ಸೋಮವಾರ, ಮೇ 16, 2022
30 °C
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾನ್ ಪ್ರಿ: ಭಾರತಕ್ಕೆ ಒಟ್ಟು 23 ಪದಕ

ಏಷ್ಯನ್ ದಾಖಲೆ ನಿರ್ಮಿಸಿದ ಪ್ರವೀಣ್, ನಿಶಾದ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಯುವ ಹೈಜಂಪ್ ಪಟುಗಳಾದ ಪ್ರವೀಣ್ ಕುಮಾರ್ ಹಾಗೂ ನಿಶಾದ್ ಕುಮಾರ್ ಅವರು ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಇದರೊಂದಿಗೆ ಇಲ್ಲಿ ಕೊನೆಗೊಂಡ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾನ್‌ ಪ್ರಿಯಲ್ಲಿ ಭಾರತ ಒಟ್ಟು 23 ಪದಕ ಗಳಿಸಿತು.

ಚಾಂಪಿಯನ್‌ಷಿಪ್‌ನ ಅಂತ್ಯದಲ್ಲಿ ಥಾಯ್ಲೆಂಡ್‌ 34 ಪದಕಗಳೊಂದಿಗೆ ಮೊದಲ ಸ್ಥಾನ ತನ್ನದಾಗಿಸಿಕೊಂಡರೆ, ಟರ್ಕಿ, ಕೀನ್ಯಾ ಹಾಗೂ ಭಾರತ ತಲಾ 23 ಪದಕಗಳನ್ನು ಗೆದ್ದುಕೊಂಡವು.

ಪುರುಷರ ಎಫ್‌42/44/64 ವಿಭಾಗದ ಹೈಜಂಪ್‌ನಲ್ಲಿ ಪ್ರವೀಣ್‌ 2.05 ಮೀಟರ್ ಸಾಧನೆ ಮಾಡಿ ಅಗ್ರಸ್ಥಾನ ಗಳಿಸಿದರು. ಏಷ್ಯನ್‌ ಗೇಮ್ಸ್ ಮಾಜಿ ಚಾಂಪಿಯನ್‌ ಭಾರತದ ಶರದ್‌ ಕುಮಾರ್ (1.76 ಮೀ.) ಬೆಳ್ಳಿ ಪದಕ ಗೆದ್ದರು.

ದುಬೈನಲ್ಲಿ 2019ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರವೀಣ್‌ ನಾಲ್ಕನೇ ಸ್ಥಾನದೊಂದಿಗೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ನಿಶಾದ್ ಕೂಡ ಈಗಾಗಲೇ ಪ್ಯಾರಾಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿದ್ದು, ಈ ಚಾಂಪಿಯನ್‌ಷಿಪ್‌ನ ಟಿ46/47 ವಿಭಾಗದ ಹೈಜಂಪ್‌ನಲ್ಲಿ ಅವರು 2.06 ಮೀ. ಎತ್ತರಕ್ಕೆ ಜಿಗಿಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಈ ಹಾದಿಯಲ್ಲಿ ಅವರು ಥಾಯ್ಲೆಂಡ್‌ನ ಆ್ಯಂಗ್‌ಕರ್ನ್‌ ಚಾನ್‌ಬೂನ್‌ (1.93 ಮೀ.) ಹಾಗೂ ಉಜ್ಬೆಕಿಸ್ತಾನದ ಒಮಾಡ್ಬೆಕ್‌ ಖಸನೊಯ್ (1.90 ಮೀ.) ಅವರನ್ನು ಹಿಂದಿಕ್ಕಿದರು.

ಇದಕ್ಕೂ ಮೊದಲು ಸಿಮ್ರನ್ ಟೂರ್ನಿಯಲ್ಲಿ ಎರಡನೇ ಪದಕ ಗೆದ್ದರು. ಮಹಿಳೆಯರ ಟಿ13 400 ಮೀ. ಫೈನಲ್‌ಅನ್ನು 1 ನಿಮಿಷ 1.56 ಸೆಕೆಂಡುಗಳಲ್ಲಿ ಕೊನೆಗೊಳಿಸಿದ ಅವರು ಬೆಳ್ಳಿ ಪದಕದ ಒಡತಿಯಾದರು. ಭಾಗ್ಯಶ್ರೀ ಮಹಾವೀರ್ ಜಾಧವ್‌ ಅವರು ಮಹಿಳೆಯರ ಎಫ್‌34 ಶಾಟ್‌ಪಟ್‌ನಲ್ಲಿ 6.18 ಮೀ. ಸಾಧನೆಯೊಂದಿಗೆ ಬೆಳ್ಳಿ ಗೆದ್ದರೆ, ಪುರುಷರ ಎಫ್‌57 ಡಿಸ್ಕಸ್‌ ಥ್ರೊ ಸ್ಪರ್ಧೆಯಲ್ಲಿ ಅತುಲ್ ಕೌಶಿಕ್ (42 ಮೀಟರ್) ಅವರಿಗೆ ಕಂಚು ಒಲಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು