ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics | ಶೂಟೌಟ್‌ನಲ್ಲಿ ನೆದರ್ಲೆಂಡ್ಸ್ ಹೊರದಬ್ಬಿದ ಆಸ್ಟ್ರೇಲಿಯಾ

ಒಲಿಂಪಿಕ್ಸ್‌ ಪುರುಷರ ಹಾಕಿ ಕ್ವಾರ್ಟರ್‌ಫೈನಲ್‌
Last Updated 1 ಆಗಸ್ಟ್ 2021, 6:31 IST
ಅಕ್ಷರ ಗಾತ್ರ

ಟೋಕಿಯೊ: ಪೆನಾಲ್ಟಿ ಶೂಟೌಟ್‌ ಮೂಲಕ ನಾಟಕೀಯ ಅಂತ್ಯಕಂಡ ಪಂದ್ಯದಲ್ಲಿ ಪ್ರಬಲ ನೆದರ್ಲೆಂಡ್ಸ್ ಮೇಲೆ ಜಯಗಳಿಸಿದ ಆಸ್ಟ್ರೇಲಿಯಾ ತಂಡ ಒಲಿಂಪಿಕ್ಸ್ ಪುರುಷರ ಹಾಕಿಯಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿತು.

ನಿಗದಿತ ಅವಧಿಯ ಪಂದ್ಯ 2–2 ಗೋಲುಗಳಿಂದ ಸಮಬಲವಾದ ನಂತರ ಆಸ್ಟ್ರೇಲಿಯಾ ಶೂಟ್‌ಔಟ್‌ನಲ್ಲಿ 3–0 ಯಿಂದ ಜಯಗಳಿಸಿ, ನೆದರ್ಲೆಂಡ್ಸ್‌ ತಂಡವನ್ನು ಹೊರದೂಡಿತು. ಮಂಗಳವಾರ ನಿಗದಿ ಆಗಿರುವ ಸೆಮಿಫೈನಲ್‌ನಲ್ಲಿ ಕೂಕಬುರಾ ಪಡೆ ಜರ್ಮನಿ ಎದುರು ಆಡಲಿದೆ.

ಇದಕ್ಕೆ ಮೊದಲು ಜರ್ಮನಿ ತಂಡದವರು ಕ್ವಾರ್ಟರ್‌ ಫೈನಲ್‌ನಲ್ಲಿ ರಿಯೊ ಒಲಿಂಪಿಕ್ಸ್‌ ಚಾಂಪಿಯನ್‌ ಅರ್ಜೆಂಟಿನಾ ತಂಡವನ್ನು 3–1 ಗೋಲುಗಳಿಂದ ಸೋಲಿಸಿದ್ದರು.

ಕಾಂಗರೂ ಪಡೆ ಟಾಮ್‌ ವಿಕ್ಹಾಮ್‌ ಗಳಿಸಿದ ಗೋಲುಗಳಿಂದ ಎರಡು ಬಾರಿ ಮುನ್ನಡೆ ಸಾಧಿಸಿತ್ತು. ಆದರೆ ಛಲಬಿಡದ ನೆದರ್ಲೆಂಡ್ಸ್‌ ಮಿಂಕ್‌ ವಾನ್‌ ಡೆರ್‌ ವೀರ್ಡೆನ್‌ ಮತ್ತು ಜೆರೊನ್‌ ಹರ್ಟ್ಸ್‌ಬರ್ಜರ್‌ ಗಳಿಸಿದ ಗೋಲಿನಿಂದ ತಿರುಗೇಟು ನೀಡಿ ಪಂದ್ಯ ಸಮಬಲವಾಗುವಂತೆ ನೋಡಿಕೊಂಡಿತು.

ಒಲಿಂಪಿಕ್ಸ್‌ ಇತಿಹಾಸದಲ್ಲೇ 2016ರಲ್ಲಿ ಮೊದಲ ಬಾರಿ ಹಾಕಿ ಚಿನ್ನ ಗೆದ್ದುಕೊಂಡಿದ್ದ ಅರ್ಜೆಂಟಿನಾ ಆ ತಂಡದಲ್ಲಿದ್ದ ಕೆಲವು ಮಂದಿಯನ್ನು ಇಲ್ಲೂ ಉಳಿಸಿಕೊಂಡಿತ್ತು. 42 ವರ್ಷದ ಗೋಲ್‌ಕೀಪರ್‌ ವಿವಾಲ್ಡಿ ಸೇರಿದಂತೆ ನಾಲ್ವರು ಆಟಗಾರರು ಟೋಕಿಯೊ ತಂಡಕ್ಕೂ ಆಯ್ಕೆಯಾಗಿದ್ದರು.


19ನೇ ನಿಮಿಷ ಲುಕಾಸ್‌ ವಿಂಡ್‌ಫೆಡರ್ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿ ಜರ್ಮನಿಗೆ ಮುನ್ನಡೆ ಒದಗಿಸಿಕೊಟ್ಟರು. ಕಾರ್ನರ್‌ ಹೊಡೆತದಲ್ಲಿ ಕೆಳಮಟ್ಟದಲ್ಲಿ ಶರವೇಗದಲ್ಲಿ ಧಾವಿಸಿದ ಚೆಂಡು ವಿವಾಲ್ಡಿ ಅವರನ್ನು ವಂಚಿಸಿ ಗೋಲುಪೆಟ್ಟಿಗೆಯ ಎಡಮೂಲೆ ಸೇರಿತು. ವಿರಾಮ ಕಳೆದು ಹತ್ತು ನಿಮಿಷ ಆಗುವಷ್ಟರಲ್ಲಿ ನಾಯಕ ಟೊಬಿಯಾಸ್‌ ಹಾಕೆ ಅವರ ಪಾಸ್‌ನಲ್ಲಿ ಟಿಮ್‌ ಹರ್ಟ್ಜ್ ಬ್ರುಕ್ ಗೋಲು ಗಳಿಸಿ ತಂಡದ ಮುನ್ನಡೆ ಉಬ್ಬಿಸಿದರು.

ಅರ್ಜೆಂಟಿನಾ ಈ ಹಿನ್ನಡೆಯಿಂದ ಮೆತ್ತಗಾಗಿತ್ತು. ತುಂಬಾ ಬಿಸಿಲಿನ ವಾತಾವರಣ ಮತ್ತು ಅರ್ಜೆಂಟಿನಾದ ದಾಳಿಯ ಆಟ ಊಹಿಸಿಕೊಂಡಿದ್ದ ನಾವು ಸಂಯಮದಿಂದ ಆಡಬೇಕಾಗಿತ್ತು. ಆ ಯೋಜನೆಯನ್ನು ಕಾರ್ಯಗತಗೊಳಿಸಿದೆವು ಎಂದು ಮುಂಚೂಣಿ ಆಟಗಾರ ಕ್ರಿಸ್ಟೊಫರ್‌ ರುರ್‌ ಹೇಳಿದರು.

ಜರ್ಮನಿ ತಂಡದ ಮೂರನೇ ಗೋಲನ್ನು ವಿಂಡ್‌ಫೆಡರ್‌ ಅವರು ಮತ್ತೊಂದು ಪೆನಾಲ್ಟಿ ಕಾರ್ನರ್‌ ಮೂಲಕ ಗಳಿಸಿದರು. ಪಂದ್ಯ ಮುಗಿಯಲು ಎಂಟು ನಿಮಿಷಗಳಿದ್ದಾಗ ಅರ್ಜೆಂಟಿನಾದ ಮೈಕೊ ಕ್ಯಾಸೆಲ್ಲಾ ಶುತ್‌ ಮೂಲಕ ಸೋಲಿನ ಅಂತರ ತಗ್ಗಿಸಿಕೊಂಡಿತು. ಅವರೂ ಪೆನಾಲ್ಟಿ ಕಾರ್ನರ್‌ ಮೂಲಕ ಸ್ಕೋರ್‌ ಮಾಡಿದರು.

ಒಲಿ ಹಾಕಿ ಸ್ಟೇಡಿಯಮ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಆಟಗಾರರು ಸುಧಾರಿಸಿಕೊಳ್ಳಲು ಕಾಲು ಗಂಟೆಯ ನಡುವಿನ ವಿರಾಮದ ಅವಧಿಯನ್ನು ಪಂದ್ಯದ ಅಧಿಕಾರಿಗಳು ಎರಡು ನಿಮಿಷ ವಿಸ್ತರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT