವೊಂದು ನಡೆಯಿತು.

ಇದರಲ್ಲಿ ಭಾಗವಹಿಸಲು ದೇಶದಾದ್ಯಂತ ಆಯ್ಕೆಯಾಗಿದ್ದ 50 ಉಪನ್ಯಾಸಕರಲ್ಲಿ ನಾನೂ ಒಬ್ಬಳು. ಅಲ್ಲಿ ಚರ್ಚೆಯಾದ ವಿಷಯಗಳು ನನ್ನ ಚಿಂತನೆಯ ಗತಿಯನ್ನೇ ಬದಲಾಯಿಸಿದವು.

ನಮ್ಮ ದೇಶದ ಎಲ್ಲಾ ಶಿಕ್ಷಕರು (ವಿಶೇಷವಾಗಿ ವಿಜ್ಞಾನ ಬೋಧಕರು) ತಮ್ಮ ಬೋಧನೆಯಲ್ಲಿ ಮಾಡಿಕೊಳ್ಳಬೇಕಾದ ಮಾರ್ಪಾಟು ಚರ್ಚೆಯ ಮೂಲ ವಿಷಯವಾಗಿತ್ತು.

ಅನಿಲ್ ಚೆಲ್ಲಾ ಎಂಬ ಯುವ ವಿಜ್ಞಾನಿ ಹಾಗೂ ಅಸೀಮ್ ಆಹುತಿ ಎಂಬ ಯುವ ಉಪನ್ಯಾಸಕ ತಮ್ಮಳಗಿನ ಮೂಲಭೂತ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಲು ನಡೆಸಿದ ಪ್ರಯತ್ನ ನಮ್ಮನ್ನೆಲ್ಲ ಗಂಭೀರ ಆಲೋಚನೆಗೆ ಹಚ್ಚಿತ್ತು.

ಈ ಕಾರ್ಯಾಗಾರ ಪದವಿ ಶಿಕ್ಷಣ ಬೋಧನ ಕ್ರಮದ ಆಮೂಲಾಗ್ರ ಬದಲಾವಣೆ ನಿಟ್ಟಿನಲ್ಲಿಟ್ಟ ಮೊದಲ ಹೆಜ್ಜೆ ಎಂದೇ ಹೇಳಬಹುದು. ಇದರಲ್ಲಿ ಅಮೆರಿಕದ ಶಿಕ್ಷಣ ತಜ್ಞರಾದ ಡಾ. ವಿಲಿಯಂ ವುಡ್, ಡಾ. ರಾಬಿನ್ ರೈಟ್, ಟೆರ್ರಿ ಬಾಲ್ಸರ್.

ಡಾ. ಲಲಿತಾ ರಾಮಕೃಷ್ಣನ್, ಡಾ. ರೊನಾಲ್ಡ್ ವಾಲೇ, ನೊಬೆಲ್ ಪುರಸ್ಕೃತ ವಿಜ್ಞಾನಿಗಳಾದ ಡಾ. ವೆಂಕಿ ರಾಮಕೃಷ್ಣನ್ ಮತ್ತು ಡಾ. ಮೈಕೆಲ್ ಬಿಷಪ್, ನಮ್ಮ ದೇಶದ ಶಿಕ್ಷಣ ತಜ್ಞರಾದ ಡಾ. ಕೆ.ಪಿ. ಮೋಹನನ್, ಎಲ್. ಶಶಿಧರ್, ಮಿಲಿಂದ ವಾಟ್ವೆ ಮುಂತಾದವರು ಭಾಗವಹಿಸಿದ್ದರು. ಅನೇಕ ಮಾದರಿಗಳು ಮತ್ತು ಆಟಗಳನ್ನು ಬಳಸಿಕೊಂಡು ಸುಲಭವಾಗಿ ವಿಜ್ಞಾನ ಕಲಿಸುವ ಪ್ರಾತ್ಯಕ್ಷಿಕೆ ನಡೆಸಿದರು. ಅಲ್ಲಿ ಮೂಡಿಬಂದ ಅಭಿಪ್ರಾಯಗಳ ಸಾರ ಇಷ್ಟು.

ಕಲಿಕಾ ಸಮಸ್ಯೆ
ಇಂದಿನ ವಿದ್ಯಾರ್ಥಿಗಳು ಮೊಬೈಲ್, ಅಂತರ್ಜಾಲ ಮತ್ತು ಟಿವಿ ಮಾಯಾಜಾಲಗಳಲ್ಲಿ ಬಂದಿಯಾಗಿ ಸ್ವತಂತ್ರವಾಗಿ ಯೋಚಿಸುವ ಶಕ್ತಿ, ನೈಜ ಕ್ರಿಯಾಶೀಲತೆ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಪೋಷಕ ಹಾಗೂ ಶಿಕ್ಷಕ ವರ್ಗದ ಅಂಕ ಪಿಪಾಸುತನಕ್ಕೆ ಬಲಿಯಾಗಿ, `ಶಿಕ್ಷಣವೆಂದರೆ ಒಂದಷ್ಟು ಓದಿ ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಅಂಕ ಪಡೆಯುವುದು~ ಎಂದು ತಿಳಿದಿದ್ದಾರೆ.

ವಿಜ್ಞಾನ ವಿಷಯ ಮತ್ತು ಸಮಸ್ಯೆಗಳ ಬಗ್ಗೆ ಆಳವಾಗಿ ಚಿಂತಿಸುವುದು, ಪ್ರಶ್ನಿಸುವುದು ಮತ್ತು ಅವುಗಳ ಬಗ್ಗೆ ಕುತೂಹಲ ಈಗ ವಿರಳವಾಗಿದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಬೇಕಾಗುವಷ್ಟು ಕಲಿತು ಆ ಮೇಲೆ ಮರೆತರೂ ನಡೆಯುತ್ತದೆ ಎಂಬ ಭಾವನೆ ಬೆಳೆದಿದೆ. ಹೀಗಿದ್ದಾಗ ಇಂದಿನ ವಿದ್ಯಾರ್ಥಿಗಳ ಅಧ್ಯಯನದ ಮೂಲ ಉದ್ದೇಶವೇನು? ವಿಜ್ಞಾನ ವಿಷಯಗಳನ್ನು ಅವರೇಕೆ ಕಲಿಯುತ್ತಾರೆ?

ವಿಜ್ಞಾನ ಕಲಿಕೆಯು ವಿಸ್ಮಯ, ಕುತೂಹಲ ಉಂಟು ಮಾಡುವ ಬದಲು ಬರೀ ವೃತ್ತಿಪರ ಶಿಕ್ಷಣ ಅಥವಾ ನೌಕರಿ ಗಳಿಸುವ ಮಾರ್ಗವಾಗಿ ಸೀಮಿತ ಗೊಂಡು ವೈಜ್ಞಾನಿಕ ಮನೋಧರ್ಮ ಬೆಳೆಸುವಲ್ಲಿ ವಿಫಲವಾಗಿದೆ. ಅಧ್ಯಾಪಕರ ನೋಟ್ಸ್ ಅಥವಾ ಗೈಡ್ಸ್ ಉರುಹೊಡೆದು ಪರೀಕ್ಷೆಗಳಲ್ಲಿ ಭಟ್ಟಿಯಿಳಿಸಿ ಅಂಕ ಗಳಿಸಿದ ನಂತರ ತಾವು ಓದಿದ ವಿಷಯ ಏನು ಎಂಬುದನ್ನು ಮರೆತು ಹಾಯಾಗಿರುವ ವಿಜ್ಞಾನ ವಿದ್ಯಾರ್ಥಿಗಳೇ ಈಗ ಹೆಚ್ಚಾಗಿದ್ದಾರೆ.

ಆಸಕ್ತಿ ಕೆರಳಿಸದ, ಚಿಂತನೆಗೆ ಪ್ರಚೋದಿಸದ ವಿಷಯಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುವುದಿಲ್ಲ. ಮೆದುಳಿನ ಜ್ಞಾಪಕ ಶಕ್ತಿ ಕುರಿತು ಅಧ್ಯಯನ ಮಾಡಿದ ವಿಜ್ಞಾನಿಗಳು ಹಾಗೂ ಶಿಕ್ಷಣ ತಜ್ಞರ ಪ್ರಕಾರ `ಮೆದುಳಿನ ನರಮಂಡಲವನ್ನು ಪ್ರಚೋದಿಸುವ ಕಲಿಕಾ ಕ್ರಮಗಳು ದೀರ್ಘಕಾಲದ ಜ್ಞಾಪಕ ಶಕ್ತಿ ಹೆಚ್ಚಿಸುತ್ತವೆ~.

ಎಲ್ಲ ತಪ್ಪನ್ನು ವಿದ್ಯಾರ್ಥಿಗಳ ಮೇಲೆ ಹೊರಿಸುವ ಅನೇಕ ಶಿಕ್ಷಕ ಮಿತ್ರರನ್ನು ನಾನು ಕಂಡಿದ್ದೇನೆ. ಕೆಲ ವಿದ್ಯಾರ್ಥಿಗಳು ನಮ್ಮ ಪಾಠವನ್ನು ಎಂದಿಗೂ ಮರೆಯುವುದಿಲ್ಲ.
ಇನ್ನು ಕೆಲವರು ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಹೊರಬಿಡುತ್ತಾರೆ. ಇದಕ್ಕೇನು ಕಾರಣ? ಶಿಕ್ಷಕರಾದ ನಮ್ಮ ಬೋಧನೆಯ ಗುರಿಯೇನು?

ಈಗಂತೂ ವಿದ್ಯಾರ್ಥಿಗಳು ಅಧಿಕ ಅಂಕ ಗಳಿಸುವ ಕಡೆ ನಮ್ಮೆಲ್ಲಾ ಶ್ರಮ ಹಾಗೂ ಚಿಂತನೆಗಳು ಕೇಂದ್ರೀತವಾಗಿವೆ. ವಿಜ್ಞಾನ ಶಿಕ್ಷಕರಾದ ನಾವೀಗ ಎಚ್ಚೆತ್ತುಕೊಂಡು ನಮ್ಮ ಬೋಧನೆಯ ಗುರಿ ಮತ್ತು ಸಾರ್ಥಕತೆಯೇನು ಎಂದು ಪ್ರಶ್ನಿಸಿಕೊಳ್ಳಬೇಕಿದೆ.

ವಿದ್ಯಾರ್ಥಿಗಳನ್ನು ವಿಜ್ಞಾನಿಗಳಾಗಿ ರೂಪಿಸುವಲ್ಲಿ ನಮ್ಮ ಪಾತ್ರವಿದೆ ಎಂದು ಅರಿಯಬೇಕಿದೆ. ಈವರೆಗೆ ಸಾಕಷ್ಟು ತಂತ್ರಜ್ಞರನ್ನು ರೂಪಿಸಿದ್ದೇವೆ. ಇನ್ನಾದರೂ ತಂತ್ರಜ್ಞಾನದ ಬೆಳವಣಿಗೆಗೆ ನೆರವಾಗುವ ಮೂಲಭೂತ ವಿಜ್ಞಾನ ಬೆಳೆಸುವತ್ತ ಗಮನ ಹರಿಸಬೇಕಿದೆ.

ಥಾಮ್ಸನ್ ರಾಯ್ಟರ್ ವರದಿ ಪ್ರಕಾರ, ಜನಸಂಖ್ಯೆ ಮತ್ತು ವಿಸ್ತಾರದಲ್ಲಿ ಚಿಕ್ಕದಾದ ಜಪಾನ್ ದೇಶ ವಿಜ್ಞಾನ ಸಂಶೋಧನೆಯಲ್ಲಿ ಭಾರತಕ್ಕಿಂತ ಬಹಳ ಮುಂದಿದೆ. ವಿಶ್ವದ ವಿಜ್ಞಾನ ಸಂಶೋಧನ ಪ್ರಕಾಶನಕ್ಕೆ ಭಾರತ, ಚೀನ ಮತ್ತು ಜಪಾನ್ ದೇಶಗಳ ಶೇಕಡವಾರು ಕೊಡುಗೆಯನ್ನು ಈ ಕೆಳಗಿನ ಪಟ್ಟಿಯಲ್ಲಿ ಗಮನಿಸಬಹುದಾಗಿದೆ.

ಬದಲಾವಣೆ ಕಾಲ ಬಂದಿದೆ
ಪೇಸ್ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಅಂತರ್ಜಾಲ ವ್ಯಸನಿಗಳಾದ, ಕಂಪ್ಯೂಟರ್ ಮತ್ತು ವಿಡಿಯೊ ಆಟಗಳನ್ನಾಡುವ ನಮ್ಮ ಯುವಜನಾಂಗದ ಕಲಿಕಾ ಏಕಾಗ್ರತೆ ಕುಸಿದಿದೆ.

ಹೀಗಾಗಿ ಅವರನ್ನು ತಲುಪಲು ನಾವು ಈ ವರೆಗಿನ ನಿರಾಸಕ್ತ ಕಲಿಕಾ ವಿಧಾನವನ್ನು ಕೈಬಿಟ್ಟು, ಹೊಸ ವಿಧಾನಗಳನ್ನು ಅಳವಡಿಸಿಕೊಂಡು ವಿಜ್ಞಾನದ ಕಡೆಗೆ ಸೆಳೆಯಬೇಕಿದೆ. ಅದಕ್ಕಾಗಿ ಈಗ ನಮ್ಮ ಶಿಕ್ಷಣ ಕ್ರಮವನ್ನು ಆಮೂಲಾಗ್ರ ಬದಲಾವಣೆ ಮಾಡಲೇಬೇಕಾದ ತುರ್ತು ಅಗತ್ಯವಿದೆ.

ಪ್ರಸ್ತುತ ರೂಢಿಯಲ್ಲಿರುವ ಸಾಂಪ್ರದಾಯಿಕ ಶಿಕ್ಷಣ ಕಲಿಕಾ ವಿಧಾನ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಶಿಕ್ಷಣ ತಜ್ಞರಾದ ವಿಗ್ಗಿನ್ಸ್ ಮತ್ತು ಮೆಕ್ ಟೀಗೆ ಅವರ ಅಸಾಂಪ್ರದಾಯಿಕ ವಿಧಾನವನ್ನು ಪ್ರಯೋಗಿಸಬಹುದು.

ಅವರ ಪ್ರಕಾರ ಮೊದಲ ಹಂತದಲ್ಲೆೀ ಶಿಕ್ಷಣದ ಗುರಿಯನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ಪಠ್ಯಕ್ರಮ, ಕಲಿಕಾ ಯೋಜನೆ ಮತ್ತು ಚಟುವಟಿಕೆ ರೂಪಿಸಬೇಕು. ನಮ್ಮ ಈಗಿನ ಪರೀಕ್ಷಾ ಕೇಂದ್ರಿತ ಕಲಿಕೆಯಿಂದ ಕೂಡಲೆ ಹೊರ ಬಂದು ವಿದ್ಯಾರ್ಥಿ ಕೇಂದ್ರಿತ ಕಲಿಕಾ ವಿಧಾನಗಳಿಗೆ ಒತ್ತಾಸೆ ಕೊಡಬೇಕು.

ಇತ್ತೀಚಿನ ಶಿಕ್ಷಣ ಸಂಬಂಧಿ ಸಂಶೋಧನೆಯ ಅಂಕಿ ಅಂಶಗಳ ಪ್ರಕಾರ ವಿವಿ ಮಟ್ಟದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೀಗಿದೆ.

ಒಂದು ವಿಷಯದ ಬಗ್ಗೆ ಉಪನ್ಯಾಸ ಕೇಳುವುದರಿಂದ ಅದರ ಬಗ್ಗೆ ಶೇ 5ರಷ್ಟು ಜ್ಞಾನ ಮಾತ್ರ ಹೆಚ್ಚಬಹುದು. ಅದೇ ವಿಷಯವನ್ನು ಓದುವುದರಿಂದ ಶೇ 10, ದೃಶ್ಯ- ಶ್ರವಣ ಮಾಧ್ಯಮ ಬಳಸಿದರೆ ಶೇ 20, ಪ್ರಾತ್ಯಕ್ಷಿಕೆಯಿಂದ ಶೇ 30, ವಿವಿಧ ರೀತಿಯ ಚರ್ಚಾ ವಿಧಾನಗಳಿಂದ ಶೇ 75 ಹಾಗೂ ತಾವು ಮನನ ಮಾಡಿಕೊಂಡ ವಿಷಯವನ್ನು ಇನ್ನೊಬ್ಬರಿಗೆ ಬೋಧನೆ ಮಾಡಿದರೆ ಶೇ 90 ಜ್ಞಾನ ವೃದ್ಧಿಸುತ್ತದೆ.

ಇದರಿಂದ ನಮ್ಮ ಬೋಧನಾ ಕ್ರಮಗಳಲ್ಲಿ ಯಾವ ರೀತಿಯ ಬದಲಾವಣೆ ತರಬೇಕೆಂಬುದು ಸ್ಪಷ್ಟವಾಗುತ್ತದೆ. ನಾವೀಗ ಹಲವಾರು ವರ್ಷಗಳಿಂದ ಮಾಡುತ್ತಿರುವ ಸಾಂಪ್ರದಾಯಿಕ ಪದ್ಧತಿ ಕಡಿಮೆ ಮಾಡಿ ವಿದ್ಯಾರ್ಥಿಗಳ ವಿಚಾರಗೋಷ್ಠಿ, ಪವರ್ ಪಾಯಿಂಟ್, ರಸಪ್ರಶ್ನೆ, ಸಮೂಹ ಚರ್ಚೆ ಮುಂತಾದವುಗಳಿಗೆ ಮಹತ್ವ ಕೊಡಬೇಕಾಗಿದೆ.

ಇವು ವಿದ್ಯಾರ್ಥಿಗಳ ಸ್ವಯಂ ಮೌಲೀಕರಣ ವಿಧಾನಗಳೂ ಆಗಿರುತ್ತವೆ. ಇದರಿಂದ ಅವರ ವಿಷಯ ಗ್ರಹಿಕಾ ಸಾಮರ್ಥ್ಯ ಹೆಚ್ಚುತ್ತದೆ, ಕಲಿತದ್ದು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ.

ವಿಷಯ ಆಧಾರಿತ ಸಣ್ಣ ಪ್ರಮಾಣದ ಸಂಶೋಧನೆಗಳು ಮತ್ತು ಪ್ರಾಜೆಕ್ಟ್ಗಳಿಗೆ ಅವಕಾಶ ಕಲ್ಪಿಸುವ ಬೋಧನಾ ಪದ್ಧತಿಯಲ್ಲಿ ಕಲಿತದ್ದು ದೀರ್ಘಕಾಲ ಮೆದುಳಿನಲ್ಲಿ ದಾಖಲಾಗುತ್ತದೆ.

ಸಂಶೋಧನಾ ಆಧಾರಿತ ಕಲಿಕಾ ಕ್ರಮ ಉತ್ತಮ ಫಲಿತಾಂಶ ತರಬಲ್ಲದ್ದು ಎಂದು ಗೊತ್ತಾದ ಬಳಿಕ ಸರ್ಕಾರ ಶಾಲಾ ಕಾಲೇಜು ಮಟ್ಟದಲ್ಲಿ ಸಂಶೋಧನೆಗೆ ಪ್ರೋತ್ಸಾಹ ನೀಡುತ್ತಿದೆ. ಅದಕ್ಕಾಗಿ ಅಪಾರ ಹಣ ತೆಗೆದಿಟ್ಟಿದೆ. ಆದರೆ ಅದು ಸದ್ಬಳಕೆಯಾಗುತ್ತಿಲ್ಲ.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಶಿಕ್ಷಕರ ಜವಾಬ್ದಾರಿ ಗುರುತರವಾಗಿದೆ. ಮುಂದಿನ ಜನಾಂಗಕ್ಕೆ ವಿಜ್ಞಾನದ ಸ್ಪಷ್ಟ ಪರಿಕಲ್ಪನೆ ಮೂಡಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.

ನಮ್ಮ ಪಠ್ಯ ಮತ್ತು ಪರೀಕ್ಷಾ ಕ್ರಮಗಳು

ನಮ್ಮ ರಾಜ್ಯದ ಪ್ರೌಢ ಮತ್ತು ಪದವಿ ಪಠ್ಯಕ್ರಮಗಳು ತುಂಬಾ ನೀರಸವಾಗಿದ್ದು ವಿದ್ಯಾರ್ಥಿಗಳ ಕ್ರಿಯಾಶೀಲತೆ ಉತ್ತೇಜಿಸುವ ಚಟುವಟಿಕೆಗಳ ಕೊರತೆಯಿದೆ. ಕಲಿಸುವ ಶಿಕ್ಷಕರು ಕೂಡ ಹೊಸತನ ರೂಢಿಸಿಕೊಳ್ಳದೇ ಯಾಂತ್ರಿಕವಾಗಿ ಬೋಧಿಸುತ್ತಾ ವಿದ್ಯಾರ್ಥಿಗಳ ಸಹಜ ಕುತೂಹಲ ಸ್ವಭಾವ ಹತ್ತಿಕ್ಕುತ್ತಾರೆ. ವರ್ಷವಿಡೀ ಪರೀಕ್ಷಾ ತಾಲೀಮು ಕೊಟ್ಟು ವಿದ್ಯಾರ್ಥಿಗಳನ್ನು ಹೆಚ್ಚು ಅಂಕ ಗಳಿಸುವ ರೇಸ್ ಕುದುರೆಯಾಗಿ ಮಾಡುತ್ತಿದ್ದಾರೆ.

ಹೋಗಲಿ, ಈ ಕುದುರೆಗಳಿಗೂ `ನಾವೇಕೆ ವೇಗವಾಗಿ ಓಡುತ್ತಿದ್ದೇವೆ? ನಮ್ಮ ನಿಜವಾದ ಗುರಿಯೇನು~ ಎಂಬುದು ಗೊತ್ತಿಲ್ಲ. ಅದಕ್ಕೆ ತಕ್ಕಂತೆ ನಮ್ಮ ಪರೀಕ್ಷಾ ವ್ಯವಸ್ಥೆ, ವರ್ಷದ ಸುಮಾರು 6 ತಿಂಗಳು ಪರೀಕ್ಷಾ ಚಟುವಟಿಕೆಗಳನ್ನು ನಡೆಸುತ್ತ ವಿದ್ಯಾರ್ಥಿಗಳ ಕಲಿಕಾ ಸಮಯವನ್ನು ಮೊಟಕುಗೊಳಿಸಿದೆ. ಇನ್ನು ನಮ್ಮ ವಿವಿ ಪ್ರಶ್ನೆಪತ್ರಿಕೆಗಳ ಮಟ್ಟ ಶಿಕ್ಷಣ ತಜ್ಞ ಬ್ಲೂಮ್ನ ವರ್ಗೀಕರಣದ ಕೆಳಮಟ್ಟದ ಒಂದು ಅಥವಾ ಎರಡನೇ ಹಂತಗಳನ್ನು ಮೀರಿ ಹೋಗುವುದಿಲ್ಲ.

(ಲೇಖಕಿ ಶಿವಮೊಗ್ಗದ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.