ಭಾನುವಾರ, ಜುಲೈ 3, 2022
23 °C
ಇಂದಿನಿಂದ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌

ಭಾರತದ ಸ್ಪರ್ಧಿಗಳಿಗೆ ‘ಚಿನ್ನ’ದ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿಂಗ್ಬೊ, ಚೀನಾ: ಭಾರತದ ಸ್ಪರ್ಧಿಗಳು ಶನಿವಾರದಿಂದ ನಡೆಯುವ ಏಷ್ಯನ್‌ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ‘ಚಿನ್ನ’ದ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ.

2017ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಸಾಯಿಕೋಮ್‌ ಮೀರಾಬಾಯಿ ಚಾನು ಭಾರತದ ಭರವಸೆಯಾಗಿದ್ದಾರೆ.

ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್‌ (ಐಎಬ್ಲ್ಯುಎಫ್‌) ತೂಕದ ವಿಭಾಗದಲ್ಲಿ ಬದಲಾವಣೆ ಮಾಡಿರುವ ಕಾರಣ ಮೀರಾಬಾಯಿ ಅವರು 48 ಕೆ.ಜಿ ಬದಲು 49 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

24 ವರ್ಷ ವಯಸ್ಸಿನ ಮೀರಾ, ಫೆಬ್ರುವರಿಯಲ್ಲಿ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಇಜಿಎಟಿ ಕಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಸ್ನ್ಯಾಚ್‌ನಲ್ಲಿ 82 ಕೆ.ಜಿ.ಭಾರ ಎತ್ತಿದ್ದ ಅವರು ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ 110 ಕೆ.ಜಿ. ಸಾಮರ್ಥ್ಯ ತೋರಿ ಗಮನ ಸೆಳೆದಿದ್ದರು.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಮೀರಾಬಾಯಿ, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲೂ ಪದಕ ಗೆಲ್ಲುವ ಹೆಬ್ಬಯಕೆ ಹೊಂದಿದ್ದಾರೆ.

‘ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬೇಕಾದರೆ ಮೀರಾಬಾಯಿ 210 ಕೆ.ಜಿ. ಸಾಮರ್ಥ್ಯ ತೋರಬೇಕು. ಇದನ್ನು ಗಮನದಲ್ಲಿಟ್ಟು ಕೊಂಡು ಕಠಿಣ ಅಭ್ಯಾಸ ನಡೆಸಿದ್ದಾರೆ. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಖಂಡಿತವಾಗಿಯೂ ಪದಕ ಜಯಿಸಲಿದ್ದಾರೆ’ ಎಂದು ಭಾರತ ತಂಡದ ಕೋಚ್‌ ವಿಜಯ್‌ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲಿ ದಲಬೆಹೆರಾ (45 ಕೆ.ಜಿ), ಸ್ವಾತಿ (59 ಕೆ.ಜಿ), ರಾಖಿ ಹಲ್ದರ್‌ (64.ಕೆ.ಜಿ) ಅವರೂ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಪುರುಷರ ವಿಭಾಗದಲ್ಲಿ ಜೆರೆಮಿ ಲಾಲ್ರಿನ್ನುಂಗಾ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. 16ರ ಹರೆಯದ ಜೆರೆಮಿ, ಯೂತ್‌ ಒಲಿಂಪಿಕ್ಸ್‌ನಲ್ಲಿ  ಚಿನ್ನದ ಪದಕ ಜಯಿಸಿದ್ದರು. ಇವರು 67 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

96 ಕೆ.ಜಿ.ವಿಭಾಗದಲ್ಲಿ ಕಣದಲ್ಲಿರುವ ವಿಕಾಸ್‌ ಠಾಕೂರ್‌ ಕೂಡಾ ಪದಕದ ವಿಶ್ವಾಸ ಹೊಂದಿದ್ದಾರೆ. ವಿಕಾಸ್‌ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ.

ಎಂ.ರಾಜಾ (61.ಕೆ.ಜಿ), ಅಚಿಂತ ಶೆವುಲಿ (73 ಕೆ.ಜಿ), ಅಜಯ್‌ ಸಿಂಗ್‌ (81 ಕೆ.ಜಿ), ಪ್ರದೀಪ್‌ ಸಿಂಗ್‌ (102 ಕೆ.ಜಿ) ಮತ್ತು ಗುರುದೀಪ್‌ ಸಿಂಗ್‌ (+101 ಕೆ.ಜಿ) ಅವರ ಮೇಲೂ ಭರವಸೆ ಇಡಬಹುದಾಗಿದೆ.

ಅಜಯ್‌ ಸಿಂಗ್ ಅವರು ಏಷ್ಯನ್‌ ಯೂತ್‌ ಮತ್ತು ಜೂನಿಯರ್‌ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು