ಜರ್ಮನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಪ್ರಣಯ್, ಲಕ್ಷ್ಯ ಸೇನ್ ಶುಭಾರಂಭ

ಮುಲ್ಹೆಮ್ ಆ್ಯನ್ ಡರ್ ರುಹ್ರ್, ಜರ್ಮನಿ: ವಿಶ್ವ ಚಾಂಪಿಯನ್‌ಷಿಪ್ ಕ್ವಾರ್ಟರ್‌ಫೈನಲಿಸ್ಟ್, ಭಾರತದ ಎಚ್.ಎಸ್. ಪ್ರಣಯ್ ಅವರು ಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಮಂಗಳವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಹಣಾಹಣಿಯಲ್ಲಿ ಪ್ರಣಯ್ 21–14, 21–19ರಿಂದ ಹಾಂಗ್‌ಕಾಂಗ್‌ನ ಎನ್‌ಜಿ ಕಾ ಲಾಂಗ್ ಆ್ಯಗ್ನಸ್ ಅವರನ್ನು ಪರಾಭವಗೊಳಿಸಿದರು. ಕೇವಲ 40 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿ ಹೋರಾಟದಲ್ಲಿ ಭಾರತದ ಆಟಗಾರನಿಗೆ ಜಯ ಒಲಿಯಿತು.
ಪ್ರಣಯ್ ಅವರಿಗೆ ಮುಂದಿನ ಸುತ್ತಿನಲ್ಲಿ ಇಂಡೊನೇಷ್ಯಾದ ಶೇಸರ್ ಹಿರೇನ್ ರುಸ್ತಾವಿಟೊ ಅಥವಾ ಮಲೇಷ್ಯಾದ ಲೀ ಚೆಕ್ ಯು ಸವಾಲು ಎದುರಾಗಲಿದೆ.
ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಇನ್ನೊಂದು ಹಣಾಹಣಿಯಲ್ಲಿ ಲಕ್ಷ್ಯ ಸೇನ್ ಅವರು 21–6, 22–20ರಿಂದ ಥಾಯ್ಲೆಂಡ್‌ನ ಕಾಂತಪೋನ್ ವಾಂಗ್‌ಚರೊನ್ ಎದುರು ಗೆದ್ದರೆ, ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೈನಾ ನೆಹ್ವಾಲ್ 21-15 17-21 21-14ರಿಂದ ಸ್ಪೇನ್‌ನ ಕ್ಲಾರಾ ಅಜುರ್‌ಮೆಂಡಿ ವಿರುದ್ಧ ಜಯಿಸಿದ್ದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಧ್ರುವ ಕಪಿಲ ಮತ್ತು ಗಾಯತ್ರಿ ಗೋಪಿಚಂದ್ ಅವರು ವೀರೋಚಿತ ಹೋರಾಟ ತೋರಿದರೂ 19–21, 19–21ರಿಂದ ಇಂಡೊನೇಷ್ಯಾದ ಅದ್ನಾನ್ ಮೌಲಾನ ಮತ್ತು ಮಿಚೆಲ್ಲೆ ಕ್ರಿಸ್ಟೈನ್ ಬ್ಯಾಂಡಸೊ ಎದುರು ಎಡವಿದರು. ಹರಿತಾ ಮನಳಿಯಿಲ್ ಹರಿನಾರಾಯಣ್– ಆಶಾ ರಾಯ್ ಜೋಡಿಯು 9-21, 10-21ರಿಂದ ಇಟಲಿಯ ಮಾರ್ಟಿನಾ ಕೊರ್ಸಿನಿ– ಜುಡಿತ್ ಮೈರ್ ಅವರಿಗೆ ಮಣಿದರು.
ಮಿಶ್ರ ಡಬಲ್ಸ್ ವಿಭಾಗದ ಇನ್ನುಳಿದ ಹಣಾಹಣಿಗಳಲ್ಲಿ ಇಶಾನ್ ಭಟ್ನಾಗರ್– ತನಿಶಾ ಕ್ರಾಸ್ತೊ 19–21, 22–20, 9–21ರಿಂದ ಇಂಗ್ಲೆಂಡ್‌ನ ಗ್ರೆಗರಿ ಮೈರ್ಸ್ ಮತ್ತು ಜೆನ್ನಿ ಮೋರ್ ಅವರಿಗೆ, ಎಂ.ಆರ್. ಅರ್ಜುನ್– ತ್ರಿಶಾ ಜೋಲಿ 9-21, 18-21ರಿಂದ ಫ್ರಾನ್ಸ್‌ನ ಥೊಮ್ ಜಿಕ್ವೆಲ್– ಡಾಲ್ಫಿನ್ ಡೆಲ್ರೆ ಎದುರು ನಿರಾಸೆ ಅನುಭವಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.