ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಕಾಡುವ ಕಾಲ: ಅಭ್ಯಾಸಕ್ಕೆ ಕೂಡದ ಸಕಾಲ

Last Updated 2 ಅಕ್ಟೋಬರ್ 2021, 18:24 IST
ಅಕ್ಷರ ಗಾತ್ರ

ಅತ್ತ ಉತ್ತರ ಕರ್ನಾಟಕ...ಬೇಸಿಗೆಯಲ್ಲಿ ಮೈಸುಡುವ ಬಿಸಿಲು, ಮಳೆಗಾಲದಲ್ಲಿ ಕೆಲವೊಮ್ಮೆ ಮುಸಲಧಾರೆ. ಚಳಿಗಾಲದಲ್ಲೂ ಕೆಲವು ಕಡೆ ಮಂಜಿನ ಪರದೆ. ಅತ್ತ ಕರಾವಳಿ...ಬೇಸಿಗೆಯಲ್ಲಿ ಬೆವರು ಒರೆಸಿಕೊಳ್ಳುವುದಕ್ಕೇ ಬೇಕು ಒಂದಷ್ಟು ಹೊತ್ತು. ಮಳೆಗಾಲದಲ್ಲಿ ಎಲ್ಲೆಲ್ಲೂ ಹೊಳೆ. ಮಲೆನಾಡಂತೂ ಕೆಲವು ತಿಂಗಳು ‘ಮಳೆನಾಡು’ ಆಗಿಬಿಡುತ್ತದೆ.

‘ಕಾಲ’ದ ಈ ವಿಷಮ ಸ್ಥಿತಿಗೆ ಹೆಚ್ಚು ತೊಂದರೆಗೆ ಒಳಗಾಗುವವರು ಕ್ರೀಡಾಪಟುಗಳು. ಅದರ ಭಾರವೆಲ್ಲ ಕೋಚ್‌ಗಳ ಹೆಗಲ ಮೇಲೆ. ಬಿಸಿಲು ಮತ್ತು ಮಳೆ ರಾಜ್ಯದ ಕ್ರೀಡಾಪಟುಗಳ ಅಭ್ಯಾಸಕ್ಕೆ ಪೆಟ್ಟು ನೀಡುತ್ತಿದೆ. ಇದನ್ನು ಮೀರಿ ನಿಲ್ಲಲು ಒಂದೊಂದು ಭಾಗದಲ್ಲಿ ಒಂದೊಂದು ತಂತ್ರಗಳನ್ನು ಅನುಸರಿಸಲಾಗುತ್ತಿದೆಯಾದರೂ ಒಟ್ಟಾರೆಯಾಗಿ ವೈಜ್ಞಾನಿಕ ಪರಿಹಾರ ಮಾರ್ಗವೊಂದನ್ನು ಕಂಡುಕೊಳ್ಳಲು ಕ್ರೀಡಾ ಇಲಾಖೆಗಾಗಲಿ ತಜ್ಞರಿಗಾಗಲಿ ಸಾಧ್ಯವಾಗಲಿಲ್ಲ.

ಮಳೆ ಮತ್ತು ಬಿಸಿಲಿನಿಂದ ಒಳಾಂಗಣ ಕ್ರೀಡೆಗಳ ಅಭ್ಯಾಸಕ್ಕೆ ಹೆಚ್ಚು ತೊಂದರೆ ಆಗುವುದಿಲ್ಲ. ಆದರೆ ಹೊರಾಂಗಣ ಕ್ರೀಡೆಗಳಿಗೆ ಋತುಮಾನಗಳ ವೈಪರೀತ್ಯ ಭಾರಿ ಪೆಟ್ಟು ನೀಡುತ್ತದೆ. ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾಪಟುಗಳಿಗಂತೂ ಹೆಚ್ಚು ಸಮಸ್ಯೆಯಾಗುತ್ತದೆ. ಮಳೆಗಾಲದಲ್ಲಿ ಕೆಲವು ಕಡೆಗಳಲ್ಲಿ ಅಭ್ಯಾಸ ಮಾಡುವುದೇ ಸವಾಲು. ಅದನ್ನು ಲೆಕ್ಕಿಸದೆ ಮುಂದೆ ನುಗ್ಗಿ ನೋವು–ಗಾಯ ಆದರೆ ಚಿಕಿತ್ಸೆಗೆ ವೈಜ್ಞಾನಿಕ ವಿಧಾನಗಳೂ ಇಲ್ಲ. ಆದ್ದರಿಂದ ಅಂಥ ‘ಸಾಹಸ’ಕ್ಕೆ ಕೈ ಹಾಕಲು ಯಾರೂ ಮುಂದಾಗುತ್ತಿಲ್ಲ. ಇದೆಲ್ಲದರ ನಡುವೆ ‘ಬೆಂಗಳೂರಿನಲ್ಲಿ ಎಲ್ಲವೂ ಇದೆ, ನಮಗೆ ನಿತ್ಯವೂ ಸಂಕಷ್ಟ’ ಎಂಬ ಕೊರಗು ಕೂಡ ಕೇಳಿಬರುತ್ತಿದೆ.

ಸೌಲಭ್ಯ ಇದೆ; ನಿರ್ವಹಣೆ ಇಲ್ಲ

ರಾಜ್ಯದ ಕೆಲವು ಕಡೆಗಳಲ್ಲಿ ಗುಣಮಟ್ಟದ ಕ್ರೀಡಾಂಗಣ, ಟ್ರ್ಯಾಕ್ ಇತ್ಯಾದಿ ಇದ್ದರೂ ನಿರ್ವಹಣೆಯ ಸಮಸ್ಯೆಯಿಂದಾಗಿ ಇದ್ದೂ ಇಲ್ಲದ ಪರಿಸ್ಥಿತಿ. ಉದಾಹರಣೆಗೆ ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇದೆ. ಆದರೆ ‘ವಾಟರಿಂಗ್‌‘ ಸರಿಯಾಗಿ ಆಗದ ಕಾರಣ ಹಾಳಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

‘ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ಸಿಂಥೆಟಿಕ್ ಟ್ರ್ಯಾಕ್ ಸೌಲಭ್ಯ ಒದಗಿಸಲಾಗಿದೆ. ಆದರೆ ನಿರ್ವಹಣೆ ಇಲ್ಲ. ಕ್ರೀಡಾಪಟುಗಳ ಪ್ರತಿಭೆ ಬೆಳಗಬೇಕಾಗಿರುವ ಇದು ಈಗ ವಾಕರ್ಸ್ ಟ್ರ್ಯಾಕ್ ಆಗಿದೆ. ಪ್ರತ್ಯೇಕ ವಾಕಿಂಗ್ ಪಾಥ್ ಇದ್ದರೂ ಜನರು ಟ್ರ್ಯಾಕ್ ಮೇಲೆ ನಡೆಯುತ್ತಾರೆ. ಇದನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ’ ಎನ್ನುತ್ತಾರೆ ಗದಗ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಪ್ರಭು ಪಾಟೀಲ.

‘ಮಲೆನಾಡಿನಲ್ಲಿ ಜೂನ್‌ನಿಂದ ಕೆಲವು ತಿಂಗಳು ಅಭ್ಯಾಸ ಮಾಡುವುದು ತೀರಾ ಕಷ್ಟ. ರಿಸ್ಕ್‌ ತೆಗೆದುಕೊಳ್ಳಲು ಯಾರೂ ಮುಂದಾಗುವುದಿಲ್ಲ. ಬೆಂಗಳೂರಿನಲ್ಲಿ ಇರುವಂತೆ, ಗಾಯದ ನಿರ್ವಹಣೆಗೆ ಕನಿಷ್ಟ ವಿಭಾಗೀಯ ಮಟ್ಟಕ್ಕೆ ಒಂದು ಕೇಂದ್ರವನ್ನು ಆರಂಭಿಸಿದ್ದರೆ ನಿರಾತಂಕವಾಗಿ ಅಭ್ಯಾಸ ಮಾಡಬಹುದಾಗಿತ್ತು’ ಎಂಬುದು ಮಲೆನಾಡಿನ ಜಿಲ್ಲೆಯೊಂದರ ಡಿವೈಇಎಸ್‌ ಕೋಚ್ ಅಭಿಪ್ರಾಯ.

ಪರೀಕ್ಷೆ, ಮಳೆ ಮತ್ತು ಕ್ರೀಡಾ ಕ್ಯಾಲೆಂಡರ್...

ಮಳೆಗಾಲ, ಪರೀಕ್ಷೆಗಳು ಮತ್ತು ಕ್ರೀಡಾಕೂಟಗಳ ವಾರ್ಷಿಕ ಕ್ಯಾಲೆಂಡರ್ ನಡುವೆ ತಾಳೆಯಾಗದೇ ಇರುವುದು ಕೂಡ ಕ್ರೀಡಾ‍ಪಟುಗಳ ಪ್ರತಿಭೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ‘ಫೆಬ್ರುವರಿಯಿಂದ ಜೂನ್‌ ತಿಂಗಳ ವರೆಗೆ ಪರೀಕ್ಷೆ ಮತ್ತಿತರ ಕಾರಣಗಳಿಂದಾಗಿ ಕ್ರೀಡಾ ಅಭ್ಯಾಸಕ್ಕೆ ತೊಂದರೆಯಾಗುತ್ತದೆ. ಜುಲೈ ತಿಂಗಳಲ್ಲಿ ಅಥ್ಲೀಟ್‌ಗಳು ಪೂರ್ಣಪ್ರಮಾಣದಲ್ಲಿ ಕ್ರೀಡೆಗೆ ಲಭ್ಯರಾಗುತ್ತಾರೆ. ಈ ಸಂದರ್ಭದಲ್ಲಿ ಜೋರು ಮಳೆ. ಆದ್ದರಿಂದ ಮತ್ತೆ ಅಡ್ಡಿಯಾಗುತ್ತದೆ‘ ಎಂದು ದಕ್ಷಿಣ ಕನ್ನಡದ ಕೋಚ್ ಒಬ್ಬರು ಹೇಳಿದರು.

‘ಅಂತರರಾಷ್ಟ್ರೀಯ ಕ್ಯಾಲೆಂಡರ್ ಪ್ರಕಾರ ಆಗಸ್ಟ್‌ನಿಂದ ಅಕ್ಟೋಬರ್‌ ವರೆಗೆ ಪ್ರಮುಖ ಕೂಟಗಳು ನಡೆಯುತ್ತವೆ. ಇದಕ್ಕೆ ಸಂಬಂಧಿಸಿದ ಆಯ್ಕೆ ಪ್ರಕ್ರಿಯೆ ಕೆಲವು ತಿಂಗಳ ಹಿಂದೆ ನಡೆಯುತ್ತದೆ. ಮಳೆ–ಬಿಸಿಲು ಕಾಡುತ್ತಿರುವಾಗ ಇದಕ್ಕೆ ಸಮಯ ಹೊಂದಿಸುವುದು ಅನೇಕ ಪ್ರದೇಶಗಳಲ್ಲಿ ಸವಾಲು ಆಗಿ ಪರಿಣಮಿಸುತ್ತದೆ’ ಎಂದು ಅಂತರರಾಷ್ಟ್ರೀಯ ಅಥ್ಲೀಟ್‌, ಹುಬ್ಬಳ್ಳಿಯಲ್ಲಿ ಕೋಚಿಂಗ್ ಮಾಡುತ್ತಿರುವ ವಿಲಾಸ ನೀಲಗುಂದ ಹೇಳುತ್ತಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT