ಭಾನುವಾರ, ಅಕ್ಟೋಬರ್ 25, 2020
28 °C
ಕೋವಿಡ್‌ ಭೀತಿ ದೂರವಿಟ್ಟು ಆಡಿ– ನಲಿಯುತ್ತಿರುವ ಗ್ರಾಮೀಣ ಮಕ್ಕಳು

PV Web Exclusive: ಹಳ್ಳಿ ಮಕ್ಕಳ ಬಿಂದಾಸ್‌ ಬಾಲ್ಯ...

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿಯಿಂದ ಎಂಟು ಕಿ.ಮೀ. ದೂರದಲ್ಲಿರುವ ಅಂಚಟಗೇರಿ ಕ್ರಾಸ್‌ ದಾಟಿದ ಬಳಿಕ ಬೈಕ್‌ನ ವೇಗ ಹೆಚ್ಚಿಸಿ ಕಲಘಟಗಿಗೆ ಹೋಗುವ ರಸ್ತೆಯಲ್ಲಿ ಸಾಗುತ್ತಿದ್ದರೆ ತಂಪಾದ ಗಾಳಿ ಮೈ–ಮನಕ್ಕೆಲ್ಲ ಸೋಕುತ್ತದೆ. ಮಲೆನಾಡಿನ ಪರಿಸರದ ಆರಂಭದ ಸಂಕೇತವದು. ಈ ರಸ್ತೆಗುಂಟ ಕಣ್ಣು ಹಾಯಿಸಿದಷ್ಟೂ ದೂರ ಹಸಿರೇ ಹಸಿರು. ಚಳಮಟ್ಟಿ, ಮಿಶ್ರಿಕೋಟಿ ಕ್ರಾಸ್‌ ದಾಟಿ ಹಾಗೆಯೇ ಮುಂದೆ ಸಾಗಿದರೆ ಹಸಿರ ಸಿರಿ ದಟ್ಟೈಸುತ್ತಲೇ ಹೋಗುತ್ತದೆ.

ಮಿಶ್ರಿಕೋಟಿ ಕ್ರಾಸ್‌ ದಾಟಿ ಒಂದು ಕಿ.ಮೀ. ಮುಂದಕ್ಕೆ ಸಾಗಿದಾಗ ಅಲ್ಲಿ ಕಂಡಿದ್ದು ಚಿಣ್ಣರ ಕಲರವ. ಐದಾರು ವರ್ಷದವರಿಂದ ಹಿಡಿದು 8–10 ವಯಸ್ಸಿನ ತನಕದ ಮಕ್ಕಳು ಊರ ಮುಂದಿನ ಕೆರೆಯಲ್ಲಿ ಗಾಳ ಹಾಕಿ ಮೀನಿಗಾಗಿ ಕಾಯುತ್ತಿದ್ದರು. ಆರೇಳು ವರ್ಷದ ಹುಡುಗ ‘ಮೀನು ಸಿಕ್ತಾ ಇಲ್ಲಲೇ..’ ಎಂದು ಸೊಂಟದಿಂದ ಜಾರುತ್ತಿದ್ದ ಚಡ್ಡಿ ಹಿಡಿದುಕೊಂಡು ಗೆಳೆಯನ ಉತ್ತರಕ್ಕೆ ಕಾಯುತ್ತಿದ್ದ. ಅವನ ಪಕ್ಕದಲ್ಲೇ ನಿಂತಿದ್ದ ಮತ್ತೊಬ್ಬ ಗೆಳೆಯ ‘ಮೀನ್‌ ಸಿಗೊ ತನ್ಕ ಪುರುಸೊತ್ತು ಮಾಡಲೇ’ ಎಂದು ಮಾರುತ್ತರ ನೀಡಿದ.

ಮಕ್ಕಳ ಈ ಆಟ, ತಮಾಷೆ, ಸಂಭ್ರಮ ನೋಡುಕೊಂಡು ಇನ್ನೊಂದಿಷ್ಟು ಮುಂದಕ್ಕೆ ಹೋದರೆ ಮಿಶ್ರಿಕೋಟಿ ಗ್ರಾಮದ ಬಸ್‌ ನಿಲ್ದಾಣ. ಆದರೆ ಬಸ್ ನಿಲ್ದಾಣದಲ್ಲಿ ಬಸ್‌ಗಳ ಬದಲು ಅಲ್ಲೂ ಮಕ್ಕಳ ಕಲರವ. ಸ್ಪರ್ಧೆಗೆ ಬಿದ್ದವರಂತೆ ಗಾಳಿಪಟ ಜೋಡಿಸಿಕೊಂಡು, ದಾರ ಸರಿಮಾಡಿಕೊಂಡು ಮುಗಿಲೆತ್ತರಕ್ಕೆ ಹಾರಿಸಲು ಕಾತರರಾಗಿದ್ದರು. 10ರಿಂದ 15 ಮಕ್ಕಳಿದ್ದ ಆ ಗುಂಪಿನ ಹುಡುಗನೊಬ್ಬ ಗಾಳಿಪಟದ ದಾರ ಹಿಡಿದು ರಸ್ತೆಯತ್ತ ಓಡಿಯೇ ಬಿಟ್ಟ. ಆ ಹುಡುಗನ ವೇಗದ ಓಟಕ್ಕೆ ದಾರ ಹರಿದು, ಪಟ ದಿಕ್ಕು ತಪ್ಪಿದಂತಾಯಿತು. ಇದರಿಂದ ಸಿಟ್ಟಿಗೆದ್ದ ಗಾಳಿಪಟದ ‘ಮಾಲೀಕ’ ದಾರ ಹರಿದ ಹುಡುಗನನ್ನು ದಾರಿಗುಂಟ ಬೈಯ್ದುಕೊಳ್ಳುತ್ತಾ; ಮತ್ತೊಂದು ದಾರ ಕೊಡಿಸು ಬಾ ಎಂದು ಪಟ್ಟು ಹಿಡಿದ.

10ರಿಂದ 12 ವರ್ಷ ವಯಸ್ಸಿನ ಆಸುಪಾಸಿನಲ್ಲಿದ್ದ ನಾಲ್ಕೈದು ಗೆಳೆಯರ ತಂಡ ‘ಐಪಿಎಲ್‌ ಪಂದ್ಯಗಳ ವಿಶ್ಲೇಷಣೆ’ ನಡೆಸುತ್ತಾ ರಸ್ತೆಯಲ್ಲಾ ತಮ್ಮದೇ ಎಂಬಂತೆ ಹೊರಟಿದ್ದರು. ವಿರಾಟ್ ಕೊಹ್ಲಿ, ಡಿವಿಲಿಯರ್ಸ್‌ ನಮ್ಮವ... ಎಂದು ಒಬ್ಬ ಎನ್ನುತ್ತಿದ್ದರೆ, ಇನ್ನೊಬ್ಬ ಹುಡುಗ ಆರ್‌ಸಿಬಿ ಈ ಸಲ ಕಪ್‌ ಗೆದ್ದೇ ಗೆಲ್ಲುತ್ತೆ ಎಂದು ಭವಿಷ್ಯ ನುಡಿದ. ಇದಕ್ಕೆ ಜೊತೆಯಾದ ಇನ್ನೊಬ್ಬ ಹುಡುಗ ‘ಆರ್‌ಸಿಬಿ ಒಮ್ಮೆಯೂ ಕಪ್‌ ಗೆದ್ದಿಲ್ಲ. ಈ ಸಲನೂ ಚಿಪ್ಪೇ’ ಎಂದು ವ್ಯಂಗ್ಯ ಮಾಡಿ ಕೇಕೆ ಹೊಡೆದ. ಇದರಿಂದ ಸಿಟ್ಟಿಗೆದ್ದ ಆರ್‌ಸಿಬಿ ತಂಡದ ಅಭಿಮಾನಿ ‘ಕಪ್ ಗೆಲ್ಲೊದು ಪಕ್ಕಾ’ ಎನ್ನುತ್ತಿದ್ದಂತೆ ‘ಆರ್‌ಸಿಬಿ ಅಂದ್ರ ಏನ್‌ ಹೇಳು ನೋಡಣಾ’ ಎಂದು ಕಿಚಾಯಿಸಿದ. ತಂಡದ ಪೂರ್ಣ ಹೆಸರು ಹೇಳಲು ತಡವರಿಸಿದ ಹುಡುಗ. ‘ತಂಡದ ಹೆಸ್ರ ಗೊತ್ತಿಲ್ಲ; ಕಪ್‌ ಅಂತ ಕಪ್‌’ ಎಂದು ಉಳಿದ ಸ್ನೇಹಿತರೆಲ್ಲ ನಗುತ್ತಾ, ಎಲ್ಲರೂ ಹೆಗಲ ಮೇಲೆ ಕೈ ಹಾಕಿ ಹೊರಟರು.

ಶಿವಪ್ಪಣ್ಣ ಜಿಗಳೂರು ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣದಲ್ಲಿಯೂ ಚಿಣ್ಣರ ಸಂಭ್ರಮ. ರಾಜ್ಯ ಸರ್ಕಾರ ಆರಂಭಿಸಿರುವ ‘ವಿದ್ಯಾಗಮ’ದ ‍ಪಾಠ ಕೇಳಲು ಸಮುದಾಯ ಭವನಕ್ಕೆ ಬಂದಿದ್ದ ಮಕ್ಕಳು ಲದ್ದಿಗೂಸು ಹಾಗೂ ಕಿರ್‌ (ಬೆನ್ನಿನ ಮೇಲಿನಿಂದ ಜಿಗಿಯುವುದು),ಗೋಲಿ ಆಟ, ಬಾಲಕಿಯರು ಕುಂಟೆಪಿಲ್ಲೆ ಆಡುವ ಚಿತ್ರಣ ಕಂಡುಬಂತು.

ಗ್ರಾಮೀಣ ಪ್ರದೇಶಗಳಲ್ಲಿ ಹೀಗೆ ಎಲ್ಲಿ ನೋಡಿದರಲ್ಲೂ ಮಕ್ಕಳ ಸಂಭ್ರಮ, ಸಡಗರ, ಆಟದ ಖುಷಿ ಕಂಡುಬರುತ್ತಿದೆ. ಅವರ ಪಾಲಿಗೆ ಬಾಲ್ಯದ ಬದುಕು ಯಾವತ್ತೂ ‘ಲಾಕ್‌ಡೌನ್‌’ ಆಗಿಯೇ ಇರಲಿಲ್ಲ.

ಕೋವಿಡ್‌ ಕಾರಣಕ್ಕಾಗಿ ಶಾಲಾ, ಕಾಲೇಜುಗಳಿಗೆ ರಜೆಯಿದೆ. ನಗರ ಪ್ರದೇಶಗಳಲ್ಲಿ ಮಕ್ಕಳು ಆನ್‌ಲೈನ್‌ ಕ್ಲಾಸ್‌ಗಾಗಿ ದಿನಪೂರ್ತಿ ಕಂಪ್ಯೂಟರ್‌ ಮತ್ತು ಮೊಬೈಲ್ ಫೋನ್‌ ಮುಂದೆ ಸಮಯ ಕಳೆಯಬೇಕಾದ ಪರಿಸ್ಥಿತಿ. ಉಳಿದ ಅವಧಿಯಲ್ಲಾದರೂ ಹೊರಗಡೆ ಹೋಗಿ ನಿರಾತಂಕವಾಗಿ ಆಟವಾಡೋಣವೆಂದರೆ ಕೊರೊನಾ ಸೋಂಕಿನ ಭೀತಿ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಹೊರಗಡೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಕೋವಿಡ್‌, ಲಾಕ್‌ಡೌನ್‌ ಯಾವುದರ ಬಗ್ಗೆಯೂ ಹೆಚ್ಚು ತಲೆ ಕೆಡಿಸಿಕೊಳ್ಳದೆ ಹಳ್ಳಿಯ ಹುಡುಗರು ಬಿಂದಾಸ್ ಆಗಿ ತಮ್ಮ ಬಾಲ್ಯ ಕಳೆಯುತ್ತಿದ್ದಾರೆ. ಇದು ಒಂದು ಗ್ರಾಮಕ್ಕೆ ಸೀಮಿತವಾದ ಉದಾಹರಣೆಯಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳು ಎಂದಿನಂತೆ ತಮ್ಮ ಸಹಜ ದಿನಗಳನ್ನು ಆಟ, ಊಟ, ಪಾಠ, ತಮಾಷೆ, ಕಾಲೆಳೆಯುವಿಕೆಯಲ್ಲಿ ಬಾಲ್ಯದ ಸಂಭ್ರಮ ಅನುಭವಿಸುತ್ತಿದ್ದಾರೆ.

ಬಾಲ್ಯವೆಂಬುದು ಪ್ರತಿ ಮನುಷ್ಯನ ಬದುಕಿನಲ್ಲಿ ಎಂದಿಗೂ ಮರೆಯಲಾಗದ ಮಧುರ ನೆನಪು. ದೊಡ್ಡವರಾದ ಬಳಿಕ ‘ಬಾಲ್ಯವೇ ಚೆನ್ನಾಗಿತ್ತು’ ಎಂದು ಪ್ರತಿಸಲವೂ ಅನಿಸುತ್ತದೆ. ಮತ್ತೆ ಆ ದಿನಗಳು ಬಂದರೆ ಬದುಕು ಎಷ್ಟೊಂದು ಸುಂದರವಲ್ಲವೇ? ಎನ್ನುವ ಕಳೆದು ಹೋದ ನೆನಪುಗಳತ್ತ ಮನಸ್ಸು ಜಾರುತ್ತದೆ. ಆದರೆ, ಈಗ ನಗರ ಪ್ರದೇಶಗಳ ಮಕ್ಕಳಿಗೆ, ನಿತ್ಯದ ಒತ್ತಡದ ಬದುಕಿನಲ್ಲಿ ಬಾಲ್ಯವೇ ಇಲ್ಲದಂತಾಗಿದೆ. ಬೆಳಗಾದರೆ ಸಾಕು ಟ್ಯೂಷನ್‌, ಶಾಲೆ, ಮತ್ತೆ ಟ್ಯೂಷನ್‌, ಸಂಗೀತ, ಕ್ರಿಕೆಟ್ ತರಬೇತಿ ಹೀಗೆ ಒಂದಲ್ಲ ಒಂದು ಚಟುವಟಿಕೆಯಲ್ಲಿ ಬಾಲ್ಯ ಸರಿದು ಹೋಗುತ್ತಿದೆ. ನೋಡ ನೋಡುತ್ತಿದ್ದಂತೆಯೇ ‘ಆ ದಿನಗಳು’ ಸುಂದರ ನೆನಪುಗಳಾಗಿ ಉಳಿದುಕೊಂಡು ಬಿಡುತ್ತದೆ.

ಆದರೆ ಗ್ರಾಮೀಣ ಪ್ರದೇಶಗಳ ಮಕ್ಕಳು ಈಗಲೂ ತಮ್ಮ ಬಾಲ್ಯದ ದಿನಗಳನ್ನು ಕಳೆದುಕೊಂಡಿಲ್ಲ. ಲಗೋರಿ, ಗೋಲಿ, ಚಿನ್ನಿ ದಾಂಡ, ಕುಂಟೆ ಪಿಲ್ಲೆ, ಬುಗುರಿ, ಕಣ್ಣಮುಚ್ಚಾಲೆ, ಚನ್ನಮಣೆ ಮತ್ತು ಮರಕೋತಿಯಾಟ ಹೀಗೆ ಹಲವಾರು ಆಟಗಳನ್ನು ಆಡಿ ಹಳ್ಳಿ ಸೊಬಗಿನ ಸಂಭ್ರಮ ಹೆಚ್ಚಿಸುತ್ತಿದ್ದಾರೆ.

ಸೌಲಭ್ಯಗಳ ಕೊರತೆಯೂ ವರದಾನ: ಗ್ರಾಮೀಣ ಪ್ರದೇಶಗಳ ಬಹುತೇಕ ಮಕ್ಕಳ ಪೋಷಕರು ಸ್ಥಿತಿವಂತರಾಗಿರುವುದಿಲ್ಲ. ಆದ್ದರಿಂದ ಅವರಿಗೆಲ್ಲ ತಮ್ಮೂರಿನ ಅಥವಾ ಸುತ್ತಲಿನ ಊರುಗಳ ಸರ್ಕಾರಿ ಶಾಲೆಗಳೇ ಆಸರೆ. ಕೋವಿಡ್‌ ಇಲ್ಲದ ಕಾಲದಲ್ಲಿಯೂ ಶಾಲೆ ಮುಗಿಸಿಕೊಂಡು ಬಂದ ಬಳಿಕ ಅವರ ಬಾಲ್ಯದ ಲೋಕ ಆಟದತ್ತಲೇ ಹೊರಳುತ್ತದೆ. ಕೋವಿಡ್ ಇದ್ದರೂ, ಇಲ್ಲದಿದ್ದರೂ ಈ ‘ಬಾಲ್ಯದ ಲೋಕ’ ಯಾವಾಗಲೂ ಬದಲಾಗುವುದೇ ಇಲ್ಲವೆನ್ನುವಷ್ಟರ ಮಟ್ಟಿಗೆ ಅವರು ತಮ್ಮ ಬಾಲ್ಯದ ದಿನಗಳನ್ನು ಸುಂದರಗೊಳಿಸಿಕೊಂಡು ‘ಬಾಲ್ಯದ ಆಟೊಗ್ರಾಫ್‌’ ಎತ್ತಿಟ್ಟುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕಾಗಿಯೇ ನಾವೆಲ್ಲ ಬೇಸಿಗೆ ರಜೆ ದಿನಗಳು ಬಂದರೆ ಸಾಕು ಅಜ್ಜಿಯ ಊರಿನತ್ತ ಮುಖ ಮಾಡುತ್ತಿದ್ದೆವಲ್ಲವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು