ಬುಧವಾರ, ಆಗಸ್ಟ್ 12, 2020
21 °C

ಜಿ-ಲೀಗ್ ಕಿಂಗ್ ಆಗುವರೇ ಪ್ರಿನ್ಸ್‌ ಪಾಲ್ ಸಿಂಗ್?

ವಿಕ್ರಂ ಕಾಂತಿಕೆರೆ   Updated:

ಅಕ್ಷರ ಗಾತ್ರ : | |

Prajavani

ಕಣಕಣದಲ್ಲೂ ಇತಿಹಾಸದ ಗಂಧ, ರಕ್ತಚರಿತೆಯ ವಿಷಾದವನ್ನು ಒಳಗೊಂಡಿರುವ ಮಣ್ಣು, ಪಂಜಾಬ್‌ನ ಫಿರೋಜ್‌ಪುರ್ ಜಿಲ್ಲೆಯ ಫಿರೋಜ್‌ಪುರ್ ನಗರ. ಸಟ್ಲೆಜ್ ನದಿಯ ನೀರುಂಡು ಬೆಳೆದಿರುವ, ಆರು ಶತಮಾನಗಳಷ್ಟು ಹಳೆಯ ಈ ನಗರದಲ್ಲಿ ಈಗ ಎದ್ದು ಕಾಣುವುದು ಯೋಧರ ಸ್ಮಾರಕಗಳು. ಇಂಥ ವೀರಭೂಮಿಯಿಂದ ಕ್ರೀಡಾಕಣಕ್ಕೆ ಧುಮುಕಿದವರು ಪ್ರಿನ್ಸೆಪಾಲ್ ಸಿಂಗ್.

ಸತ್ನಾಮ್ ಸಿಂಗ್, ಅಮ್ಜೋತ್ ಸಿಂಗ್ ಮತ್ತು ಪಲ್‌ಪ್ರೀತ್ ಸಿಂಗ್ ಅವರ ಸಾಧನೆಯ ಹಾದಿಯಲ್ಲೇ ಸಾಗಿರುವ ಪ್ರಿನ್ಸೆಪಾಲ್ ಭಾರತ ಬ್ಯಾಸ್ಕೆಟ್‌ಬಾಲ್‌ನಲ್ಲಿ ಮತ್ತೊಂದು ಹೆಜ್ಜೆ ಗುರುತು ಮೂಡಿಸಿದ್ದಾರೆ. ಹೌದು ಅಮೆರಿಕದ ಖ್ಯಾತ ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಕಾಡೆಮಿಯ (ಎನ್‌ಬಿಎ) ಜಿ–ಲೀಗ್‌ನಲ್ಲಿ ಆಡಲು ಆಯ್ಕೆಯಾಗಿ ಅವರು ಗಮನ ಸೆಳೆದಿದ್ದಾರೆ. ಜಿ–ಲೀಗ್‌ಗೆ ಭಾರತದಿಂದ ಆಯ್ಕೆಯಾಗಿರುವವರೆಲ್ಲರೂ ಪಜಾಬ್‌ನವರು ಎಂಬುದು ಗಮನಾರ್ಹ. ಸತ್ನಾಮ್ ಸಿಂಗ್ ಲುಧಿಯಾನದವರು. ಅಮ್ಜೋತ್ ಸಿಂಗ್ ಚಂಡೀಗಢದವರು ಮತ್ತು ಪಲ್‌ಪ್ರೀತ್ ಸಿಂಗ್ ಮುಕ್ತ್‌ಸರ್ ಸಾಹೀಬ್ ಜಿಲ್ಲೆಯವರು.

19 ವರ್ಷದ ಪ್ರಿನ್ಸೆಪಾಲ್ ಸಿಂಗ್‌ ವಾಲಿಬಾಲ್‌ ಆಡುತ್ತ ಬೆಳೆದವರು. 13ನೇ ವಯಸ್ಸಿನಲ್ಲಿ ವಾಲಿಬಾಲ್ ಅಕಾಡೆಮಿಯೊಂದನ್ನು ಸೇರಿಕೊಳ್ಳಲು ಲುಧಿಯಾನಕ್ಕೆ ತೆರಳಿದ್ದು ಅವರ ಬದಕಿನ ದಿಸೆಯನ್ನೇ ಬದಲಿಸಿತು. ಲುಧಿಯಾನ ಬ್ಯಾಸ್ಕೆಟ್‌ಬಾಲ್ ಅಕಾಡೆಮಿಯ ಕೋಚ್ ಜೈಪಾಲ್ ಸಿಂಗ್ ಅವರು ಪ್ರಿನ್ಸೆಪಾಲ್‌ಗೆ ಬ್ಯಾಸ್ಕೆಟ್‌ಬಾಲ್‌ನ ರುಚಿ ಹತ್ತಿಸಿದರು. ನಂತರದ ಬೆಳವಣಿಗೆ ಕ್ಷಿಪ್ರವಾಗಿತ್ತು. ಈಚೆಗೆ ಎನ್‌ಬಿಎ ಭಾರತದಲ್ಲೂ ಅಕಾಡೆಮಿ ಆರಂಭಿಸಿದ್ದರಿಂದ ಪ್ರಿನ್ಸೆಪಾಲ್‌ಗೆ ಅನುಕೂಲವಾಯಿತು. ಅಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರಿಂದ ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿರುವ ಎನ್‌ಬಿಎ ಜಾಗತಿಕ ಅಕಾಡೆಮಿಗೆ ಬುಲಾವ್ ಬಂತು. ಅಲ್ಲಿಯೂ ಮಿಂಚಿದ್ದರಿಂದ ಜಿ–ಲೀಗ್‌ನ ಬಾಗಿಲು ತೆರೆಯಿತು.

ಈ ಹಿಂದೆ ಡಿ–ಲೀಗ್ ಆಗಿದ್ದ ಜಿ–ಲೀಗ್‌ ಎನ್‌ಬಿಎಗೆ ನೀಡಿರುವ ಕಾಣಿಕೆ ಕಡಿಮೆಯೇನಲ್ಲ. ಎನ್‌ಬಿಎಯ ಪ್ರಮುಖ ಆಟಗಾರರ ಪೈಕಿ ಬಹುತೇಕರು ಜಿ–ಲೀಗ್‌ನಲ್ಲಿ ಬೆಳೆದವರೇ. ಹೀಗಾಗಿ ಪ್ರಿನ್ಸೆಪಾಲ್ ಸಿಂಗ್‌ ಮೇಲೆಯೂ ಭರವಸೆ ಹೆಚ್ಚಿದೆ. ಈ ಬಾರಿ ಆಯ್ಕೆಯಾದ 21 ಮಂದಿ ಪೈಕಿ  ಭಾರತದ ಈ ಆಟಗಾರನ ಭವಿಷ್ಯ ಏನಾಗುತ್ತದೆ ಎಂಬುದು ಮುಂದಿರುವ ಕುತೂಹಲ.

‘ಅರ್ಪಣಾ ಭಾವದಿಂದ ಪರಿಪೂರ್ಣವಾಗಿ ನನ್ನನ್ನು ತೊಡಗಿಸಿಕೊಂಡು ಸಾಮರ್ಥ್ಯ ಪ್ರದರ್ಶಿಸಲಿದ್ದೇನೆ. ಎದೆಗಾರಿಕೆಯಿಂದ ಆಡಬೇಕು. ಶೂಟ್‌ಗಳು ನಿಖರವಾಗಬೇಕು. ಎಲ್ಲವೂ ಅಂದುಕೊಂಡಂತೆ ಆದರೆ ಎರಡು ವರ್ಷಗಳಲ್ಲಿ ಮಹತ್ತರ ಸಾಧನೆ ಆಗಲಿದೆ’  ಎಂಬುದು 6‘10‘‘ ಎತ್ತರದ ಈ ಆಟಗಾರನ ಭರವಸೆಯ ನುಡಿಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು