ಶುಕ್ರವಾರ, ಜುಲೈ 30, 2021
28 °C

ಪ್ರಶಸ್ತಿಗೆ ಆಯ್ಕೆ ಮಾಡುವಾಗ ಚೆಸ್ ಕೋಚ್‌ಗಳ ಕಡೆಗಣನೆಗೆ ಬೇಸರ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ದೇಶಕ್ಕಾಗಿ ಪ್ರಶಸ್ತಿ ಗಳಿಸಿಕೊಟ್ಟ ಆಟಗಾರರನ್ನು ತಯಾರು ಮಾಡಿದರೂ ಭಾರತದಲ್ಲಿ ಚೆಸ್ ಕೋಚ್‌ಗಳಿಗೆ ಅರ್ಹ ಗೌರವ ಸಿಗುತ್ತಿಲ್ಲ. ರಾಷ್ಟ್ರೀಯ ಪ್ರಶಸ್ತಿಗಳಿಗೆ ಅವರನ್ನು ಪರಿಗಣಿಸುವುದೇ ಇಲ್ಲ...

ಗ್ರ್ಯಾಂಡ್‌ಮಾಸ್ಟರ್, ಚೆನ್ನೈನ ಆರ್‌.ಬಿ.ರಮೇಶ್ ಅವರ ಬೇಸರದ ನುಡಿಗಳು ಇವು. ಭಾರತ ಚೆಸ್ ಫೆಡರೇಷನ್‌ನ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಅವರು ಕಳೆದ ಮಂಗಳವಾರ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೆಲ ಅನ್ಯ ವ್ಯಕ್ತಿಗಳು ಆಯ್ಕೆ ಸಮಿತಿಯ ಕಾರ್ಯಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿ ಅವರು ಸ್ಥಾನ ತೊರೆದಿದ್ದರು.

ಯುವ ಚೆಸ್ ಪಟುಗಳಾದ ಆರ್.ಪ್ರಜ್ಞಾನಂದ, ಅವರ ಸಹೋದರಿ ವೈಶಾಲಿ, ರಾಷ್ಟ್ರೀಯ ಚಾಂಪಿಯನ್ ಅರವಿಂದ ಚಿದಂಬರಂ, ಕಾರ್ತಿಕೇಯನ್ ಮುರಳಿ ಮುಂತಾದವರ ಕೋಚ್ ಕೂಡ ಆಗಿರುವ ರಮೇಶ್ ‘ಪ್ರಶಸ್ತಿಗಳಿಗೆ ಪರಿಗಣಿಸುವಾಗ ಚೆಸ್ ಕೋಚ್‌ಗಳ ಹೆಸರು ಕೇಳಿಬರುವುದೇ ಇಲ್ಲ. ಈಚಿನ ಒಂದೂವರೆ ದಶಕದಲ್ಲಿ ನನಗಾಗಲಿ ನನ್ನ ಸಮಕಾಲೀನ ಇತರ ಕೋಚ್‌ಗಳಿಗಾಗಲಿ ಕೇಂದ್ರ ಸರ್ಕಾರದ ಯಾವುದೇ ಪ್ರಶಸ್ತಿ ಸಂದಿಲ್ಲ’ ಎಂದು ಸರಣಿ ಟ್ವೀಟ್‌ಗಳಲ್ಲಿ ದೂರಿದ್ದಾರೆ.

‘15 ವರ್ಷಗಳ ಸಾಧನೆಯನ್ನು ಮುಂದಿಟ್ಟಿರುವ ಅವರು 34 ವಿಶ್ವ ಯೂತ್ ಪ್ರಶಸ್ತಿಗಳು, 40 ಏಷ್ಯನ್ ಯೂತ್ ಪ್ರಶಸ್ತಿಗಳು, 23 ಕಾಮನ್‌ವೆಲ್ತ್‌ ಪ್ರಶಸ್ತಿಗಳು, 36 ರಾಷ್ಟ್ರೀಯ ಪ್ರಶಸ್ತಿಗಳು, ಐದು ಏಷ್ಯನ್ ಸೀನಿಯರ್ ಪ್ರಶಸ್ತಿಗಳು ಮತ್ತು ಚೆಸ್ ಒಲಿಂಪಿಯಾಡ್‌ನಲ್ಲಿ ಕಂಚಿನ ಪದಕಗಳನ್ನು ಗಳಿಸಿಕೊಟ್ಟಿರುವ ಕೋಚ್‌ಗಳಿಗೆ ದಕ್ಕಿದ್ದು ಏನೂ ಇಲ್ಲ. ಇದೇನಾ ನಮ್ಮ ಕ್ರೀಡಾ ನೀತಿ’ ಎಂದು ಪ್ರಶ್ನಿಸಿದ್ದಾರೆ. 

ಭಾರತದಲ್ಲಿ ಈ ಹಿಂದೆ ಸಂಭಾವನೆ ನೀಡುವುದರಲ್ಲೂ ತಾರತಮ್ಯ ಮಾಡಲಾಗುತ್ತಿತ್ತು. ವಿದೇಶಿ ಕೋಚ್‌ಗಳಿಗೆ ನೀಡುತ್ತಿದ್ದಷ್ಟು ಹಣವನ್ನು ದೇಶಿ ಕೋಚ್‌ಗಳಿಗೆ ಕೊಡುತ್ತಿರಲಿಲ್ಲ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಕ್ರೀಡಾ ಇಲಾಖೆ ಈಚೆಗೆ ಭಾರತದ ಕೋಚ್‌ಗಳಿಗೆ ₹ 2 ಲಕ್ಷ ವೇತನ ನೀಡಲು ನಿರ್ಧರಿಸಿತ್ತು. ಈ ಮೂಲಕ ಸಮಾನ ವೇತನ ನೀತಿ ಜಾರಿಗೆ ತಂದಿತ್ತು.

‘ವಿದೇಶಿ ಕೋಚ್‌ಗಳು ತರಬೇತಿ ನೀಡುವ ಅದೇ ಗುಂಪಿನ ಆಟಗಾರರಿಗೆ ತರಬೇತಿ ನೀಡಿದ ನನಗೆ ಕಳೆದ ವರ್ಷ ಸಿಕ್ಕಿದ ವೇತನ ತೀರಾ ಕಡಿಮೆ. ಅವರಿಗೆ ಕೊಡುವ ಮೊತ್ತದ ಹತ್ತನೇ ಒಂದು ಭಾಗದಷ್ಟು ಮಾತ್ರ ನನಗೆ ಸಿಗುತ್ತಿತ್ತು. ಮುಂಬೈನಲ್ಲಿ ನಡೆದಿದ್ದ ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಕೆನಡಾ ತಂಡಕ್ಕೆ ತರಬೇತಿ ನೀಡುವಂತೆ ನನಗೆ ಆಹ್ವಾನ ಬಂದಿತ್ತು. ಆದರೆ ನಾನು ಭಾರತ ತಂಡವನ್ನು ಬಿಟ್ಟು ಹೋಗಲಿಲ್ಲ. ಎಲ್ಲ ಕೋಚ್‌ಗಳೂ ಹೀಗೆಯೇ ಮಾಡಬೇಕೆಂದೇನೂ ಇಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಕೇಂದ್ರ ಕ್ರೀಡಾ ಇಲಾಖೆಯು ಚೆಸ್‌ನಲ್ಲಿ ತೊಡಗಿಸಿಕೊಂಡವರ ಜೊತೆ ಮಾತುಕತೆಗೆ ಮುಂದಾಗಬೇಕು. ಇಲ್ಲವಾದರೆ ಈ ಕ್ಷೇತ್ರದಲ್ಲಿ ಯಾವ ಬದಲಾವಣೆಯೇ ಆಗದು’ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಚೆಸ್ ಫೆಡರೇಷನ್ ಎರಡು ಹೋಳಾಗಿದೆ. ಒಂದು ವಿಭಾಗವನ್ನು ಅಧ್ಯಕ್ಷ ಪಿ.ಆರ್.ವೆಂಕಟರಾಮ ರಾಜ ಮುನ್ನಡೆಸುತ್ತಿದ್ದು ಮತ್ತೊಂದರ ಮುಖ್ಯಸ್ಥ ಭರತ್ ಸಿಂಗ್ ಚೌಹಾಣ್. ಆನ್‌ಲೈನ್ ಚೆಸ್ ಒಲಿಂಪಿಯಾಡ್‌ಗೆ ತಂಡವನ್ನು ಆಯ್ಕೆ ಮಾಡುವ ವಿಷಯದಲ್ಲಿ ಫೆಡರೇಷನ್‌ನಲ್ಲಿ ಜಗಳ ಆರಂಭಗೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು