ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಅರ್ಜುನ ಪ್ರಶಸ್ತಿ ಪುರಸ್ಕೃತ ಟೇಬಲ್ ಟೆನಿಸ್ ಆಟಗಾರ ಚಂದ್ರಶೇಖರ್ ನಿಧನ

Last Updated 12 ಮೇ 2021, 13:12 IST
ಅಕ್ಷರ ಗಾತ್ರ

ಚೆನ್ನೈ: ಅರ್ಜುನ ಪ್ರಶಸ್ತಿ ಪುರಸ್ಕೃತ,ಮಾಜಿ ಟೇಬಲ್ ಟೆನಿಸ್ ಆಟಗಾರ ವಿ. ಚಂದ್ರಶೇಖರ್ (64) ಅವರು ಬುಧವಾರ ಕೋವಿಡ್‌ನಿಂದಾಗಿ ಮೃತಪಟ್ಟರು. ಅವರ ಕುಟುಂಬದ ಮೂಲಗಳು ಈ ವಿಷಯ ತಿಳಿಸಿವೆ. ಚಂದ್ರಶೇಖರ್ ಅವರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ.

ಚಂದ್ರ ಎಂದೇ ಹೆಸರಾಗಿದ್ದ, ಮೂರು ಬಾರಿಯ ರಾಷ್ಟ್ರೀಯ ಚಾಂಪಿಯನ್‌ ಚಂದ್ರಶೇಖರ್‌, ತಮಿಳುನಾಡು ಟೇಬಲ್ ಟೆನಿಸ್ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಚೆನ್ನೈನಲ್ಲಿ ಜನಿಸಿದ್ದ ಚಂದ್ರಶೇಖರ್, 1982ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದರು. ಕೋಚ್ ಆಗಿಯೂ ಯಶಸ್ಸು ಗಳಿಸಿದ್ದರು.

1984ರಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಅವರ ವೃತ್ತಿಜೀವನ ಅರ್ಧದಲ್ಲೇ ಮೊಟಕುಗೊಂಡಿತು. ಈ ಶಸ್ತ್ರಚಿಕಿತ್ಸೆಯಿಂದಾಗಿ ಅವರು ನಡೆದಾಡಲು ಕಷ್ಟಪಡಬೇಕಾಯಿತು. ಮಾತು ಹಾಗೂ ದೃಷ್ಟಿಯನ್ನೂ ಕಳೆದುಕೊಂಡಿದ್ದರು. ಕಷ್ಟಪಟ್ಟು ಚೇತರಿಸಿಕೊಂಡ ಬಳಿಕ ಕೋಚ್‌ ಆಗಿ ಕಾರ್ಯನಿರ್ವಹಿಸಿದರು. ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಆಸ್ಪತ್ರೆಯ ವಿರುದ್ಧ ಕಾನೂನು ಹೋರಾಟ ನಡೆಸಿ ತಮ್ಮ ಪರವಾಗಿ ತೀರ್ಪು ಪಡೆದರು.

ಮೊಣಕಾಲು ಗಾಯವಾಗಿದ್ದ ಸಂದರ್ಭದಲ್ಲೇ ಅರ್ಥಶಾಸ್ತ್ರ ಹಾಗೂ ಕಾನೂನು ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರ್ಣಗೊಳಿಸಿದ್ದರು. ತರುವಾಯ ಪೂರ್ಣಪ್ರಮಾಣದ ಇಚ್ಛಾಶಕ್ತಿಯ ಕಾರಣ ನಡೆದಾಡಲು ಆರಂಭಿಸಿದರು. ಭರವಸೆಯ ಆಟಗಾರರರಿಗೆ ತರಬೇತಿ ನೀಡುವತ್ತ ಗಮನ ಕೇಂದ್ರೀಕರಿಸಿದರು.

ಜಿ. ಸತ್ಯನ್‌, ಮಾಜಿ ರಾಷ್ಟ್ರೀಯ ಚಾಂಪಿಯನ್‌ಗಳಾದ ಎಸ್‌.ರಮಣ ಹಾಗೂ ಎಂ.ಎಸ್.ಮೈಥಿಲಿ ಅವರು ಚಂದ್ರಶೇಖರ್ ಅವರಿಂದ ತರಬೇತಿ ಪಡೆದವರಲ್ಲಿ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT