ಶುಕ್ರವಾರ, ಸೆಪ್ಟೆಂಬರ್ 24, 2021
21 °C

‘ಇನ್ನು ಮುಂದೆ ಆಗಸ್ಟ್‌ 7 ರಾಷ್ಟ್ರೀಯ ಜಾವೆಲಿನ್‌ ದಿನ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನೀರಜ್‌ ಚೋಪ್ರಾ ಅವರು ಆಗಸ್ಟ್‌ 7ರಂದು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದರು. ಈ ದಿನವನ್ನು ಇನ್ನು ಮುಂದೆ ರಾಷ್ಟ್ರೀಯ ಜಾವೆಲಿನ್‌ ದಿನವನ್ನಾಗಿ ಆಚರಿಸಲು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ) ತೀರ್ಮಾನಿಸಿದೆ.

23 ವರ್ಷದ ನೀರಜ್‌, ಒಲಿಂಪಿಕ್ಸ್‌ನ ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಟೋಕಿಯೊ ಕೂಟದಲ್ಲಿ ಅವರು 87.58 ಮೀಟರ್ಸ್‌ ಸಾಮರ್ಥ್ಯ ತೋರಿ ಈ ಸಾಧನೆ ಮಾಡಿದ್ದರು. 

‘ಜಾವೆಲಿನ್‌ ಥ್ರೊ ಸ್ಪರ್ಧೆಯತ್ತ ಯುವ ಸಮುದಾಯವನ್ನು ಆಕರ್ಷಿಸುವ ಸಲುವಾಗಿ ಮುಂದಿನ ವರ್ಷದಿಂದ ಆಗಸ್ಟ್‌ 7ನ್ನು ರಾಷ್ಟ್ರೀಯ ಜಾವೆಲಿನ್‌ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಆ ದಿನದಂದು ನಮ್ಮ ಅಧೀನಕ್ಕೊಳಪಡುವ ಎಲ್ಲಾ ಫೆಡರೇಷನ್‌ಗಳು ಜಾವೆಲಿನ್‌ ಸ್ಪರ್ಧೆ ಏರ್ಪ‍ಡಿಸಲಿವೆ’ ಎಂದು ಎಎಫ್‌ಐನ ಯೋಜನಾ ಆಯೋಗದ ಮುಖ್ಯಸ್ಥ ಲಲಿತ್‌ ಭಾನೋಟ್‌ ಮಂಗಳವಾರ ನಡೆದ ಅಭಿನಂದನಾ ಸಮಾರಂಭದ ವೇಳೆ ತಿಳಿಸಿದರು.

‘ಜಿಲ್ಲಾ ಮಟ್ಟದಲ್ಲೂ  ಜಾವೆಲಿನ್‌ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತದೆ. ಎಲ್ಲಾ ಫೆಡರೇಷನ್‌ಗಳಿಗೂ ಅಗತ್ಯವಿರುವ ಜಾವೆಲಿನ್‌ ಅನ್ನು ನಾವೇ ಪೂರೈಸಲಿದ್ದೇವೆ. ಜಾವೆಲಿನ್‌ ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಎಎಫ್‌ಐ 2018ರಲ್ಲಿ ರಾಷ್ಟ್ರೀಯ ಜಾವೆಲಿನ್‌ ಥ್ರೋ ಚಾಂಪಿಯನ್‌ಷಿಪ್‌ ಶುರುಮಾಡಿತ್ತು. ಇದರ ಮೂರನೇ ಆವೃತ್ತಿಯು ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿದೆ.

‘ನನ್ನ ಸಾಧನೆಯನ್ನು ಸ್ಮರಣೀಯಗೊಳಿಸಲು ಎಎಫ್‌ಐ ಈ ತೀರ್ಮಾನ ಕೈಗೊಂಡಿದೆ. ಇದು ಅತೀವ ಖುಷಿ ನೀಡಿದೆ. ನನ್ನಿಂದ ಪ್ರೇರಿತಗೊಂಡು ಯುವಕರು ಜಾವೆಲಿನ್‌ ಥ್ರೋ ಸ್ಪರ್ಧೆಯತ್ತ ಮುಖಮಾಡಿದರೆ ಅದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ’ ಎಂದು ನೀರಜ್‌ ಚೋಪ್ರಾ ತಿಳಿಸಿದ್ದಾರೆ.

‘ಜಾವೆಲಿನ್‌ ಮತ್ತು ಇತರ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿದರೆ ಮಕ್ಕಳು ಖಂಡಿತವಾಗಿಯೂ ಈ ಕ್ರೀಡೆಯತ್ತ ಆಕರ್ಷಿತರಾಗುತ್ತಾರೆ. ಕೆಲವರಾದರೂ ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್‌ ಹಾಗೂ ಇತರ ಅಂತರರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆದ್ದು ದೇಶದ ಹಿರಿಮೆ ಹೆಚ್ಚಿಸಬಹುದು’ ಎಂದಿದ್ದಾರೆ. 

‘ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ಗುರಿ’

‘ಮುಂದಿನ ವರ್ಷ ಅಮೆರಿಕದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ ಹೊಂದಿದ್ದೇನೆ’ ಎಂದು ನೀರಜ್‌ ತಿಳಿಸಿದರು.

‘ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಚಿನ್ನ ಜಯಿಸಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸುವ ಕನಸೂ ಸಾಕಾರಗೊಂಡಿದೆ. ಈಗ ವಿಶ್ವ ಚಾಂಪಿಯನ್‌ಷಿಪ್‌ನತ್ತ ಚಿತ್ತ ಹರಿಸಿದ್ದೇನೆ’ ಎಂದರು.

‘ವಿಶ್ವ ಚಾಂಪಿಯನ್‌ಷಿಪ್‌ ಮಹತ್ವದ ಕೂಟ. ಕೆಲವೊಮ್ಮೆ ಅಲ್ಲಿ ಒಲಿಂಪಿಕ್ಸ್‌ಗಿಂತಲೂ ಕಠಿಣವಾದ ಸವಾಲು ಎದುರಾಗಲಿದೆ. ಟೋಕಿಯೊದಲ್ಲಿ ಚಿನ್ನ ಗೆದ್ದಿದ್ದೇನೆ ಎಂದು ಮೈಮರೆಯುವುದಿಲ್ಲ. ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಇನ್ನಷ್ಟು ಶ್ರೇಷ್ಠ ಸಾಮರ್ಥ್ಯ ತೋರಿ ಚಿನ್ನದ ಪದಕಗಳನ್ನು ಗೆಲ್ಲಬೇಕು. ಅದರತ್ತ ಗಮನ ಹರಿಸುತ್ತೇನೆ’ ಎಂದು ನುಡಿದರು.

‘2015ರಲ್ಲಿ ಪಂಚಕುಲದ ತವು ದೇವಿಲಾಲ್‌ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದೆ. ಅಲ್ಲಿ ಸೌಕರ್ಯಗಳು ಸರಿ ಇರಲಿಲ್ಲ. ಅದೇ ವರ್ಷ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾದೆ. ಅದು ನನ್ನ ಬದುಕಿನ ದಿಕ್ಕು ಬದಲಿಸಿತು. ಅಲ್ಲಿ ಡಯಟ್‌ನಿಂದ ಹಿಡಿದು ಎಲ್ಲಾ ಮೂಲ ಸೌಕರ್ಯಗಳು ಲಭ್ಯವಾದವು. ದೇಶದ ಪ್ರಮುಖ ಜಾವೆಲಿನ್‌ ಥ್ರೋ ಸ್ಪರ್ಧಿಗಳ ಜೊತೆ ಅಭ್ಯಾಸ ನಡೆಸುವ ಅವಕಾಶವೂ ಸಿಕ್ಕಿತು. ಇದಕ್ಕಾಗಿ ಎಎಫ್‌ಐಗೆ ಆಭಾರಿಯಾಗಿದ್ದೇನೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು