ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಕೊಳದ ಮೀನಿಗೆ ಫಿಶ್‌ ಫ್ರೈ ಇಷ್ಟ!

Last Updated 5 ಜುಲೈ 2020, 19:30 IST
ಅಕ್ಷರ ಗಾತ್ರ

‘ಈಜುಕೊಳದ ಚಿಟ್ಟೆ’... ‘ಚಿನ್ನದ ಮೀನು’ ಎಂದೇ ಕನ್ನಡಿಗರ ಮನೆಮಾತಾಗಿರುವ ಪ್ರತಿಭಾನ್ವಿತೆ ದಾಮಿನಿ ಗೌಡ.

ಏಳನೇ ವಯಸ್ಸಿನಲ್ಲಿ ಈಜುಕೊಳಕ್ಕೆ ಧುಮುಕಿದ್ದ ದಾಮಿನಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ
ಈಜು ಚಾಂಪಿಯನ್‌ಷಿಪ್‌ಗಳಲ್ಲಿ ಗೆದ್ದ ಪದಕಗಳು ಅಪಾರ. ಬಟರ್‌ ಫ್ಲೈ ವಿಭಾಗದಲ್ಲಿ ಪರಿಣತಿ ಸಾಧಿಸಿರುವ
ಅವರು ಏಷ್ಯಾ ಈಜು ಚಾಂಪಿಯನ್‌ಷಿಪ್, ದಕ್ಷಿಣ ಏಷ್ಯಾ ಕ್ರೀಡಾಕೂಟ ಸೇರಿದಂತೆ ಪ್ರಮುಖ ಚಾಂಪಿಯನ್‌
ಷಿಪ್‌ಗಳಲ್ಲಿ ಹಲವು ದಾಖಲೆಗಳೊಂದಿಗೆ ಚಿನ್ನದ ಪದಕಗಳನ್ನು ಬೇಟೆಯಾಡಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್‌) ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿರುವ 21ರ ಹರೆಯದ ದಾಮಿನಿ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ಕೊರೊನಾದಿಂದಾಗಿ ಈಜು ಚಟುವಟಿಕೆಗಳು ಸ್ಥಗಿತಗೊಂಡಿವೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಈಜುಕೊಳಗಳಲ್ಲಿ ಬಳಕೆಯಾಗುವ ನೀರು ಕ್ಲೋರಿನ್‌ಯುಕ್ತವಾಗಿರುತ್ತದೆ. ಅದರೊಳಗೆ ವೈರಸ್‌ ಇರುವುದಿಲ್ಲ. ಹೀಗಾಗಿ ಅಭ್ಯಾಸ ನಡೆಸಲು ಯಾವುದೇ ತೊಂದರೆ ಇಲ್ಲ. ಆದರೆ ಈಜುಕೊಳದ ಹೊರಗೆ ಪರಸ್ಪರ ಮಾತನಾಡುವಾಗ ಅಥವಾ ಸ್ನಾನದ ಕೊಠಡಿಗಳನ್ನು ಬಳಸುವಾಗ ಸೋಂಕು ಹರಡುವ ಅಪಾಯವಿರುತ್ತದೆ. ಹೀಗಾಗಿಯೇ ಸರ್ಕಾರವು ಈಜು ಚಟುವಟಿಕೆಗಳನ್ನು ಪುನರಾರಂಭಿಸಲು ಅನುಮತಿ ನೀಡಿಲ್ಲ. ಈಗ ಪರಿಸ್ಥಿತಿ ಗಂಭೀರವಾಗಿದೆ. ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಇಂತಹ ಸಮಯದಲ್ಲಿ ಈಜುಕೊಳಗಳನ್ನು ತೆರೆಯದೆ ಇರುವುದೇ ಒಳಿತು.

*ಒಲಿಂಪಿಕ್ಸ್‌ ವರ್ಷದಲ್ಲೇ ಕೊರೊನಾ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದರಿಂದ ಕ್ರೀಡಾಪಟುಗಳಿಗೆ ಹಿನ್ನಡೆ ಉಂಟಾಗುವುದಿಲ್ಲವೇ?

ಇಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಮನುಷ್ಯನ ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ. ಒಲಿಂಪಿಕ್ಸ್‌ ವರ್ಷದಲ್ಲೇ ಹೀಗಾಗಿರುವುದರಿಂದ ಕ್ರೀಡಾಪಟುಗಳು ಅಭ್ಯಾಸದಿಂದ ದೂರ ಉಳಿಯಬೇಕಾಗಿದೆ. ನಮ್ಮ ಎದುರು ಈಗ ಬೇರೆ ಹಾದಿಯೇ ಇಲ್ಲ. ಎಲ್ಲರೂ ಮನೆಯಲ್ಲೇ ಇದ್ದು ಕೊರೊನಾ ವಿರುದ್ಧ ಹೋರಾಡಬೇಕು.

*ಈಜಿನಲ್ಲಿ ಎತ್ತರದ ಸಾಧನೆ ಮಾಡಬೇಕೆಂಬ ಕನಸು ಚಿಗುರೊಡೆದದ್ದು ಹೇಗೆ?

ಶಾಲಾ ದಿನಗಳಲ್ಲಿ ಹೆಚ್ಚಾಗಿ ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಟೆನಿಸ್‌ನಲ್ಲಿ ಹೆಜ್ಜೆಗುರುತು ಮೂಡಿಸುವ ಬಯಕೆಯೂ ಇತ್ತು. ಚಿಕ್ಕವಳು ಎಂಬ ಕಾರಣಕ್ಕೆ ಅಕಾಡೆಮಿಗೆ ಸೇರಿಸಿಕೊಳ್ಳಲಿಲ್ಲ. ಹೀಗಾಗಿ ಈಜಿನತ್ತ ಮುಖ ಮಾಡಿದೆ. ಕ್ರಮೇಣ ಈ ಕ್ರೀಡೆಯ ಮೇಲಿನ ವ್ಯಾಮೋಹ ಹೆಚ್ಚಾಯಿತು. ಹೀಗಾಗಿ ಇದರಲ್ಲೇ ಏನಾದರೂ ಸಾಧಿಸಬೇಕೆಂದು ನಿರ್ಧರಿಸಿದೆ.

*ಲಾಕ್‌ಡೌನ್‌ ಸಮಯವನ್ನು ಹೇಗೆ ಕಳೆಯುತ್ತಿದ್ದೀರಿ?

ಈಗ ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಆದ್ದರಿಂದ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದ್ದಾರೆ. ಬೆಳಿಗ್ಗೆ 10ಗಂಟೆಯಿಂದ ತರಗತಿಗಳಲ್ಲಿ ಭಾಗವಹಿಸುತ್ತೇನೆ.

ಮೊದಲೆಲ್ಲಾ ಅಭ್ಯಾಸ, ಜಿಮ್‌, ಕಾಲೇಜು ಹೀಗೆ ಒಂದಾದ ಮೇಲೊಂದು ಚಟುವಟಿಕೆಗಳಲ್ಲಿ
ಪಾಲ್ಗೊಳ್ಳುತ್ತಿದ್ದೆ. ಹೀಗಾಗಿ ಸಮಯ ಸರಿದು ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಕೊರೊನಾದಿಂದಾಗಿ ಸುದೀರ್ಘ ಬಿಡುವು ಸಿಕ್ಕಿದೆ. ಸದ್ಯಕ್ಕೆ ಯಾವ ಟೂರ್ನಿ ಗಳೂ ಇಲ್ಲವಾದ್ದರಿಂದ ಆದಷ್ಟು ಹೆಚ್ಚು ಸಮಯ ನಿದ್ರಿಸುತ್ತಿ ದ್ದೇನೆ. ಅಮೆಜಾನ್‌ ಪ್ರೈಂ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತೇನೆ.

*ಸಿನಿಮಾ ನೋಡುವ ಹವ್ಯಾಸ ಇದೆಯೇ?

ಕಾಮಿಡಿ ಹಾಗೂ ಹಾರರ್‌ ಸಿನಿಮಾಗಳನ್ನು ಹೆಚ್ಚು ವೀಕ್ಷಿಸುತ್ತೇನೆ. ಅಕ್ಷಯ್‌ ಕುಮಾರ್‌ ಮತ್ತು ಶ್ರೀದೇವಿ ಬಲು ಇಷ್ಟ. ಇತರ ಬಾಲಿವುಡ್‌ ನಟರಿಗಿಂತಲೂ ಅಕ್ಷಯ್‌ ತುಂಬಾ ಭಿನ್ನ. ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ಜಿಮ್‌ನಲ್ಲಿ ಕಸರತ್ತು ನಡೆಸುತ್ತಾರೆ. ಪ್ರತಿ ಸಿನಿಮಾದಲ್ಲೂ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸುತ್ತಾರೆ.

*ನಿಮ್ಮ ಇಷ್ಟದ ಆಹಾರ?

ಕೋಳಿ ಮಾಂಸ ಹಾಗೂ ಸಮುದ್ರದ ಮೀನಿನಿಂದ ತಯಾರಿಸಿದ ಎಲ್ಲಾ ಖಾದ್ಯಗಳೂ ನನಗಿಷ್ಟ. ಮನೆಯಲ್ಲಿ ಅಮ್ಮ ಮಾಡಿದ ಅಡುಗೆಯನ್ನು ಬಾಯಿ ಚಪ್ಪರಿಸಿಕೊಂಡು ಸೇವಿಸುತ್ತೇನೆ. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಹೋಟೆಲ್‌ನಲ್ಲಿ‌ ಊಟ ಮಾಡುತ್ತೇನೆ. ಇತಿ ಮಿತಿಯಲ್ಲಿ ‘ಜಂಕ್‌ ಫುಡ್‌’ ಕೂಡ ತಿನ್ನುತ್ತೇನೆ.

*ನೀವು ಯಾವತ್ತಾದರೂ ಅಡುಗೆ ಮಾಡಿ ಮನೆಯವರಿಗೆ ಬಡಿಸಿದ್ದೀರಾ?

ನನಗೆ ಅಡುಗೆ ಮಾಡೊದಕ್ಕೆ ಬರೊಲ್ಲ. ಅದರಲ್ಲಿ ಆಸಕ್ತಿ ಇಲ್ಲದಿದ್ದ ಮೇಲೆ ಪ್ರಯೋಗಕ್ಕೆ ಕೈ ಹಾಕಬಾರದು. ಹೀಗಾಗಿ ಅಡುಗೆ ಮನೆಯಿಂದ ದೂರವೇ ಇರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT