ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಕೋವಿಡ್ ಜಯಿಸಿದ್ದ ಡೀನ್‌ಗೆ ಚಿನ್ನ

ಈಜುಕೊಳದಲ್ಲಿ ಅಮೆರಿಕದ ಪ್ರಾಬಲ್ಯಕ್ಕೆ ಪೆಟ್ಟುಕೊಟ್ಟ ಬ್ರಿಟನ್ ಈಜುಗಾರ
Last Updated 27 ಜುಲೈ 2021, 16:24 IST
ಅಕ್ಷರ ಗಾತ್ರ

ಟೋಕಿಯೊ: ಬ್ರಿಟನ್‌ನ ಟಾಮ್ ಡೀನ್ ಟೋಕಿಯೊಗೆ ಬರುವ ಮುನ್ನ ಎರಡು ಬಾರಿ ಕೋವಿಡ್‌ನಿಂದ ಬಳಲಿದ್ದರು. ಆ ಕಹಿ ನೆನಪುಗಳನ್ನು ಹಿಂದಿಕ್ಕಿದ ಟಾಮ್ ಮಂಗಳವಾರ ಪುರುಷರ 200 ಮೀಟರ್ ಫ್ರೀಸ್ಟೈಲ್ ಈಜಿನಲ್ಲಿ ಚಿನ್ನದ ಪದಕ ಗೆದ್ದರು.

ಅವರದೇ ದೇಶದ ಡಂಕನ್ ಸ್ಕಾಟ್ ಬೆಳ್ಳಿ ಪದಕ ಜಯಿಸಿದರು. ಇದರೊಂದಿಗೆ ಒಲಿಂಪಿಕ್ಸ್‌ ಈಜು ಸ್ಪರ್ಧೆಯೊಂದರಲ್ಲಿ ಮೊದಲ ಎರಡೂ ಸ್ಥಾನಗಳನ್ನು ಬ್ರಿಟನ್‌ ಜಯಿಸಿದ ದಾಖಲೆ ನಿರ್ಮಾಣವಾಯಿತು.

‘ನನ್ನ ಜೀವಮಾನದ ಅತ್ಯಂತ ಶ್ರೇಷ್ಠ ಸಾಧನೆಯಾಗಿದೆ‘ ಎಂದು ಡೀನ್ ಹೇಳಿದರು. ಟಾಮ್ ಒಂದು ನಿಮಿಷ, 44.22ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಹೋದ ಜನವರಿಯಲ್ಲಿ ಈ ರೀತಿ ಈಜುವುದು ಟಾಮ್ ಅವರಿಂದ ಸಾಧ್ಯವಿರಲಿಲ್ಲ. ಏಕೆಂದರೆ, ಆಗ ಎರಡನೇ ಬಾರಿ ಕೋವಿಡ್ ಆಗಿತ್ತು. ಹೃದಯ, ಶ್ವಾಸಕೋಶಗಳ ತೊಂದರೆ ಹೆಚ್ಚಿತ್ತು. ಸತತ ಕೆಮ್ಮು ಮತ್ತು ಎದೆನೋವು ಕಾಡಿತ್ತು. ಅದರಿಂದಾಗಿ ತಮ್ಮ ಮನೆಯಲ್ಲಿ ಪ್ರತ್ಯೇಕವಾಸದಲ್ಲಿದ್ದು ಚಿಕಿತ್ಸೆ ಪಡೆದಿದ್ದರು.

ಏಪ್ರಿಲ್‌ನಲ್ಲಿ ಇದ್ದ ಟ್ರಯಲ್ಸ್‌ಗೆ ಅಭ್ಯಾಸ ಮಾಡುವುದು ಕಠಿಣವಾಗಿತ್ತು.

‘ಆಗ ನನಗೆ ಒಲಿಂಪಿಕ್ ಚಿನ್ನ ಹಲವಾರು ಮೈಲು ದೂರದಲ್ಲಿದ್ದಂತೆ ಕಂಡಿತ್ತು. ಆದರೆ ಈಗ ಕನಸು ನನಸಾಗಿದೆ‘ ಎಂದು ಟಾಮ್ ಹೇಳುತ್ತಾರೆ.

‘ಕಾಯಿಲೆ ಜೀವಕ್ಕೆ ಮಾರಕವಾಗುವಷ್ಟಿರಲಿಲ್ಲ. ಆದರೂ ನಮ್ಮ ಟ್ರೇನಿಂಗ್‌ನಲ್ಲಿ ಕಾರ್ಡಿಯೊ ವಾಸ್ಕುಲರ್ ಭಾಗದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಶ್ವಾಸಕೋಶದ ಕಾರ್ಯವೂ ಮುಖ್ಯ. ಹೆಚ್ಚು ಶ್ರಮದಿಂದ ಶ್ವಾಸಕೋಶಕ್ಕೆ ಹಾನಿಯಾಗುವ ಸಂಭವ ಇರುತ್ತದೆ. ಆದರೂ ಆ ಮೂರು ತಿಂಗಳಲ್ಲಿ ಪಟ್ಟ ಶ್ರಮ ಅಸಾಧಾರಣವಾದದ್ದು’ ಎಂದರು.

ಒಂದು ಹಂತದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದೇ ಅವರಿಗೆ ಕಷ್ಟವಾಗಿತ್ತು.

‘ಅವರ ಭುಜದ ಶಕ್ತಿ ಅಗಾಧವಾದದ್ದು. ಸ್ಟ್ರೈಡ್‌, ಸ್ಟೋಕ್‌ಗಳು ಆಕರ್ಷಕವಾಗಿದ್ದವು. ಟಾಮ್ ಸಾಧನೆ ಅನುಕರಣೀಯ‘ ಎಂದು ಬೆಳ್ಳಿ ವಿಜೇತ ಸ್ಕಾಟ್ ಹೇಳಿದರು.

ಈ ವಿಭಾಗದಲ್ಲಿ ಬ್ರೆಜಿಲ್‌ನ ಶಿಫ್ಲರ್‌ ಮೂರನೇ ಸ್ಥಾನ ಪಡೆದರು.

17ರ ಬಾಲೆ ಲಿಡಿಯಾ ಜಾಕೋಬಿಗೆ ಚಿನ್ನದ ಸಂಭ್ರಮ

17 ವರ್ಷದ ಲಿಡಿಯಾ ಜಾಕೋಬಿ ಮಂಗಳವಾರ ಈಜುಕೊಳದಲ್ಲಿ ಮಿಂಚಿನ ಸಂಚಲನ ಮೂಡಿಸಿದರು. ಮಹಿಳೆಯರ 100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು.

ಅಮೆರಿಕದ ಲಿಡಿಯಾ ಒಂದು ನಿಮಿಷ, 4.95 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ದಕ್ಷಿಣ ಆಫ್ರಿಕಾದ ತಜಾನಾ ಶಾನ್ ಮೇಕರ್ ಒಂದು ನಿಮಿಷ 5.22 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು. ಅಮೆರಿಕದ ಎಲ್‌. ಕಿಂಗ್ ಮೂರನೇ ಸ್ಥಾನ ಗಳಿಸಿದರು.

ರಷ್ಯಾ ಜಯಭೇರಿ

ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ರಷ್ಯಾದ ಇವಾಗ್ನಿ ರೈಲಾವ್ (51.98ಸೆ) ಮತ್ತು ಅವರ ತಂಡದವರೇ ಆದ ಕ್ಲೈಮೆಂಟ್ ಕೊಲೆಸ್ನಿಕೊವ್ (52ಸೆ) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದರು.

ಅಮೆರಿಕದ ರಿಯಾನ್ ಮರ್ಫಿ (52.19ಸೆ) ಕಂಚಿನ ಪದಕ ಪಡೆದರು.

1992ರ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ಈಜುಪಟುಗಳು ಬ್ಯಾಕ್‌ಸ್ಟ್ರೋಕ್‌ನಲ್ಲಿ ಸೋಲನುಭವಿಸಿದ್ದರು. ಅದರ ನಂತರ ಅವರದ್ದೇ ಪಾರಮ್ಯವಿತ್ತು. ಕಳೆದ ಆರು ಒಲಿಂಪಿಕ್ಸ್‌ಗಳಲ್ಲಿ 12 ಚಿನ್ನದ ಪದಕಗಳನ್ನು ಗೆದ್ದಿದ್ದರು. ರಿಯೊ ಒಲಿಂಪಿಕ್ಸ್‌ನಲ್ಲಿ ಮರ್ಫಿ 100 ಮೀ ಮತ್ತು 200 ಮೀ ಬ್ಯಾಕ್‌ ಸ್ಟೋಕ್‌ನಲ್ಲಿ ಚಿನ್ದ ಗೆದ್ದಿದ್ದರು.

ಆದರೆ ಈ ಬಾರಿ ರಷ್ಯಾ ಈಜುಗಾರರು ಆಘಾತ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT