ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ‘ಟ್ರ್ಯಾಕ್‌’ನಲ್ಲಿ ಸೈಕ್ಲಿಂಗ್‌ ಯಾನ...

Last Updated 22 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬಾಗಲಕೋಟೆಯಿಂದ ಆಲಮಟ್ಟಿಗೆ ಹೋಗುವ ದಾರಿಯ ಹಸಿರಾದ ಸುಂದರ ಪರಿಸರದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಜಿದ್ದಿಗೆ ಬಿದ್ದವರಂತೆ ಪೆಡಲ್‌ ತುಳಿಯವವರೇ ಕಾಣುತ್ತಾರೆ. ಈ ಮಾರ್ಗದಲ್ಲಿ ಹಿಂದೆ ಮುಂದೆ ಎಲ್ಲಿ ನೋಡಿದರೂ ಸೈಕಲ್‌ಗಳ ಸದ್ದು.

ಅವರಲ್ಲಿ ಬಹುತೇಕರು ಹವ್ಯಾಸಕ್ಕಾಗಿ ಸೈಕಲ್‌ ಹಿಂದೆ ಓಡಿದವರು. ದೇಹ ಸದೃಢಗೊಳಿಸಲು ವಿಜಯಪುರ ಮತ್ತು ಬಾಗಲಕೋಟೆ ಸುತ್ತಮುತ್ತಲಿನ ಜನ ಸೈಕ್ಲಿಂಗ್‌ ಮೊರೆ ಹೋಗುತ್ತಾರೆ. ರಾಜ್ಯದ ‘ಸೈಕ್ಲಿಂಗ್ ಕಾಶಿ’ ಎಂದೇ ಹೆಸರಾಗಿರುವ ಈ ಜಿಲ್ಲೆಗಳ ಬಹಳಷ್ಟು ಯುವಜನತೆಯ ಆಸೆ, ಕನಸು ಮತ್ತು ಸಾಧನೆಯ ಗುರಿ ಇರುವುದು ಸೈಕ್ಲಿಂಗ್‌ನಲ್ಲಿ. ಹೀಗಾಗಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಈ ಜಿಲ್ಲೆಗಳದ್ದೇ ಪ್ರಾಬಲ್ಯ. ರೈಲ್ವೆಯಲ್ಲಿಯೂ ಇವರದ್ದೇ ಸದ್ದು. ಹೀಗಾಗಿ ರಾಜ್ಯ ಸರ್ಕಾರ ನೀಡುವ ಪ್ರಮುಖ ಕ್ರೀಡಾ ಪ್ರಶಸ್ತಿಗಳನ್ನು ಪಡೆಯುವವರ ಸೈಕ್ಲಿಸ್ಟ್‌ಗಳ ಪಟ್ಟಿಯಲ್ಲಿ ವಿಜಯಪುರ ಮತ್ತು ಬಾಗಲಕೋಟೆಯವರದ್ದೇ ಮೇಲುಗೈ.

ಈ ಬಾರಿ 2017ರಿಂದ 2019ರ ಸಾಲಿನವರೆಗೆ ಮೂರು ವರ್ಷಗಳ ಏಕಲವ್ಯ ಪ್ರಶಸ್ತಿಯನ್ನು ಒಟ್ಟಿಗೆ ನೀಡಲಾಗಿದೆ. ಮೂರೂ ವರ್ಷದ ಸೈಕ್ಲಿಂಗ್‌ ಪ್ರಶಸ್ತಿಗಳು ಬಾಗಲಕೋಟೆ ಜಿಲ್ಲೆಯ ಮೇಘಾ ಗೂಗಾಡ, ವೆಂಕಪ್ಪ ಕೆಂಗಲಗುತ್ತಿ ಮತ್ತು ರಾಜು ಬಾಟಿ ಪಾಲಾಗಿವೆ. ಪ್ರಶಸ್ತಿ ಪಡೆದ ಈ ಮೂವರೂ ಸೈಕ್ಲಿಸ್ಟ್‌ಗಳು ಬಡತನದ ಹಿನ್ನೆಲೆಯಿಂದ ಬಂದವರು. ಸಾಧನೆಯ ಹಸಿವಿಗೆ ನಿತ್ಯದ ನೋವುಗಳನ್ನು ಮರೆತವರು. ಹೀಗಾಗಿ ಮೇಲಿಂದ ಮೇಲೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪದಕಗಳನ್ನು ಗೆಲ್ಲುತ್ತಿದ್ದಾರೆ.

ಜಮಖಂಡಿ ತಾಲ್ಲೂಕಿನ ಕುಲ್ಲಳ್ಳಿ ಗ್ರಾಮದ ಮೇಘಾ ಗೂಗಾಡ ಏಳೆಂಟು ವರ್ಷಗಳ ಹಿಂದೆ ಬಹಳಷ್ಟು ಜನರಿಗೆ ಗೊತ್ತೇ ಇರಲಿಲ್ಲ. 2017ರಲ್ಲಿ ಬಹಾಮಾಸ್‌ನಲ್ಲಿ ನಡೆದ ಆರನೇ ಯೂತ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಅದೇ ವರ್ಷ ಏಷ್ಯಾ ಕ‍ಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ರಾಷ್ಟ್ರೀಯ ಕೂಟದಲ್ಲಿ 15ಕ್ಕೂ ಹೆಚ್ಚು ಪದಕಗಳನ್ನು ಜಯಿಸಿದ್ದಾರೆ. ಮೇಘಾ ಅವರದ್ದು ಕ್ರೀಡಾ ಕುಟುಂಬ. ಅವರ ತಂದೆ ಕಬಡ್ಡಿ ಆಟಗಾರ, ದೊಡ್ಡಪ್ಪ ಕುಸ್ತಿ ಪಟು.

ರೈತ ದಂಪತಿ ಶಿವಪ್ಪ ಹಾಗೂ ಬಾಗವ್ವ ಅವರ ಪುತ್ರ ವೆಂಕಪ್ಪ ಕೆಂಗಲಗುತ್ತಿ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದವರು. ಹವ್ಯಾಸಕ್ಕಾಗಿ ಸೈಕಲ್‌ ಹೊಡೆಯುವುದನ್ನು ಆರಂಭಿಸಿದ ವೆಂಕಪ್ಪ ನಂತರ ವೃತ್ತಿಪರ ಸೈಕ್ಲಿಸ್ಟ್‌ ಆಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. 2019ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್‌ ಕಪ್‌ ಟೂರ್ನಿಯಲ್ಲಿ 10 ಕಿ.ಮೀ. ಸ್ಕ್ರ್ಯಾಚ್ ರೇಸ್ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿದ್ದರು. 2018ರಲ್ಲಿ ನಡೆದ ಏಷ್ಯನ್‌ ಕಪ್‌ ಟೂರ್ನಿಯಲ್ಲಿಯೂ ಎರಡು ಪದಕ ಗೆದ್ದಿದ್ದರು.

ಬೀಳಗಿ ತಾಲ್ಲೂಕಿನ ಟಕ್ಕಳಕಿ ಗ್ರಾಮದ ರಾಜು ಭಾಟಿ 2018ರಲ್ಲಿ ಮೊದಲ ಬಾರಿಗೆ ಏಷ್ಯನ್‌ ಕ್ರೀಡಾಕೂಟಕ್ಕೆ ಅರ್ಹತೆ ‌ಗಳಿಸಿದ್ದರು. ಈ ಸಾಧನೆ ಮಾಡಿದ ರಾಜ್ಯದ ಎರಡನೇ ಸೈಕ್ಲಿಸ್ಟ್‌ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಚಂದ್ರಪ್ಪ ಮಲ್ಲಪ್ಪ ಕುರಣಿ ಅರ್ಹತೆ ಪಡೆದುಕೊಂಡಿದ್ದರು. ಅವರ ಬಳಿಕ ಯಾರೂ ಈ ಸಾಧನೆ ಮಾಡಿರಲಿಲ್ಲ. ದೆಹಲಿಯಲ್ಲಿ 2017ರಲ್ಲಿ ನಡೆದ ಏಷ್ಯಾ ಕಪ್‌ ಟೂರ್ನಿಯ ವೈಯಕ್ತಿಕ ಪರ್ಸ್ಯೂಟ್‌ ವಿಭಾಗದಲ್ಲಿ ಚಿನ್ನ, ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ವಿಶೇಷವೆಂದರೆ ಈ ಸಲದ ಪ್ರಶಸ್ತಿ ಪಡೆದ ಮೂವರೂ ಸೈಕ್ಲಿಸ್ಟ್‌ಗಳು ನೈರುತ್ಯ ರೈಲ್ವೆಯ ಉದ್ಯೋಗಿಗಳು. ವೆಂಕಪ್ಪ ಮತ್ತು ರಾಜು ಬಾಟಿ ಹುಬ್ಬಳ್ಳಿ ವಿಭಾಗದಲ್ಲಿ ಟಿಕೆಟ್ ಪರೀಕ್ಷಕರಾಗಿದ್ದಾರೆ. ಇದೇ ಕಚೇರಿಯಲ್ಲಿ ಮೇಘಾ ಗೂಗಾಡ ಜೂನಿಯರ್‌ ಕ್ಲರ್ಕ್‌ ಆಗಿದ್ದಾರೆ. ಇವರ ಸೈಕ್ಲಿಂಗ್‌ ಸಾಧನೆಯ ಕನಸಿಗೆ ‘ರೈಲ್ವೆ ಟ್ರ್ಯಾಕ್‌’ ರಹದಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT