ಶುಕ್ರವಾರ, ಜುಲೈ 1, 2022
23 °C

ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಾಜಿ ಬಾಕ್ಸರ್ ಡಿಂಕೊ ಸಿಂಗ್ ನಿಧನ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: 1998ರ ಬ್ಯಾಕಾಂಕ್ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಾಜಿ ಬಾಕ್ಸರ್ ಡಿಂಕೊ ಸಿಂಗ್‌ (42), ಗುರುವಾರ ನಿಧನರಾಗಿದ್ದಾರೆ. ಚಾಂಪಿಯನ್ ಬಾಕ್ಸರ್ ಆಗಿದ್ದ ಅವರು ಕಳೆದ ನಾಲ್ಕು ವರ್ಷಗಳಿಂದಲೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಬಾಕ್ಸಿಂಗ್ ಮೂಲಕ ಯುವ ಬಾಕ್ಸರ್‌ಗಳಿಗೆ ಸ್ಪೂರ್ತಿಯಾಗಿರುವ ಡಿಂಕೊ ಸಿಂಗ್, ಪತ್ನಿ ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಕಳೆದ ವರ್ಷ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಡಿಂಕೊ ಸಿಂಗ್ ಚೇತರಿಸಿಕೊಂಡಿದ್ದರು.

ಡಿಂಕೊ ಸಿಂಗ್ ನಿಧನದ ವಾರ್ತೆ ತಿಳಿದ ಕ್ರೀಡಾ ಸಚಿವ ಕಿರಣ್ ರಿಜಿಜು ಸಂತಾಪ ಸೂಚಿಸಿದ್ದಾರೆ. ಸಮಕಾಲೀನ ಜಗತ್ತಿನ ಇತರೆ ಬಾಕ್ಸರ್‌ಗಳು ಮಾಜಿ ತಾರೆಗೆ ಗೌರವಾರ್ಪಣೆ ಸಲ್ಲಿಸಿದ್ದಾರೆ.

 

 

 

'ಶ್ರೀ ಡಿಂಕೊ ಸಿಂಗ್ ಅವರ ನಿಧನದಿಂದ ಅತೀವ ದುಃಖಿತನಾಗಿದ್ದೇನೆ. ಅವರು ದೇಶದ ಅತ್ಯುತ್ತಮ ಬಾಕ್ಸರ್‌ಗಳಲ್ಲಿ ಓರ್ವರಾಗಿದ್ದಾರೆ. 1998ರ ಬ್ಯಾಕಾಂಕ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವುದು ದೇಶದಲ್ಲಿ ಬಾಕ್ಸಿಂಗ್ ಕಿಡಿ ಹೊತ್ತಿಸಲು ಕಾರಣವಾಯಿತು' ಎಂದು ಹೇಳಿದ್ದಾರೆ.

 

10ರ ಹರೆಯದಲ್ಲೇ ಸಬ್ ಜೂನಿಯರ್ ಬಾಕ್ಸಿಂಗ್ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವ ಮಣಿಪುರ ಮೂಲದ ಡಿಂಕೊ ಸಿಂಗ್, ಭಾರತದ ಆಧುನಿಕ ಬಾಕ್ಸಿಂಗ್ ತಾರೆಯರಲ್ಲಿ ಓರ್ವರಾಗಿದ್ದಾರೆ. ಅಲ್ಲದೆ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಸೇರಿದಂತೆ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.

'ಅವರು (ಡಿಂಕೊ ಸಿಂಗ್) ರಾಕ್‌ಸ್ಟಾರ್. ನನಗೀಗಲೂ ನೆನಪಿದೆ, ಮಣಿಪುರದಲ್ಲಿ ರಿಂಗ್‌ನಲ್ಲಿ ಅವರು ಹೋರಾಡುವುದನ್ನು ನೋಡಲು ನಾನು ಸಾಲಿನಲ್ಲಿ ನಿಲ್ಲುತ್ತಿದ್ದೆ. ಅವರು ನನಗೆ ಸ್ಫೂರ್ತಿ ತುಂಬಿದರು. ಅವರು ನನ್ನ ಹೀರೊ. ಇದೊಂದು ದೊಡ್ಡ ನಷ್ಟ. ತುಂಬಾ ಬೇಗನೇ ನಮ್ಮನ್ನು ಅಗಲಿದ್ದಾರೆ. ಜೀವನವು ತುಂಬಾ ಅನಿರೀಕ್ಷಿತ' ಎಂದು ಮೇರಿ ಕೋಮ್ ಸಂತಾಪ ಸೂಚಿಸಿದ್ದಾರೆ.

 

 

 

ಬಾಕ್ಸಿಂಗ್ ರಿಂಗ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿರುವ ಡಿಂಕೊ ಸಿಂಗ್, ಅಂದು ಬ್ಯಾಕಾಂಕ್ ಏಷ್ಯನ್ ಗೇಮ್ಸ್‌ನಲ್ಲಿ ಇಬ್ಬರು ಒಲಿಂಪಿಕ್ ಪದಕ ವಿಜೇತರನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಈ ಮೂಲಕ ಭಾರತೀಯ ಬಾಕ್ಸಿಂಗ್ ಇತಿಹಾಸದಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು.

 

ಇಲ್ಲಿ ಗಮನಾರ್ಹ ಅಂಶವೆಂದರೆ ಆರಂಭದಲ್ಲಿ ಅವರನ್ನು ಭಾರತೀಯ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೊಡ್ಡುವ ಮೂಲಕ ತಂಡವನ್ನು ಸೇರಿದ್ದರು. ಬಳಿಕ ಪದಕ ಗೆದ್ದು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದರು.

'ಡಿಂಕೊ ಸಿಂಗ್ ಜೀವನ ಪಯಣ ಹಾಗೂ ಹೋರಾಟವು ಮುಂಬರುವ ಪೀಳಿಗೆಗೆ ಮಾದರಿ ಹಾಗೂ ಸ್ಪೂರ್ತಿ ತುಂಬಲಿದೆ' ಎಂದು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬಾಕ್ಸಿಂಗ್‌ನಲ್ಲಿ ಭಾರತಕ್ಕಾಗಿ ಮೊದಲ ಪದಕ ಗೆದ್ದಿರುವ ವಿಜೆಂದರ್ ಸಿಂಗ್ ಹೇಳಿದ್ದಾರೆ.

 

 

 

ಅರ್ಜುನ ಪ್ರಶಸ್ತಿ ಮತ್ತು 2013ರಲ್ಲಿ ಪದ್ಮ ಶ್ರೀ ಪ್ರಶಸ್ತಿಗೂ ಡಿಂಕೊ ಸಿಂಗ್ ಭಾಜನರಾಗಿದ್ದರು. 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲೂ ದೇಶವನ್ನು ಪ್ರತಿನಿಧಿಸಿದ್ದರು.

 

'ಇದು ಸುಲಭವಲ್ಲ. ಹೋರಾಡಬೇಕೆಂದರೆ ಹೋರಾಡಲೇ ಬೇಕು. ಸೋಲೊಪ್ಪಿಕೊಳ್ಳಲು ನಾನು ಸಿದ್ಧನಿಲ್ಲ' ಎಂದು ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ಪಿಟಿಐಗೆ ನೀಡಿದ ಕೊನೆಯ ಸಂದರ್ಶನದಲ್ಲಿ ಡಿಂಕೊ ಸಿಂಗ್ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು