ಮಂಗಳವಾರ, ಸೆಪ್ಟೆಂಬರ್ 28, 2021
24 °C

ಆರ್ಚರಿ ವಿಶ್ವಕಪ್‌: ಭಾರತ ತಂಡಗಳ ಚಿನ್ನದ ಬೇಟೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್: ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಮಹಿಳಾ ರಿಕರ್ವ್ ಹಾಗೂ ಮಿಶ್ರ ತಂಡಗಳು ವಿಶ್ವಕಪ್ ಮೂರನೇ ಹಂತದ ಆರ್ಚರಿ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಗುರಿಯಿಟ್ಟವು. ದೀಪಿಕಾ ಕುಮಾರಿ, ಅಂಕಿತಾ ಭಕತ್‌ ಹಾಗೂ ಕೋಮಲಿಕಾ ಬಾರಿ ಅವರನ್ನೊಳಗೊಂಡ ಬಿಲ್ಗಾರ್ತಿಯರ ಬಳಗ ಭಾನುವಾರ ನಡೆದ ಫೈನಲ್‌ನಲ್ಲಿ ಮೆಕ್ಸಿಕೊ ತಂಡವನ್ನು ಪರಾಭವಗೊಳಿಸಿದರೆ, ಅತನು ದಾಸ್‌–ದೀಪಿಕಾ ದಂಪತಿಯು ಮಿಶ್ರ ತಂಡ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು.

ಆತನು–ದೀಪಿಕಾ ಫೈನಲ್ ಹಣಾಹಣಿಯಲ್ಲಿ 0–2 ಹಿನ್ನಡೆಯಿಂದ ಚೇತರಿಸಿಕೊಂಡು, ನೆದರ್ಲೆಂಡ್ಸ್‌ನ ಜೆಫ್‌ ವ್ಯಾನ್‌ ಡೆನ್ ಬರ್ಗ್‌–ಗೇಬ್ರಿಯೇಲಾ ಶ್ಲೋಸರ್‌ ಅವರನ್ನು 5–3ರಿಂದ ಮಣಿಸಿದರು.

‘ಇದೊಂದು ಅದ್ಭುತ ಕ್ಷಣ. ನಾವಿಬ್ಬರೂ ಜೊತೆಯಾಗಿ ಫೈನಲ್‌ ಆಡಿ ಗೆದ್ದಿದ್ದು ಇದೇ ಮೊದಲ ಸಲ. ಅತ್ಯಂತ ಸಂತೋಷವಾಗಿದೆ‘ ಎಂದು ಅತನು ದಾಸ್‌ ಪ್ರತಿಕ್ರಿಯಿಸಿದ್ದಾರೆ.

ಇದೇ 30ಕ್ಕೆ ಈ ‘ಆರ್ಚರಿ ದಂಪತಿ’ಗೆ ವಿವಾಹದ ಮೊದಲ ವಾರ್ಷಿಕೋತ್ಸವ ಸಂಭ್ರಮ.

ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ತನಗಿಂತ ಕೆಳ ರ‍್ಯಾಂಕಿನ ಕೊಲಂಬಿಯಾ ಎದುರು ಎಡವಿದ್ದ ಭಾರತದ ಮಹಿಳೆಯರು, ಈ ಟೂರ್ನಿಯ ಚಿನ್ನದ ಪದಕದ ಸುತ್ತಿನಲ್ಲಿ 5–1ರಿಂದ ಮೆಕ್ಸಿಕೊದ ಐಡಾ ರೋಮನ್‌, ಅಲೆಜಾಂಡ್ರಾ ವೆಲೆನ್ಸಿಯಾ ಮತ್ತು ಆ್ಯನಾ ವಾಜ್‌ಕ್ವೆಜ್ ಅವರನ್ನು ಮಣಿಸಿದರು. ಒಂದೂ ಸೆಟ್‌ ಕೂಡ ಕೈಚೆಲ್ಲದೆ ಎದುರಾಳಿಗೆ ಸೋಲುಣಿಸಿದ್ದು ವಿಶೇಷವಾಗಿತ್ತು.

ಭಾರತದ ಆರ್ಚರಿ ಪಟುಗಳ ದೋಷರಹಿತ ಬಿಲ್ಗಾರಿಕೆಯು ಮೆಕ್ಸಿಕೊ ತಂಡವನ್ನು ಕಂಗಾಲು ಮಾಡಿತು.

ಎರಡು ತಿಂಗಳ ಹಿಂದೆ ಗ್ವಾಟೆಮಾಲಾ ಸಿಟಿಯಲ್ಲಿ ನಡೆದ ವಿಶ್ವಕಪ್ ಮೊದಲ ಹಂತದ ಟೂರ್ನಿಯಲ್ಲೂ ಭಾರತದ ಮಹಿಳೆಯರು ಮೆಕ್ಸಿಕೊ ತಂಡವನ್ನೇ ಸೋಲಿಸಿ ಚಿನ್ನ ಗೆದ್ದುಕೊಂಡಿದ್ದರು.

ಭಾರತ ಮಹಿಳಾ ರಿಕರ್ವ್‌ ತಂಡಕ್ಕೆ ಈ ವರ್ಷ ವಿಶ್ವಕಪ್‌ ಟೂರ್ನಿಯಲ್ಲಿ ಒಲಿದ ಸತತ ಎರಡನೇ ಚಿನ್ನದ ಪದಕ ಇದು. ಒಟ್ಟಾರೆ ಆರನೆಯದ್ದು (ಶಾಂಘೈ–2011, ಮೆಡೆಲ್ಲಿನ್‌–2013, ರೊಕ್ಲೊ–2013, ರೊಕ್ಲೊ–2014, ಗ್ವಾಟೆಮಾಲಾ ಸಿಟಿ–2021). ಈ ಎಲ್ಲಾ ಸಂದರ್ಭಗಳಲ್ಲಿ ದೀಪಿಕಾ ಕುಮಾರಿ ತಂಡದಲ್ಲಿದ್ದರು.

ಭಾರತದ ಅಭಿಷೇಕ್ ವರ್ಮಾ ಅವರು ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಶನಿವಾರ ಚಿನ್ನದ ಪದಕ ಗೆದ್ದುಕೊಂಡಿದ್ದರು.

ಫೈನಲ್ ಪಂದ್ಯದಲ್ಲಿ ಅವರು ಅಮೆರಿಕದ ಕ್ರಿಸ್‌ ಶಾಫ್‌ ಅವರನ್ನು ಮಣಿಸಿದ್ದರು.

ಇದನ್ನೂ ಓದಿ... PV Web Exclusive: ಟ್ರ್ಯಾಕ್‌ಗೆ ವಿದಾಯ ಹೇಳಿದ ಚಿನ್ನದ ಹೊಳಪಿನ ವೆರೋನಿಕಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು