ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಮರಳಿಸಲು ತೆರಳುತ್ತಿದ್ದವರನ್ನು ತಡೆದ ಪೊಲೀಸರು

ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ
Last Updated 7 ಡಿಸೆಂಬರ್ 2020, 12:47 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ತಮಗೆ ದೊರೆತ 35 ರಾಷ್ಟ್ರೀಯ ಪುರಸ್ಕಾರಗಳನ್ನು ಹಿಂದಿರುಗಿಸಲು ರಾಷ್ಟ್ರಪತಿ ಭವನದ ಕಡೆಗೆ ತೆರಳುತ್ತಿದ್ದ ಪಂಜಾಬ್‌ನ ಅಥ್ಲೀಟ್‌ಗಳನ್ನು ಪೊಲೀಸರು ಮಾರ್ಗಮಧ್ಯದಲ್ಲೇ ತಡೆದಿದ್ದಾರೆ.

ಏಷ್ಯನ್‌ ಕ್ರೀಡಾಕೂಟದಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದಿರುವ ಕುಸ್ತಿಪಟು ಕರ್ತಾರ್ ಸಿಂಗ್‌ ಸೇರಿದಂತೆ ಕೆಲವು ಅಥ್ಲೀಟ್‌ಗಳು ಇದರಲ್ಲಿ ಸೇರಿದ್ದರು.

ಕರ್ತಾರ್‌ ಅವರಿಗೆ 1982ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ 1987ರಲ್ಲಿ ಪದ್ಮಶ್ರೀ ಪುರಸ್ಕಾರ ಸಂದಿದೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ತಂಡದಲ್ಲಿದ್ದ ಹಾಕಿ ಆಟಗಾರ ಗುರ್ಮೈಲ್ ಸಿಂಗ್‌ ಹಾಗೂ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ರಾಜ್‌ಬೀರ್ ಕೌರ್ ಅವರೂ ಪ್ರಶಸ್ತಿ ಮರಳಿಸಲು ತೆರಳುತ್ತಿದ್ದವರಲ್ಲಿ ಸೇರಿದ್ದರು. ಗುರ್ಮೈಲ್ ಅವರು 2014ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಹಾಗೂ ರಾಜ್‌ಬೀರ್ ಅವರು 1984ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ರೈತರು ಯಾವಾಗಲೂ ನಮಗೆ ಬೆಂಬಲವಾಗಿದ್ದಾರೆ. ನಮ್ಮ ರೈತ ಸಹೋದರರ ಮೇಲೆ ಲಾಠಿ ಚಾರ್ಜ್‌, ರಸ್ತೆಗಳನ್ನು ಬಂದ್‌ ಮಾಡಿಸುವಂತಹ ಕ್ರಮಗಳನ್ನು ತೆಗೆದುಕೊಂಡಾಗ ಖೇದವೆನಿಸುತ್ತದೆ. ದೆಹಲಿಯ ಮೈಕೊರೆಯುವ ಚಳಿಯಲ್ಲಿ ಅವರು ಪ್ರತಿಭಟನೆಗೆ ಕುಳಿತುಕೊಂಡಿದ್ದಾರೆ‘ ಎಂದು 1978 ಹಾಗೂ 1986ರ ಏಷ್ಯನ್‌ ಗೇಮ್ಸ್‌ಗಳಲ್ಲಿ ಚಿನ್ನದ ಪದಕ ವಿಜೇತ ಕರ್ತಾರ್ ಹೇಳಿದ್ದಾರೆ.

‘ನಾನು ರೈತನ ಮಗ. ಐಜಿ, ಪೊಲೀಸ್‌ ಹುದ್ದೆಯಲ್ಲಿದ್ದರೂ ಈಗಲೂ ಕೃಷಿ ಮಾಡುತ್ತೇನೆ‘ ಎಂದೂ ಅವರು ನುಡಿದರು.

ಭಾನುವಾರ ದೆಹಲಿ ತಲುಪಿರುವ ಈ ಕ್ರೀಡಾಪಟುಗಳು, ಪ್ರೆಸ್‌ಕ್ಲಬ್‌ನಿಂದ ರಾಷ್ಟ್ರಪತಿ ಭವನದ ಕಡೆಗೆ ತೆರಳುತ್ತಿದ್ದರು. ಕೃಷಿ ಭವನದ ಹತ್ತಿರ ಅವರನ್ನು ತಡೆದ ಪೊಲೀಸರು ವಾಪಸ್‌ ಕಳುಹಿಸಿದರು.

’ಈ ಕರಾಳ ಕಾಯ್ದೆಗಳನ್ನು ರದ್ದುಗೊಳಿಸುವಂತೆ ನಾನು ಸರ್ಕಾರಕ್ಕೆ ಕೋರುತ್ತೇನೆ. ಇಡೀ ದೇಶ ಕೊರೊನಾ ಭೀತಿಯಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಈ ಕಾಯ್ದೆಗಳನ್ನು ಪಾಸು ಮಾಡಲು ಎರಡೂ ಸದನಗಳು ಹಾಗೂ ರಾಷ್ಟ್ರಪತಿ ಅವರ ಒಪ್ಪಿಗೆ ಪಡೆಯಲಾಗಿದೆ‘ ಎಂದು ಕರ್ತಾರ್‌ ನುಡಿದರು.

‘ಸರ್ಕಾರದ ಮೇಲೆ ನಂಬಿಕೆ ಇಡಿ‘: ಪ್ರಶಸ್ತಿ ಮರಳಿಸುವಅಥ್ಲೀಟ್‌ಗಳ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ’ಸರ್ಕಾರದ ಮೇಲೆ ನಂಬಿಕೆ ಇಡಿ. ರಾಷ್ಟ್ರೀಯ ಪುರಸ್ಕಾರ ಹಾಗೂ ಪ್ರತಿಭಟನೆ ಎರಡು ಭಿನ್ನ ಸಂಗತಿಗಳು‘ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT